ಆಧಾರ್ ಲಿಂಕ್ ಕಡ್ಡಾಯ ಡೆಡ್ ಲೈನ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಸುಪ್ರೀಂಕೋರ್ಟ್


Updated:March 13, 2018, 6:04 PM IST
ಆಧಾರ್ ಲಿಂಕ್ ಕಡ್ಡಾಯ ಡೆಡ್ ಲೈನ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಸುಪ್ರೀಂಕೋರ್ಟ್

Updated: March 13, 2018, 6:04 PM IST
-ನ್ಯೂಸ್ 18
ನವದೆಹಲಿ(ಮಾ.13): ವಿವಿಧ ಸರ್ಕಾರಿ ಸೇವೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಲಿಂಕ್ ಕಡ್ಡಾಯ ಗಡುವನ್ನ ಸುಪ್ರೀಂಕೋರ್ಟ್ ವಿಸ್ತರಿಸಿದೆ. ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿರುವ ಆಧಾರ್ ಕಾಯ್ದೆಯ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಗಿಯುವವರೆಗೂ ಆಧಾರ್ ಲಿಂಕ್ ಕಡ್ಡಾಯ ನಿಯಮವನ್ನ ಮುಂದೂಡಲಾಗಿದೆ.

ಕಳೆದ ಡಿಸೆಂಬರ್ 15ರಂದು ಕೇಂದ್ರದ ಮನವಿ ಮೇರೆಗೆ ಆಧಾರ್ ಲಿಂಕ್ ಕಡ್ಡಾಯ ಗಡುವನ್ನ ಇದೇ ಮಾರ್ಚ್ 31ಕ್ಕೆ ನಿಗದಿ ಮಾಡಿ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಈ ಮಧ್ಯೆ, ಕಲ್ಯಾಣ ಕಾರ್ಯಕ್ರಮಗಳು, ಬ್ಯಾಂಕಿಂಗ್, ಮೊಬೈಲ್ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಆದೇಶವನ್ನ ತಡೆಹಿಡಿಯುವಂತೆ ಕೋರಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಬಂದಿದ್ದವು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸುಪ್ರಿಂಕೋರ್ಟ್ ಪಂಚಪೀಠ ಈ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಅಂತಿಮ ಆದೇಶ ಬರುವವರೆಗೂ ಆಧಾರ್ ಲಿಂಕ್ ಕಡ್ಡಾಯ ಗುಡುವನ್ನ ವಿಸ್ತರಿಸಿ ಆದೇಶಿಸಲಾಗಿದೆ.

ಬೇನಾಮಿ ಆಸ್ತಿ ಮತ್ತು ಕಪ್ಪು ಹಣದ ವಹಿವಾಟು ತಡೆಗಾಗಿ ಬ್ಯಾಂಕ್, ಮೊಬೈಲ್ ಮತ್ತು ಇತರೆ ಸೇವೆಗಳಿಗೆ ಆಧಾರ್ ಲಿಂಕ್ ಮಾಡುವ ಆದೇಶ ಜಾರಿ ಮಾಡಿದ್ದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಕೇಂದ್ರದ ಈ ಆದೇಶದ ಬಳಿಕ ಬ್ಯಾಂಕ್​ನಲ್ಲಿ ಯಾವುದೇ ಹೊಸ ಖಾತೆ ತೆರೆದರೂ, ಸಿಮ್ ಖರೀದಿಸಿದರೂ ಆಧಾರ್ ಸಂಖ್ಯೆ ನೀಡಬೇಕಿತ್ತು. ಇದುವರೆಗೆ ಆಧಾರ್ ಸಂಖ್ಯೆ ನೀಡದವರು ಮಾರ್ಚ್ 31ರ ಒಳಗೆ ಆಧಾರ್ ಲಿಂಕ್ ಮಾಡಲು ಆದೇಶಿಸಲಾಗಿತ್ತು.

ಇದರ ಜೊತೆಗೆ ಸಣ್ಣ ಉಳಿತಾಯ ಯೋಜನೆ(ಆಫೀಸ್ ಡೆಪಾಸಿಟ್, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ)ಗಳಿಗೂ ಆಧಾರ್ ಕಡ್ಡಾಯಗೊಳಿಸಿ ಅಕ್ಟೋಬರ್​ನಲ್ಲಿ ಕೇಂದ್ರ ಸರ್ಕಾರ  ಆದೇಶ ಹೊರಡಿಸಿತ್ತು.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ