ತಾಜ್​ಮಹಲ್​ ಉಳಿಸಿ ಅಥವಾ ಉರುಳಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್​ ಖಡಕ್​ ಸೂಚನೆ

news18
Updated:July 11, 2018, 5:32 PM IST
ತಾಜ್​ಮಹಲ್​ ಉಳಿಸಿ ಅಥವಾ ಉರುಳಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್​ ಖಡಕ್​ ಸೂಚನೆ
news18
Updated: July 11, 2018, 5:32 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಜುಲೈ 11):  ವಿಶ್ವದ 7 ಅದ್ಭುತಗಳಲ್ಲಿ ಒಂದಾದ ತಾಜ್​ಮಹಲ್ ಮಾಲಿನ್ಯದ ಕಾರಣದಿಂದ ವರ್ಷದಿಂದ ವರ್ಷಕ್ಕೆ ತನ್ನ ಹೊಳಪು ಕಳೆದುಕೊಂಡು ಪೇಲವವಾಗುತ್ತಿದೆ. ಆದರೂ, ಅದನ್ನು ಸಂರಕ್ಷಣೆ ಮಾಡಬೇಕೆಂಬ ಇಚ್ಛಾಶಕ್ತಿಯೇ ಇಲ್ಲದ ಸರ್ಕಾರ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಸುಪ್ರೀಂಕೋರ್ಟ್​ ಟೀಕಿಸಿದೆ.

ಇಂದು ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್​ನ ನ್ಯಾಯಮೂರ್ತಿ ಎಂ.ಬಿ. ಲೋಕೂರ್​ ಮತ್ತು ದೀಪಕ್​ ಗುಪ್ತ ಅವರಿದ್ದ ನ್ಯಾಯಪೀಠ, ತಾಜ್​ಮಹಲನ್ನು ಸಂರಕ್ಷಿಸಲು ಸಾಧ್ಯವೇ ಇಲ್ಲ ಎಂದಾದರೆ ಅದನ್ನು ನೆಲಸಮಗೊಳಿಸಿ. ಆದರೆ, ಹೀಗೆ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟುಬಿಡಿ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನಿಮ್ಮ ನಿರ್ಲಕ್ಷ್ಯಕ್ಕೆ ದೇಶ ಬೆಲೆ ತೆರಬೇಕಾ?

ಎಫಿಲ್​ ಟವರ್​ಗಿಂತಲೂನಮ್ಮ ದೇಶದ ತಾಜ್​ ಮಹಲ್​ ಅತ್ಯಂತ ಆಕರ್ಷಕವಾಗಿದೆ. ಇದರಿಂದ ನಮ್ಮ ದೇಶದ ವಿದೇಶಿ ವಿನಿಮಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆಯಿದೆ. ಆದರೆ, ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿಯಿಲ್ಲ. ಟಿವಿ ಟವರ್​ನಂತಿರುವ ಎಫಿಲ್​ ಟವರನ್ನು ನೋಡಲು 8 ಕೋಟಿ ಜನ ಹೋಗುತ್ತಾರೆ. ಆದರೆ, ಸುಂದರವಾದ ಮೊಘಲ್​ ವಿನ್ಯಾಸದಲ್ಲಿರುವ ತಾಜ್​ ಮಹಲ್​ ಅದ್ಭುತವಾದ ಸ್ಮಾರಕ. ಅದನ್ನು ಸಂರಕ್ಷಿಸಿ, ಉಳಿಸಿದರೆ ದೇಶದ ವಿದೇಶಿ ವಿನಿಮಯ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದ ದೇಶಕ್ಕೆ ಎಷ್ಟು ನಷ್ಟವಾಗುತ್ತಿದೆ ಎಂಬುದರ ಅರಿವು ನಿಮಗಿದೆಯೇ? ಎಂದು ನ್ಯಾಯಪೀಠ ಕೇಂದ್ರವನ್ನು ಪ್ರಶ್ನಿಸಿದೆ.

ತಾಜ್​ ಮಹಲ್​ನ ಉಸ್ತುವಾರಿ ವಹಿಸಿಕೊಂಡಿರುವ ಆಡಳಿತ ಮಂಡಳಿ ಮಾಲಿನ್ಯದಿಂದ ತಾಜ್​ ಮಹಲನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದೆ ಜಡತ್ವದಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಕೋರ್ಟ್​ ಆಕ್ಷೇಪಿಸಿದೆ. ತಾಜ್​ ಮಹಲ್​ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ದಾಖಲಾತಿಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಕೋರ್ಟ್​ನ ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಆದಷ್ಟು ಬೇಗ ವರದಿ ನೀಡಿ:
Loading...

ಆದಷ್ಟು ಶೀಘ್ರದಲ್ಲಿ ದೇಶದ ಅತ್ಯಂತ ಹಳೆಯ ಮತ್ತು ಹೆಮ್ಮೆಯ ಸ್ಮಾರಕವಾಗಿರುವ ತಾಜ್​ಮಹಲ್​ ರಕ್ಷಣೆಗೆ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳು ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶಿಸಿದೆ. ತಾಜ್​ಮಹಲ್​ನ ಸಂರಕ್ಷಣಾ ಕಾರ್ಯದ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದಿರುವ ಬಗ್ಗೆ ಆಕ್ಷೇಪವೆತ್ತಿರುವ ಕೋರ್ಟ್​ ಈ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.

ಕ್ರಮ ಕೈಗೊಳ್ಳುವುದಾಗಿ ಭರವಸೆ:

ಇದಕ್ಕೆ ಪ್ರತಿಯಾಗಿ, ಕಾನ್ಪುರದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ತಾಜ್​ ಮಹಲ್​ನ ಸುತ್ತಲಿನ ವಾಯು ಮಾಲಿನ್ಯ ಪ್ರಮಾಣದ ಮಟ್ಟವನ್ನು ಪರಿಶೀಲಿಸುತ್ತಿದೆ. ಆ ವರದಿಯನ್ನು ಇನ್ನು 4 ತಿಂಗಳೊಳಗೆ ಕೋರ್ಟ್​ಗೆ ಸಲ್ಲಿಸಲಾಗುವುದು. ಯಾವ ಕಾರಣದಿಂದ ಮಾಲಿನ್ಯ ಹೆಚ್ಚುತ್ತಿದೆ, ಅದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಪತ್ತೆಹಚ್ಚಲು ವಿಶೇಷ ಸಮಿತಿಯೊಂದನ್ನು ರಚಿಸಲಾಗುತ್ತಿದೆ. ಎಂದು ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳಿಗೆ ತಿಳಿಸಿದೆ.

ಸುತ್ತಲಿನ ಪರಿಸರ ಮಾಲಿನ್ಯದಿಂದ ತಾಜ್​ಮಹಲ್​ ಸೌಂದರ್ಯ ಕಳೆಗುಂದುತ್ತಿದೆ. ಅಮೃತ ಶಿಲೆಯೂ ಹೊಳಪು ಕಳೆದುಕೊಳ್ಳುತ್ತಿದೆ ಎಂದು ಪರಿಸರವಾದಿ ಎಂ.ಸಿ. ಮೆಹ್ತಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಜುಲೈ 31ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...