news18-kannada Updated:February 14, 2021, 5:40 PM IST
ಬಂಧಿತ ವಿದ್ಯಾರ್ಥಿನಿ ದಿಶಾ ರವಿ.
ಬೆಂಗಳೂರು (ಫೆಬ್ರವರಿ 14); ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಇಡೀ ದೇಶದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ತಲೆ ಕೆಡಿಕೊಳ್ಳದಿದ್ದರೂ, ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸೆಲೆಬ್ರಿಟಿಗಳು ಈ ಹೋರಾಟದ ಪರವಾಗಿ ಈಗಾಗಲೇ ಧ್ವನಿ ಎತ್ತಿದ್ದಾರೆ. ಅಮೆರಿಕ ಪಾಪ್ ಹಾಡುಗಾರ್ತಿ ರೆಹಾನಾ ಮತ್ತು ವಿಶ್ವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಭಾರತದ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ, ದೆಹಲಿ ಪೊಲೀಸರು ರೈತ ಪ್ರತಿಭಟನೆ ಕುರಿತು ಜಾಗತಿಕ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ‘ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದರು. ಇದೀಗ ಗ್ರೇಟಾ ಥನ್ಬರ್ಗ್ ಅವರನ್ನು ಬೆಂಬಲಿಸಿದ್ದ ಕಾರಣಕ್ಕೆ ಬೆಂಗಳೂರಿನ 21 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದಿಶಾ ರವಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ದಿಶಾ ರವಿ ಅವರು ವಿವಾದಿತ ಟೂಲ್ಕಿಟ್ ಅನ್ನು ಸಂಪಾದಿಸಿ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಜನವರಿ 26 ರ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಈ ಟೂಲ್ಕಿಟ್ನ ಪಾತ್ರವಿದೆ ಎಂದು ಪೊಲೀಸರು ಆಪಾದಿಸಿದ್ದಾರೆ. ವಿಶೇಷ ಸಿಪಿ (ಅಪರಾಧ ಶಾಖೆ) ಪ್ರವೀರ್ ರಂಜನ್, ಪ್ರಾಥಮಿಕ ವಿಚಾರಣೆಯಲ್ಲಿ ವಿವಾದಿತ ಟೂಲ್ಕಿಟ್ ಅನ್ನು "ಖಲಿಸ್ತಾನಿ ಪರ ಸಂಸ್ಥೆ" ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ರಚಿಸಿದೆ ಎಂದು ಸೂಚಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : CAA: ಸಿಎಎ ಕಾನೂನು ಜಾರಿ ಸಾಧ್ಯವಿಲ್ಲ; ಕೇಂದ್ರ ಸರ್ಕಾರಕ್ಕೆ ಸ್ಪಷ್ಟೀಕರಣ ನೀಡಿದ ಕೇರಳ ಸಿಎಂ
ಫ್ರೈಡೆ ಫಾರ್ ಫ್ಯೂಚರ್ ಎಂಬುವುದು ಅಂತಾರಾಷ್ಟ್ರೀಯ ಚಳವಳಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಶುಕ್ರವಾರದಂದು ತರಗತಿಯನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆಗಳ ವಿರುದ್ಧ ರಾಜಕಾರಣಿಗಳು ಮಾತನಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾರೆ. ಗ್ರೇಟಾ ಥನ್ಬರ್ಗ್ ಸ್ವೀಡಿಷ್ ಸಂಸತ್ತಿನ ಹೊರಗೆ ಪ್ರತಿಭಟಿಸಿದ ನಂತರ ಇದು ವ್ಯಾಪಕ ಜನಪ್ರಿಯತೆಯನ್ನು ಗಳಿಸಿತು.
ಫೆಬ್ರವರಿ 4 ರಂದು ವಿವಾದಿತ ಟೂಲ್ಕಿಟ್ ತಯಾರಿಸಿದವರ ವಿರುದ್ದ ದೆಹಲಿ ಸೈಬರ್-ಕ್ರೈಮ್ ಸೆಲ್ ಪೊಲೀಸರು, ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ಇದೀಗ ಬಂಧಿತ ವಿದ್ಯಾರ್ಥಿನಿ ದಿಶಾ ರವಿ ವಿರುದ್ಧ ಐಪಿಸಿ ಸೆಕ್ಷನ್ 124ಎ, 153ಎ ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Published by:
MAshok Kumar
First published:
February 14, 2021, 5:39 PM IST