‘ಮೀಸಲಾತಿ ಶೇ. 50 ಮೀರುವಂತಿಲ್ಲ’ - ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ರದ್ದು ಮಾಡಿದ ಸುಪ್ರೀಂ

ಮೀಸಲಾತಿ ಶೇ. 50ಕ್ಕೆ ಮಿತಿಗೊಳ್ಳಬೇಕೆಂದು 1992ರಲ್ಲಿ ಸಾಂವಿಧಾನಿಕ ಸುಪ್ರೀಂ ನ್ಯಾಯಪೀಠ ನೀಡಿದ್ದ ತೀರ್ಪನ್ನು ಆಧಾರವಾಗಿಟ್ಟುಕೊಂಡು ಇವತ್ತು ತೀರ್ಪು ನೀಡಿರುವ ನ್ಯಾಯಪೀಠ, ಮಹಾರಾಷ್ಟ್ರ ಸರ್ಕಾರದ ಮರಾಠ ಮೀಸಲಾತಿಯನ್ನು ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್​.

ಸುಪ್ರೀಂ ಕೋರ್ಟ್​.

 • News18
 • Last Updated :
 • Share this:
  ನವದೆಹಲಿ(ಮೇ 05): ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಮರಾಠ ಸಮುದಾಯದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಇಂದು ಬುಧವಾರ ರದ್ದುಗೊಳಿಸುವ ಮಹತ್ವದ ತೀರ್ಪು ನೀಡಿದೆ. ಒಟ್ಟಾರೆ ಮೀಸಲಾತಿ ಶೇ. 50ಕ್ಕಿಂತ ಹೆಚ್ಚು ಇರುವಂತಿಲ್ಲ. ಮರಾಠರಿಗೆ ಮೀಸಲಾತಿ ಕೊಟ್ಟರೆ ಮೀಸಲಾತಿ ಪ್ರಮಾಣ ಶೇ. 50 ಮೀರುತ್ತದೆ. ಇದರಿಂದ ಸಮಾನತೆ ತತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಐವರು ಸದಸ್ಯರ ಸಾಂವಿಧಾನಿಕ ಸುಪ್ರೀಂ ನ್ಯಾಯಪೀಠ ಹೇಳಿದೆ. ನ್ಯಾ| ಅಶೋಕ್ ಭೂಷಣ್ ನೇತೃತ್ವದ ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದಾರೆ. 1992ರಲ್ಲಿ ಮಂಡಲ್ ಆಯೋಗದ ಪ್ರಕರಣ ಎಂದು ಖ್ಯಾತವಾಗಿದ್ದ ಇಂದ್ರಾ ಸಾಹನಿ ಪ್ರಕರಣದಲ್ಲಿ ಆಗಿನ 9 ಸದಸ್ಯರ ಸಾಂವಿಧಾನಿಕ ಸುಪ್ರೀಂ ನ್ಯಾಯಪೀಠ ಮೀಸಲಾತಿ ಶೇ. 50ಕ್ಕಿಂತ ಹೆಚ್ಚು ಇರಬಾರದು ಎಂದು ಮಹತ್ವದ ತೀರ್ಪು ನೀಡಿತ್ತು. ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಇವತ್ತು ಸರ್ವೋಚ್ಚ ನ್ಯಾಯಾಲಯವು ಮರಾಠ ಮೀಸಲಾತಿಯ ಸಿಂಧುತ್ವವನ್ನು ಪ್ರಶ್ನಿಸಿ ರದ್ದುಗೊಳಿಸಿದೆ.

  2018ರಲ್ಲಿ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಕಾಯ್ದೆ (SEBC Act) ಜಾರಿಗೆ ತಂದಿತು. ಅದರಂತೆ, ಮಹಾರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗಿಗಳಲ್ಲಿ ಮರಾಠ ಸಮುದಾಯಕ್ಕೆ ಶೇ. 16ರಷ್ಟು ಮೀಸಲಾತಿ ಒದಗಿಸಿತ್ತು. ಬಾಂಬೆ ಹೈಕೋರ್ಟ್ ಕೂಡ ಈ ಕಾಯ್ದೆಯ ಸಿಂಧುತ್ವವನ್ನ ಎತ್ತಿ ಹಿಡಿಯಿತಾದರೂ ಮರಾಠ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 12 ಮತ್ತು ಸರ್ಕಾರಿ ಉದ್ಯೋಗಿಗಳಲ್ಲಿ ಶೇ. 13 ಮೀಸಲಾತಿ ಮಾತ್ರ ಸಾಕು ಎಂದು ತೀರ್ಪು ಕೊಟ್ಟಿತು.

  ಇದನ್ನೂ ಓದಿ: Coronavirus India Updates: ದೇಶದಲ್ಲಿ ಮತ್ತೆ ಒಂದೇ ದಿನ ಸುಮಾರು 4 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ!

  ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಮತ್ತು ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾದವು. 2019ರಲ್ಲಿ ಸುಪ್ರೀಂ ಕೋರ್ಟ್ ಈ ಕಾನೂನು ಜಾರಿಗೆ ತಡೆ ತಂದಿತು. 2021ರ ಮಾರ್ಚ್ ತಿಂಗಳಲ್ಲಿ ಐವರು ಸದಸ್ಯರ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿತು. ಇದೀಗ 1992ರಲ್ಲಿ ಮೀಸಲಾತಿ ಶೇ. 50ಕ್ಕೆ ಮಿತಿಯಾಗಬೇಕೆಂದು ನೀಡಿದ್ದ ತೀರ್ಪನ್ನು ಮಾನದಂಡವಾಗಿರಿಸಿಕೊಂಡು ಇವತ್ತು ಸರ್ವೋಚ್ಚ ನ್ಯಾಯಪೀಠ ತೀರ್ಪು ನೀಡಿದೆ. ಇದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ವಿವಿಧ ಸಮುದಾಯಗಳಿಗೆ ನೀಡಿರುವ ಅಥವಾ ನೀಡ ಮೀಸಲಾತಿ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ.
  Published by:Vijayasarthy SN
  First published: