Sumitra Mahajan - ವೈರಲ್ ಆಯಿತು ಸುಮಿತ್ರಾ ಮಹಾಜನ್ ಸಾವಿನ ಫೇಕ್ ಸುದ್ದಿ; ಟ್ವೀಟ್ ಡಿಲೀಟ್ ಮಾಡಿದ ತರೂರ್

ಜ್ವರದ ಕಾರಣದಿಂದ ಇಂದೋರ್ನ ಆಸ್ಪತ್ರೆಯೊಂದರಲ್ಲಿ ಸುಮಿತ್ರಾ ಮಹಾಜನ್ ದಾಖಲಾಗಿದ್ದರು. ಆದರೆ, ಕಿಡಿಗೇಡಿಗಳು ಆಕೆ ಸತ್ತಿದ್ದಾರೆಂದು ಸುಳ್ಳು ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ರಾತ್ರಿ ಹಬ್ಬಿರಿಸಿದ್ದರು.

ಸುಮಿತ್ರಾ ಮಹಾಜನ್

ಸುಮಿತ್ರಾ ಮಹಾಜನ್

 • Share this:
  ನವದೆಹಲಿ(ಏ. 23): ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಿಬಿಡುವುದು ನಡೆಯುತ್ತಲೇ ಇರುತ್ತದೆ. ಸೆಲಬ್ರಿಟಿಗಳ ಸಾವಿನ ಬಗ್ಗೆ ಹಬ್ಬಿಸಲಾಗುವ ಸುಳ್ಳು ಸುದ್ದಿಗಳು ಹಲವು ಬಾರಿ ವೈರಲ್ ಆಗಿಬಿಡುತ್ತವೆ. ಹಿಂದೆ ಎಷ್ಟೋ ಬಾರಿ ಬದುಕಿದ್ದ ಜನರನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಯಿಸಿದ ಉದಾಹರಣೆಗಳಿವೆ. ಮಾಧ್ಯಮಗಳಲ್ಲೂ ಕೆಲವೊಮ್ಮೆ ಇಂಥ ನಕಲಿ ಸುದ್ದಿಗಳನ್ನ ಪರಿಶೀಲಿಸದೆಯೇ ಬಿತ್ತರವಾಗಿಬಿಡುತ್ತವೆ. ನಿನ್ನೆ ರಾತ್ರಿಯೂ ಇಂಥದ್ದೊಂದು ಯಡವಟ್ಟು ಆಗಿದೆ. ಬಿಜೆಪಿಯ ಅತ್ಯಂತ ಹಿರಿಯ ಮಹಿಳಾ ನಾಯಕಿ ಹಾಗೂ ಮಾಜಿ ಲೋಕಸಭಾ ಸ್ಪೀಕರ್ 78 ವರ್ಷದ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿಬಿಟ್ಟಿತು. ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗುವಷ್ಟರಲ್ಲಿ ಸಾಕಷ್ಟು ವೈರಲ್ ಕೂಡ ಆಗಿಹೋಗಿತ್ತು. ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಇದನ್ನ ನಂಬಿ ಸುಮಿತ್ರಾ ಮಹಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.

  ಗುರುವಾರ ರಾತ್ರಿ 11 ಗಂಟೆಯ ಸುಮಾರಿನಲ್ಲಿ ಈ ನಕಲಿ ಸುದ್ದಿ ವೈರಲ್ ಆಗಿತ್ತು. ಕೆಲ ಮಾಧ್ಯಮಗಳೂ ಕೂಡ ಈ ಸುದ್ದಿ ಬಿತ್ತರಿಸಿದವು. ಅದರ ಬೆನ್ನಲ್ಲೇ ತಿರುವನಂತಪುರಂ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕೂಡ ಸುಮಿತ್ರಾ ಮಹಾಜನ್ ಅವರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆಗ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀವ ಅವರು ಈ ಸುದ್ದಿ ಫೇಕ್ ಆಗಿದ್ದು, ಸುಮಿತ್ರಾ ಮಹಾಜನ್ ಆರೋಗ್ಯದಿಂದಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆ ಬಳಿಕ ಶಶಿ ತರೂರ್ ತಮ್ಮ ಆ ಹಿಂದಿನ ಟ್ವೀಟನ್ನು ಡಿಲೀಟ್ ಮಾಡಿ ಸ್ಪಷ್ಟೀಕರಣದ ಮತ್ತೊಂದು ಟ್ವೀಟ್ ಹಾಕಿದರು.


  “ಈ ಟ್ವೀಟ್ ಡಿಲೀಟ್ ಮಾಡುತ್ತಿರುವುದು ಸಮಾಧಾನ ತಂದಿದೆ. ನಂಬಲರ್ಹ ಮೂಲದಿಂದ ಬಂದಿದ್ದು ಎಂಬು ನಂಬಿ ನಾನು ಆ ಟ್ವೀಟ್ ಮಾಡಿದ್ದೆ…. ಯಾರಾದರೂ ಇಂಥ ಸುದ್ದಿಯನ್ನ ಸೃಷ್ಟಿ ಮಾಡುತ್ತಾರೆಂಬುದು ಆಘಾತಕಾರಿ ಸಂಗತಿ” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದು, ಸುಮಿತ್ರಾ ಮಹಾಜನ್ ಸಾವಿನ ಸುದ್ದಿ ನಕಲಿ ಎಂದು ಮನವರಿಕೆ ಮಾಡಿಕೊಟ್ಟ ಮಂದಿಗೆ ಧನ್ಯವಾದ ಕೂಡ ಹೇಳಿದ್ದಾರೆ.

  ಇದನ್ನೂ ಓದಿ: ಕೊರೋನಾದಿಂದಾಗಿ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಗ ಸಾವು; ಬಿಜೆಪಿ ಉಪಾಧ್ಯಕ್ಷನಿಂದ ವಿಕೃತಿ!

  ಮಾಜಿ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ನಿನ್ನೆ ಜ್ವರ ಕಾಣಿಸಿಕೊಂಡು ಮಧ್ಯಪ್ರದೇಶದ ಇಂದೋರ್​ನಲ್ಲಿರುವ ಬಾಂಬೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಈಗ ಆರಾಮವಾಗಿದ್ದಾರೆ ಎಂದು ಅಲ್ಲಿನ ವೈದ್ಯರೂ ಕೂಡ ಸ್ಪಷ್ಟಪಡಿಸಿದ್ದಾರೆ.

  ಸುಮಿತ್ರಾ ಮಹಾಜನ್ ಬಿಜೆಪಿಯ ಅತ್ಯಂತ ಹಿರಿಯ ನಾಯಕಿ ಆಗಿದ್ದಾರೆ. ಬರೋಬ್ಬರಿ 30 ವರ್ಷಗಳ ಕಾಲ ಅವರು ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅತಿ ಹೆಚ್ಚು ಅವಧಿ ಸಂಸದೆಯಾದ ದಾಖಲೆ ಅವರದ್ದಾಗಿದೆ. ಹಿಂದಿನ ಮೋದಿ ಸರ್ಕಾರದಲ್ಲಿ ಅವರು ಲೋಕಸಭಾ ಸ್ಪೀಕರ್ ಆಗಿಯೂ ಕರ್ತವ್ಯ ನಿಭಾಯಿಸಿದ್ದರು.
  Published by:Vijayasarthy SN
  First published: