ಕೇಂದ್ರವನ್ನು ವಿಚಾರಣೆಗೊಳಪಡಿಸದೆ ‘ಪೌರತ್ವ ತಿದ್ದುಪಡಿ ಕಾಯ್ದೆ’ಗೆ ತಡೆ ನೀಡಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಕೇಂದ್ರ ಸರ್ಕಾರದ ವಿಚಾರಣೆ ನಡೆಸದೆ ಯಾವುದೇ ಕಾರಣಕ್ಕೂ ಈ ನೂತನ ಕಾನೂನಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ.

MAshok Kumar | news18-kannada
Updated:January 22, 2020, 3:16 PM IST
ಕೇಂದ್ರವನ್ನು ವಿಚಾರಣೆಗೊಳಪಡಿಸದೆ ‘ಪೌರತ್ವ ತಿದ್ದುಪಡಿ ಕಾಯ್ದೆ’ಗೆ ತಡೆ ನೀಡಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ
ಸುಪ್ರೀಂ ಕೋರ್ಟ್​​
  • Share this:
ನವ ದೆಹಲಿ (ಜನವರಿ 22); ಕೇಂದ್ರ ಸರ್ಕಾರವನ್ನು ವಿಚಾರಣೆ ನಡೆಸದೆ ನೂತನವಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಯಾವುದೇ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟಪಡಿಸಿದೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಅಲ್ಲದೆ, ಪೌರತ್ವದ ಕುರಿತು ಮೂಲ ದಾಖಲೆ ಇಲ್ಲದ ಭಾರತೀಯರನ್ನೂ ವಿದೇಶಿಯರಂತೆ ಪರಿಗಣಿಸುತ್ತದೆ. ಇದರಿಂದ ದೇಶದ ಮೂಲ ನಿವಾಸಿಗಳಾದ ಬುಡಕಟ್ಟು ಜನ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಇಡೀ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿವೆ.

ಅಲ್ಲದೆ, ಈ ಕಾನೂನನ್ನು ಅಸಂವಿಧಾನಿಕ ಎಂದು ಪರಿಗಣಿಸಿ ತಡೆ ನೀಡಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಜೈರಾಮ್ ರಮೇಶ್ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ನೂರಾರು ಅರ್ಜಿಗಳನ್ನು ಸುಪ್ರೀಂನಲ್ಲಿ ದಾಖಲಿಸಲಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದಲ್ಲಿ ಇಂದು ಈ ಅರ್ಜಿಗಳ ವಿಚಾರಣೆ ನಡೆಸಲಾಗಿತ್ತು. ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹಾಜರಾಗಿದ್ದರು. ಈ ವೇಳೆ ತಮ್ಮ ವಾದ ಮಂಡಿಸಿದ ಅವರು, “ಸಿಎಎ ಕುರಿತು 144 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪೈಕಿ ಸರ್ಕಾರಕ್ಕೆ 60 ಮನವಿಗಳ ಪ್ರತಿಗಳನ್ನು ನೀಡಲಾಗಿದೆ. ಇದಕ್ಕೆ ಸ್ಪಂದಿಸಲು ಸಮಯ ಬೇಕು” ಎಂದು ಮನವಿ ಮಾಡಿಕೊಂಡರು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ‘ಸಿಎಎ’ ಕಾರ್ಯಾಚರಣೆಯನ್ನು ತಡೆಹಿಡಿಯಬೇಕು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಕೆಲಸಗಳನ್ನು ಮುಂದೂಡಬೇಕೆಂದು ನ್ಯಾಯಪೀಠವನ್ನು ಒತ್ತಾಯಿಸಿದರು.

ಆದರೆ, ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, “ಸಿಎಎ ಕುರಿತು ಕೇಂದ್ರದ ವಿಚಾರಣೆ ನಡೆಸದೆ ಯಾವುದೇ ಕಾರಣಕ್ಕೂ ಈ ನೂತನ ಕಾನೂನಿಗೆ ತಡೆ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದೆ. ಅಲ್ಲದೆ, ಈ ಕುರಿತು ಅರ್ಜಿಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ : ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದ ಅಮೆರಿಕಾ ಮೇಲ್ಮನೆ​: ಶೀಘ್ರದಲ್ಲೇ ಸಾಕ್ಷಿಗಳ ವಿಚಾರಣೆ
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ