ನವದೆಹಲಿ, ಏ. 21: 'ಒತ್ತುವರಿ ತೆರವು ಕಾರ್ಯಾಚರಣೆ' ಹೆಸರಿನಲ್ಲಿ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿ ಇರಿಸಿಕೊಂಡು ಬಿಜೆಪಿ (BJP) ಆಡಳಿತ ಇರುವ ದೆಹಲಿಯ ನಾರ್ತ್ ಮುನ್ಸಿಪಲ್ ಕಾರ್ಪೊರೇಶನ್ (Delhi North Municipal Corporation) ದೆಹಲಿಯ ಜಹಾಂಗೀರಪುರಿ (Jahangirpuri) ಮುಖ್ಯರಸ್ತೆಯಲ್ಲಿ ನಡೆಸುತ್ತಿದ್ದ ಬುಲ್ಡೋಜರ್ ಡ್ರೈವ್ ಗೆ (Bulldozer Drive), ಅಂದರೆ ಬುಲ್ಡೋಜರ್ ಗಳಲ್ಲಿ ಬಡವರ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಮಾಡುವ ವಿಧ್ವಂಸಕ ಕೃತ್ಯಕ್ಕೆ ಸರ್ವೋಚ್ಚ ನ್ಯಾಯಾಲಯ (Supreme court) ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟ್ ನಿನ್ನೆ ಕೂಡ ಈ ದುರುದ್ದೇಶಪೂರಿತ ಬುಲ್ಡೋಜರ್ ಡ್ರೈವ್ ಗೆ ತಡೆ (Stay) ನೀಡಿತ್ತು.
5 ದಿನದಿಂದ ಹೊತ್ತಿ ಉರಿಯುತ್ತಿರುವ ಜಹಾಂಗೀರಪುರಿ
ಕಳೆದ ಶನಿವಾರ ಹನುಮ ಜಯಂತಿಯ ವೇಳೆ ಜಹಾಂಗೀರಪುರಿಯಲ್ಲಿ ಹೊತ್ತಿಕೊಂಡ ಕೋಮು ದಳ್ಳುರಿ ಇನ್ನೂ ಆರಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೂರಾರು ಜನರನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ವಶಪಡಿಸಿಕೊಂಡ ಕೆಲವರು ಜಹಾಂಗೀರಪುರಿ ಮುಖ್ಯರಸ್ತೆಯಲ್ಲಿ ಮನೆ, ಅಂಗಡಿ ಮಾಡಿಕೊಂಡಿದ್ದವರು. ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡಿದ್ದವರು. ಹಾಗಾಗಿ ಅವರನ್ನು ಅಲ್ಲಿಂದ ತೆರವುಗೊಳಿಸಿ ಪಾಠ ಕಲಿಸಬೇಕು ಎಂದು ದೆಹಲಿ ಉತ್ತರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಏಕಾಏಕಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲೂ ಎಂಪಿ, ಗುಜರಾತ್ ಮಾಡೆಲ್
ನಿರ್ದಿಷ್ಟ ಸಮುದಾಯದವರ ಮನೆಗಳನ್ನು ಬುಲ್ಡೋಜರ್ ಗಳಿಂದ ನೆಲಸಮ ಮಾಡುವ ಉತ್ತರ ಪ್ರದೇಶ ಮತ್ತು ಗುಜರಾತ್ ಮಾಡೆಲ್ ಈಗ ದೆಹಲಿಯಲ್ಲೂ ಕಂಡುಬರುತ್ತಿದೆ. ನಿನ್ನೆ ದೆಹಲಿ ಉತ್ತರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜಹಾಂಗೀರಪುರಿ ಬಡವರ ಮನೆ ಮೇಲೆ ದಿಢೀರನೆ ಒತ್ತುವರಿ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಬುಲ್ಡೋಜರ್ ಹರಿಸಲೊರಟಿತು.
ಇದನ್ನೂ ಓದಿ: PSI Exam Scam: ಇಂದು 50 ಅಭ್ಯರ್ಥಿಗಳ ವಿಚಾರಣೆ; ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ
ಇದಕ್ಕೂ ಮುನ್ನ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಬುಲ್ಡೋಜರ್ ಡ್ರೈವ್ ಆಗಬೇಕೆಂದು ಒತ್ತಾಯಿಸಿದ್ದರು. ದೆಹಲಿ ಉತ್ತರ ಪಾಲಿಕೆಯ ಆಯುಕ್ತರು ದೆಹಲಿ ಪೊಲೀಸರಿಗೆ ಪತ್ರ ಬರೆದು ಬುಲ್ಡೋಜರ್ ಕಾರ್ಯಾಚರಣೆಗೆ ರಕ್ಷಣೆ ನೀಡಬೇಕೆಂದು ಕೇಳಿದ್ದರು. ಅದಾದ ಮೇಲೆ ಜಹಾಂಗೀರಪುರಿಯಲ್ಲಿ ನಿರ್ದಿಷ್ಟ ಸಮುದಾಯದವರ ಅಂಗಡಿ, ಮನೆ, ಮುಂಗಟ್ಟುಗಳು ನೆಲಸಮವಾದವು.
ತಡೆ ನೀಡಿದ ಸುಪ್ರೀಂ ಕೋರ್ಟ್
ಈ ನಡುವೆ ಕೇಂದ್ರದಲ್ಲಿ ಮತ್ತು ದೆಹಲಿ ಉತ್ತರ ಪಾಲಿಕೆಯಲ್ಲಿ ಅಲ್ಪಸಂಖ್ಯಾತರನ್ನು ಗುರುಯಾಗಿಸಿಕೊಂಡು ದುರುದ್ದೇಶಪೂರ್ವಕವಾದ ಒತ್ತುವರಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಯಿತು. ಬಡವರ ದನಿಗೆ ಓಗೊಟ್ಟ ಸುಪ್ರೀಂ ಕೋರ್ಟ್ ನಿನ್ನೆ ಬುಲ್ಡೋಜರ್ ಡ್ರೈವ್ ಗೆ ತಡೆ ನೀಡಿತ್ತು. ಇಂದು ಸುದೀರ್ಘ ವಿಚಾರಣೆ ನಡೆಸಿ ಮತ್ತೊಮ್ಮೆ ತಡೆ ನೀಡಿದೆ.
ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ಗೆ ತರಾಟೆ
ನಿನ್ನೆ ತಡೆಯಾಜ್ಞೆ ನೀಡಿದ ಮೇಲೂ ಎರಡು ಗಂಟೆ ಬುಲ್ಡೋಜರ್ ಡ್ರೈವ್ ಮಾಡಿದ್ದರ ಬಗ್ಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಕಾನೂನು ಜಾರಿಯಾಗುವಂತಹ ಆದೇಶ ನೀಡಿ
ಇದೇ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುಜರಾತ್, ಮಧ್ಯಪ್ರದೇಶ ಮತ್ತಿತರರ ಕಡೆ ನಡೆಸಲಾದ ಬುಲ್ಡೋಜರ್ ಡ್ರೈವ್ ಗಳ ಬಗ್ಗೆ ಕೂಡ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡರು. ನ್ಯಾಯಮೂರ್ತಿಗಳು 'ಸುಪ್ರೀಂ ಕೋರ್ಟಿನಿಂದ ಏನನ್ನು ನಿರೀಕ್ಷಿಸುತ್ತೀರಿ?' ಎಂದು ಕೇಳಿದಾಗ 'ದೇಶದಲ್ಲಿ ಕಾನೂನು ಜಾರಿಯಾಗುವಂತಹ ಆದೇಶ ನೀಡಿ. ಬುಲ್ಡೋಜರ್ ದಾಳಿ ಕಾನೂನು ಬಾಹಿರವಾಗಿದೆ. ತಕ್ಷಣವೇ ಬುಲ್ಡೋಜರ್ ಡ್ರೈವ್ ನಿಲ್ಲಿಸಲು ಸೂಚಿಸಿ' ಎಂದು ಕೇಳಿಕೊಂಡರು.
ಸರ್ಕಾರದ ನಡೆ ಸಮರ್ಥಿಸಿಕೊಂಡ ಮೆಹ್ತಾ
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಜನವರಿ 19, ಫೆಬ್ರವರಿ 2 ಸೇರಿದಂತೆ ಐದು ಬಾರಿ ಒತ್ತುವರಿ ತೆರವಿನ ಬಗ್ಗೆ ನೊಟೀಸ್ ನೀಡಲಾಗಿದೆ. ನೋಟೀಸ್ ನೀಡಿಯೇ ಬುಲ್ಡೋಜರ್ ಡ್ರೈವ್ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ 88 ಹಿಂದೂ, 22 ಮುಸ್ಲಿಮರು ಸಂತ್ರಸ್ತರಾಗಿದ್ದಾರೆ. ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡ ಆರೋಪ ಸುಳ್ಳು' ಎಂದು ವಾದ ಮಂಡಿಸಿದರು.
ಇದನ್ನೂ ಓದಿ: Shot Dead: ಗುಂಡಿಟ್ಟು BJP ನಾಯಕನ ಕೊಲೆ, ತನ್ನದೇ ಮನೆಮುಂದೆ ಸಾವು
ಎರಡೂ ವಾದ ಆಲಿಸಿದ ಬಳಿಕ ಜಹಾಂಗೀರ್ಪುರಿಯಲ್ಲಿ ಯಥಾಸ್ಥಿತಿ ಮುಂದುವರೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಎಲ್ಲಾ ಅರ್ಜಿದಾರರಿ ನೋಟಿಸ್ ಜಾರಿ ಮಾಡಿ ಎರಡು ವಾರಗಳ ಬಳಿಕ ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ