ಫಾರೂಕ್ ವಿರುದ್ಧದ ಅರ್ಜಿ ವಜಾ; ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ರಾಷ್ಟ್ರದ್ರೋಹವಲ್ಲವೆಂದ ಕೋರ್ಟ್
2019ರಲ್ಲಿ ಕೇಂದ್ರ ಸರ್ಕಾರ 370ನೇ ವಿಧಿಯನ್ನ ತೆಗೆದುಹಾಕಿದ್ದನ್ನು ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಆಕ್ಷೇಪಿಸಿ ಹೇಳಿಕೆ ನೀಡಿದ್ದರು. ಚೀನಾಗೆ ಬೆಂಬಲವಾಗಿ ದೇಶದ್ರೋಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪಿಐಎಲ್ ಸಲ್ಲಿಕೆಯಾಗಿತ್ತು.
ನವದೆಹಲಿ(ಮಾ. 03): ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಇಂದು ಬುಧವಾರ ವಜಾಗೊಳಿಸಿತು. ಜಮ್ಮು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ಅನ್ನು 2019ರಲ್ಲಿ ಕೇಂದ್ರ ಸರ್ಕಾರ ತೆಗೆದುಹಾಕಿತ್ತು. ಆ ಸಂದರ್ಭದಲ್ಲಿ ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದರು. ಇವರ ಈ ಹೇಳಿಕೆ ಹಾಗೂ ಇವರು ಪಾಕಿಸ್ತಾನ ಮತ್ತು ಚೀನಾದಿಂದ ನೆರವು ಪಡೆದು ಭಾರತದ ಚಿತಾವಣೆ ನಡೆಸಿದ್ದಾರೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಈ ದೂರಿನಲ್ಲಿ ವ್ಯಕ್ತವಾಗಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ. ದೂರುದಾರರಿಗೆ 50 ಸಾವಿರ ರೂ ದಂಡವನ್ನೂ ವಿಧಿಸಿದೆ. ಅಲ್ಲದೇ ಸರ್ಕಾರಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದುವುದು ದೇಶದ್ರೋಹ ಎನಿಸುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರಕ್ಕೂ ಕೋರ್ಟ್ ಚಾಟಿ ಬೀಸಿದೆ.
2020, ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಮುಖಂಡರು ಫಾರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಆರೋಪ ಮಾಡಿದ್ದರು. ಸಂವಿಧಾನದ 370ನೇ ವಿಧಿಯನ್ನು ಚೀನಾದ ಬೆಂಬಲದೊಂದಿಗೆ ವಾಪಸ್ ಸೇರಿಸುತ್ತೇವೆ ಎಂದು ಫಾರೂಕ್ ಅಬ್ದುಲ್ಲಾ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದರೆಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಗಂಭೀರ ಆಪಾದನೆ ಮಾಡಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಂಬಿತ್ ಪಾತ್ರ ಇನ್ನೂ ಕೆಲ ಗುರುತರ ಆರೋಪಗಳನ್ನ ಮಾಡಿದ್ದರು. 370ನೇ ವಿಧಿಯನ್ನು ತೆಗೆದುಹಾಕಿದ್ದರಿಂದ ಚೀನಾ ದೇಶಕ್ಕೆ ಇರಿಸುಮುರುಸು ಉಂಟಾಗಿತ್ತು ಎಂದು ಫಾರೂಕ್ ಹೇಳಿದ್ದಾರೆ. ಈ ಮೂಲಕ ಗಡಿಭಾಗದಲ್ಲಿ ಚೀನಾದ ಉದ್ಧಟತನವನ್ನು ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ, “ಅಬ್ದುಲ್ಲಾ ಅವರ ಹೇಳಿಕೆಗಳು ದೇಶದ್ರೋಹವಾಗಿವೆ” ಎಂದು ಕುಟುಕಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆಯಾಗಿತ್ತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ