ನವ ದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಮತ್ತೆ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ಕರ್ನಾಟಕ ಮೂಲದವರಾದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹಿಂದೆ ಕಳುಹಿಸಿದ್ದ ಐದು ಹೆಸರುಗಳು ಇನ್ನೂ ಕೇಂದ್ರದ ಬಳಿಯೇ ಅನುಮೋದನೆಗೆ ಬಾಕಿ ಇದ್ದು, ಈಗ ನೂತನವಾಗಿ ಶಿಫಾರಸು ಮಾಡಿರುವ ಎರಡು ಹೆಸರುಗಳಿಗಿಂತ ಈ ಹಿಂದೆ ಬಾಕಿ ಇದ್ದ ಹೆಸರುಗಳನ್ನು ಮೊದಲು ಅನುಮೋದನೆ ಮಾಡಿ ಅಧಿಸೂಚನೆ ಹೊರಡಿಸಬಹುದು ಎಂದು ಸುಪ್ರೀಂ ಕೊಲಿಜಿಯಂ ಹೇಳಿದೆ.
ಇದನ್ನೂ ಓದಿ: Pegasus spyware: ಏನಿದು ಪೆಗಾಸಸ್ ಸ್ಪೈವೇರ್ ವಿವಾದ? ಸುಪ್ರೀಂ ಕೋರ್ಟ್ ಪ್ಯಾನಲ್ ವರದಿ ಹೇಳಿದ್ದೇನು?
ಅನುಮೋದನೆಗೆ ಬಾಕಿ ಇದೆ ಹೆಸರು!
ಸುಪ್ರೀಂ ಕೋರ್ಟ್ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಕೆಎಂ ಜೋಸೆಫ್, ಎಂಆರ್ ಶಾ, ಅಜಯ್ ರಸ್ತೋಗಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಕೊಲಿಜಿಯಂ ಈ ಹಿಂದೆ ಕಳೆದ ಡಿಸೆಂಬರ್ 13 ರಂದು ಐವರು ನ್ಯಾಯಮೂರ್ತಿಗಳ ಪದೋನ್ನತಿಗಾಗಿ ಹೆಸರು ಶಿಫಾರಸು ಮಾಡಿತ್ತು. ಹೀಗಾಗಿ ಆ ಪಟ್ಟಿಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ. ಜೊತೆಗೆ ಈ ಎರಡೂ ಪಟ್ಟಿಗಳನ್ನು ಪ್ರತ್ಯೇಕವಾಗಿ ನೋಟಿಫೈ ಮಾಡುವಂತೆ ಶಿಫಾರಸಿನಲ್ಲಿ ಉಲ್ಲೇಖ ಮಾಡಲಾಗಿದೆ.
ಸುಪ್ರೀಂಕೋರ್ಟ್‌ನ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ಕೊಲಿಜಿಯಂ ಶಿಫಾರಸುಗಳ ಪ್ರಕಾರ, ನ್ಯಾ. ರಾಜೇಶ್ ಬಿಂದಾಲ್ ಅವರ ಹೆಸರನ್ನು ಎಲ್ಲಾ ಆರು ಮಂದಿ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದ್ದರು. ಆದರೆ ಕರ್ನಾಟಕ ಮೂಲದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪದೋನ್ನತಿಗೆ ನ್ಯಾ ಕೆಎಂ ಜೋಸೆಫ್ ಅವರು ಸಹಮತ ಸೂಚಿಸಲಿಲ್ಲ. ಮುಂದಿನ ಹಂತದಲ್ಲಿ ಅವರ ಹೆಸರು ಪರಿಗಣಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Umesh Reddy: ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲುಶಿಕ್ಷೆಗೆ ತಡೆ! ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಅಲ್ಲದೇ, ಅರ್ಹ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರ ಅರ್ಹತೆ, ಸಮಗ್ರತೆ ಮತ್ತು ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಮೌಲ್ಯ ಮಾಪನ ಮಾಡಿದ ನಂತರ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಈ ಇಬ್ಬರೂ ನ್ಯಾಯಾಧೀಶರು ಹೆಚ್ಚು ಅರ್ಹರು ಮತ್ತು ಎಲ್ಲಾ ರೀತಿಯಲ್ಲೂ ಸೂಕ್ತರು ಎಂದು ಕೊಲಿಜಿಯಂ ಹೇಳಿದೆ.
ಅರವಿಂದ್ ಕುಮಾರ್ ಅವರ ಬಗ್ಗೆ ಏನ್ ಗೊತ್ತು?
ಅಂದ ಹಾಗೆ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಆಗಿ 2009ರ ಜೂನ್ ತಿಂಗಳಲ್ಲಿ ನೇಮಕಗೊಂಡಿದ್ದರು. ನಂತರ 2012ರ ಡಿಸೆಂಬರ್ ತಿಂಗಳಲ್ಲಿ ಖಾಯಂ ಜಡ್ಜ್ ಆಗಿ ಪದೋನ್ನತಿ ಪಡೆದಿದ್ದರು. ಬಳಿಕ 2021ರ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಕುಮಾರ್ ನೇಮಕಗೊಂಡಿದ್ದರು.
ಕೊಲಿಜಿಯಂ ಪರಿಗಣಿಸಿದ ಅಂಶಗಳು
ಮೇಲಿನ ಇಬ್ಬರು ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವಾಗ ಕೊಲಿಜಿಯಂ, ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳಲ್ಲಿನ ಹಿರಿಯ ನ್ಯಾಯಾಧೀಶರ ಹಿರಿತನ ಮತ್ತು ಇತರ ಹೈಕೋರ್ಟ್ ನ್ಯಾಯಾಧೀಶರ ಒಟ್ಟಾರೆ ಹಿರಿತನ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಹೀಗೆ ಪರಿಗಣಿಸಲಾದ ಅಂಶಗಳ ಪೈಕಿ, ನ್ಯಾಯಾಧೀಶರ ಅರ್ಹತೆ, ಕಾರ್ಯಕ್ಷಮತೆ ಮತ್ತು ಸಮಗ್ರತೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸದ ಅಥವಾ ಅಸಮರ್ಪಕವಾಗಿ ಪ್ರತಿನಿಧಿಸುವ ಉಚ್ಚ ನ್ಯಾಯಾಲಯಗಳ ಪ್ರಾತಿನಿಧ್ಯದಿಂದ ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆ, ಸುಪ್ರೀಂ ಕೋರ್ಟ್‌ನಲ್ಲಿ ವ್ಯಕ್ತಿಗಳನ್ನು ನೇಮಿಸುವುದು ಸಮಾಜದ ಅಂಚಿನಲ್ಲಿರುವ ಮತ್ತು ಹಿಂದುಳಿದ ವಿಭಾಗಗಳು, ಲಿಂಗ ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ ಮುಂತಾದ ಅಂಶಗಳನ್ನು ಪರಿಗಣಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ