ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿಮರ್ಶೆಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ಇಂದು ಮುಚ್ಚಿದ ಲಗೋಟೆಯಲ್ಲಿ ವರದಿ ಸಲ್ಲಿಸಿದೆ. ಈ ಪ್ರಕರಣದಲ್ಲಿ 85 ಕೃಷಿ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಸಮಿತಿ ಹೇಳಿದೆ. ಜೊತೆಗೆ ಕೃಷಿ ಸಂಘಟನೆಗಳೊಂದಿಗೆ ಸಭೆಯ ಬಳಿಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ವಿಷಯವಾಗಿ ವಿಚಾರವಣೆ ಹಾಗೂ ಚರ್ಚೆ ನಡೆಸುವವರೆಗೂ ವರದಿ ಬಹಿರಂಗಗೊಳಿಸುವಂತಿಲ್ಲ. ಹೋಳಿ ರಜೆಯ ಬಳಿಕ ಸುಪ್ರೀಂಕೋರ್ಟ್ ಮರುಆರಂಭವಾದ ಬಳಿಕ ಈ ಪ್ರಕರಣದ ವಿಚಾರಣೆ ಏಪ್ರಿಲ್ 5ರ ನಂತರ ವಿಚಾರಣೆಗೆ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಮುಂದಿನ ಎರಡು ತಿಂಗಳುಗಳ ಕಾಲ ಜಾರಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಜನವರಿ 12ರಂದು ಈ ಮೂರು ಕಾಯ್ದೆಗಳ ಜಾರಿಗೆ ತಡೆ ನೀಡಿತ್ತು. ಬಳಿಕ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವಂತೆ ಹೇಳಿ, ಈ ಸಮಿತಿ ಎರಡು ತಿಂಗಳೊಳಗೆ ವರದಿ ನೀಡುವಂತೆ ನಿರ್ದೇಶನ ನೀಡಿತ್ತು.
ಡಾ. ಅಶೋಕ್ ಗುಲಾಟಿ, ಡಾ. ಪ್ರಮೋದ್ ಜೋಶಿ, ಮತ್ತು ಶೆಟ್ಕರಿ ಸಂಗಾತಾನದ ಅನಿಲ್ ಘನ್ವಾತ್ ಅವರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ಕೃಷಿ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ, ವರದಿ ಸಲ್ಲಿಸಿದೆ. ಸಮಿತಿ ರಚನೆಯಾದ ಎರಡು ದಿನಗಳ ಬಳಿಕ ಸಮಿತಿಗೆ ನಾಲ್ಕನೇ ಸದಸ್ಯರಾಗಿ ಭೂಪಿಂದರ್ ಸಿಂಗ್ ಮನ್ ಅವರು ಸೇರ್ಪಡೆಯಾದರು.
ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಕಳೆದ ವರ್ಷದ ನವೆಂಬರ್ನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಪಂಜಾಬ್ ಹಾಗೂ ಹರಿಯಾಣದ ರೈತರು ಅಧಿಕ ಪ್ರಮಾಣದಲ್ಲಿ ಇದ್ದಾರೆ.
ಇದನ್ನು ಓದಿ: ಏ.1ರಿಂದ 45 ವರ್ಷ ಮೇಲ್ಪಟ್ಟವರೂ ಕೊರೋನಾ ಲಸಿಕೆ ಪಡೆಯಬಹುದು, ದಿನಕ್ಕೆ 50 ಲಕ್ಷ ಗುರಿ ಹಾಕಿಕೊಂಡ ಸರ್ಕಾರ
ನೂತನ ಕೃಷಿ ಕಾನೂನುಗಳು ಕಾರ್ಪೊರೇಟ್ ಪರವಾಗಿವೆ, ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸಲಿವೆ ಮತ್ತು ರೈತರು ಬೆಲೆ ನಿರ್ಧಾರದ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಪ್ರತಿಭಟನಾನಿರತ ರೈತರು ಹೇಳುತ್ತಿದ್ದಾರೆ. ಆದಾಗ್ಯೂ, ಈ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಅಗತ್ಯವಿರುವ ಸುಧಾರಣೆಗಳನ್ನು ತರಲು ಮತ್ತು ಅಂತಿಮವಾಗಿ ರೈತರಿಗೆ ಸಹಾಯ ಮಾಡಲಿವೆ ಎಂದು ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ