ಸಂಸದೆಯಾಗಿ 3 ವರ್ಷ ಮಾಡಿರುವ ಸಾಧನೆ ಬಿಚ್ಚಿಟ್ಟ Sumalatha

ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್

ನಾನು ಮೂರು ವರ್ಷದಲ್ಲಿ‌ ಜೀವ ಬೆದರಿಕೆ ನಡುವೆ ಇಷ್ಟೇಲ್ಲ ಕೆಲಸ ಮಾಡಿದ್ದೇನೆ. ನ್ಯಾಯಬದ್ಧವಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಸಂಸತ್ ನಲ್ಲಿ ನನ್ನ ಜಿಲ್ಲೆಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಬೇರೆ ಯಾವುದೇ ಸಂಸದರ ಜೊತೆಗೆ ಹೋಲಿಕೆ ಮಾಡಿ ನೋಡಿ ಎಂದು ಸುಮಲತಾ ಸವಾಲು ಹಾಕಿದರು.

ಮುಂದೆ ಓದಿ ...
  • Share this:

ನವದೆಹಲಿ, ಮಾ. 30: ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಹಾಗೂ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಡುವೆ ಮಂಡ್ಯದಲ್ಲಿ 2019ರಲ್ಲಿ ಲೋಕಸಭಾ ಚುನಾವಣೆ ನಡೆದ ರೀತಿ ಗೊತ್ತೇ ಇದೆ. ನಂತರವೂ ಮಂಡ್ಯ ರಾಜಕಾರಣದಲ್ಲಿ ಸುಮಲತಾ ಸದಾ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಜೆಡಿಎಸ್ ನಾಯಕರ ನಡುವಿನ‌ ಅವರ ವಾಕ್ಸಮರ ನಿರಂತರವಾಗಿ ನಡೆದುಕೊಂಡುಬಂದಿದೆ. ಈ ಎಲ್ಲದರ ನಡುವೆ ಬುಧವಾರ ದೆಹಲಿಯಲ್ಲಿ ತಾವು ಸಂಸದೆಯಾಗಿ ಮೂರು ವರ್ಷ ತಮ್ಮ ಲೋಕಸಭಾ ಕ್ಷೇತ್ರ ಮಂಡ್ಯಕ್ಕೆ ಮಾಡಿರುವ ಸಾಧನೆಗಳನ್ನು ಬಿಚ್ಚಿಟ್ಟರು.


ಸಾಧನೆಗಳ ಪಟ್ಟಿ ನೀಡಿದ ಸುಮಲತಾ
ದೆಹಲಿಯ ಕರ್ನಾಟಕ ಸಂಘದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಮಲತಾ ಅವರು, ಸಂಸದೆಯಾಗಿ 3 ವರ್ಷ ಪೂರ್ಣಗೊಳಿಸುತ್ತಿದ್ದೇನೆ. ಹಲವು ಸವಾಲುಗಳನ್ನು ಈ ಅವಧಿಯಲ್ಲಿ ಎದುರಿಸಿದ್ದೇನೆ. ಸಿನಿಮಾದವರು ಏನ್ ಕೆಲಸ ಮಾಡ್ತಾರೆ ಎಂದು ಹಿಯಾಳಿಸಲಾಗಿತ್ತು. ಆದಾಗ್ಯೂ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಮಂಡ್ಯ ನಗರದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಅದಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಿದ್ದೇನೆ. ಮಹಿಳೆಯರಿಗೆ ವಿಶೇಷ ಬೋಗಿ ಸಿಗುವಂತೆ ಮಾಡಿದ್ದೇನೆ. ಹಿಂದಿನ ಹಲವು ಸಂಸದರು ಸಂಸದರ ನಿಧಿ ಬಳಕೆ ಮಾಡಿರಲಿಲ್ಲ. ಅದನ್ನು ಹೆಚ್ಚುವರಿಯಾಗಿ ಪಡೆದು ಜಿಲ್ಲೆಗೆ ವೆಂಟಿಲೇಟರ್ ಖರೀದಿ ಮಾಡಿಸಿದೆ. ಮತ್ತು ಅತ್ಯುತ್ತಮ ಗುಣಮಟ್ಟದ ಐಸಿಯು ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ನೀಡಿದ್ದೇನೆ. ಯಾವುದೇ ಅನುಭವ ಇಲ್ಲದೇ ಸಂಸದರ ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದರು.


ನಾನು ರಾಜಕಾರಣಿ ಅಲ್ಲ
ದಿಶಾ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಸಂಸದರ ಪೈಕಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ‌. ಆದರೀಗ ದಿಶಾ ಪ್ರಗತಿ ಪರಿಶೀಲನಾ ಸಭೆ ಇಟ್ಟುಕೊಂಡು ವಿವಾದ ಮಾಡಲಾಗುತ್ತಿದೆ. ಕೆಲವು ನಾಯಕರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಸಭೆಗೂ ಮುನ್ನ ಅವರಿಗೆ ಮಾಹಿತಿ ನೀಡದರೂ ಸಭೆಗೆ ಹಾಜರಾಗಿಲ್ಲ. ನಾನು ಸಭೆ ನಡೆಸಿದ ಬಳಿಕ ಸ್ಥಳೀಯ ನಾಯಕರನ್ನು ಬಿಟ್ಟು ಸಭೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅಕ್ರಮ ಗಣಿಗಾರಿಗೆ ಬಗ್ಗೆ ಧ್ವನಿ ಎತ್ತಿದ ಬಳಿಕ ಹೀಗೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ‌. ನನ್ನನ್ನು ನಾನು ರಾಜಕಾರಣಿ ಎಂದು ಕರೆದುಕೊಳ್ಳಲ್ಲ. ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ. ನಮಗೆ ಈಗಲೂ ಸಿನಿಮಾದಲ್ಲೂ ಉತ್ತಮ ಅವಕಾಶಗಳಿವೆ. ಆದರೆ ಸಂಸದೆಯಾಗಿ ನಾನು ಮಾಡುವ ಕೆಲಸಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮಾತು ನಡೆಯನ್ನು ಜನರು ಹೇಗೆ ತೆಗೆದುಕೊಂಡಿದ್ದರೆಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.


ಇದನ್ನು ಓದಿ: Nikhil Kumaraswamy ಜಿಲ್ಲಾ ಪಂಚಾಯತ್ ಗೆದ್ದು ಆಮೇಲೆ ಮಾತನಾಡಲಿ: ಸುಮಲತಾ


ಸಾ.ರಾ. ಮಹೇಶ್ ಬೆಂಬಲಿಗರಿಂದ ಧಮಕಿ
ಶಾಸಕರಾದ ಸುರೇಶ್ ಗೌಡ ಮತ್ತು ಅನ್ನದಾನಿ ಕೊವೀಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿ ಬಂದರು. ನಂತರ ಅವರು ಕೊವೀಡ್ ಹೋರಾಟದಲ್ಲಿ ನೀವ್ ಏನ್ ಮಾಡಿದ್ರಿ ಎಂದು ನನ್ನನ್ನು ಪ್ರಶ್ನಿಸಿದರು. ನಾನು ಆಕ್ಸಿಜನ್ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರೋಗ್ಯ ಸಚಿವರ ಜೊತೆಗೂಡಿ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಿಸಿದ್ದೇನೆ. ಸಾಲಿಗ್ರಾಮದಲ್ಲಿ ಎಸ್ಸಿ - ಎಸ್ಟಿ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆಗೆ ತೆರಳಿದಾಗ ಬೆದರಿಕೆ ಹಾಕಿದ್ದರು. ಶಾಸಕ ಸಾ.ರಾ ಮಹೇಶ್ ಕಡೆಯ ಬೆಂಬಲಿಗರು ಜೀವ ಬೆದರಿಕೆ ಹಾಕಲು ಬಂದಿದ್ದರು. ಆಗ ಸ್ಥಳೀಯ ಮಹಿಳೆಯರು ನನ್ನ ಬೆಂಬಲಕ್ಕೆ ಬಂದು ರಕ್ಷಣೆ ನೀಡಿದರು ಎಂದು ವಿವರಿಸಿದರು.


ಇದನ್ನು ಓದಿ: ಮಂಗಳೂರು ವಿವಿಯಲ್ಲಿ ಲಾಠಿ ಚಾರ್ಜ್; ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಕೋಮು ಪ್ರಚೋದನೆಯಾ: Kalladka Prabhakar Bhat


ನಾನೇ ಬೆಸ್ಟ್!
ಕೆಆರ್‌ಎಸ್ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದ್ದಕ್ಕೆ ಅಲ್ಲಿ ಅಕ್ರಮ ಗಣಿಗಾರಿಕೆ ನಿಂತಿದೆ. ಇದರಿಂದ ಕೆಲವರಿಗೆ ಕಷ್ಟವಾಗಿದೆ. ನಾನು ಮೂರು ವರ್ಷದಲ್ಲಿ ಇಷ್ಟು ಸವಾಲು ಎದುರಿಸಿದ್ದೇನೆ. ಜೀವ ಬೆದರಿಕೆ ನಡುವೆ ಇಷ್ಟೇಲ್ಲ ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆಗೆ ಇರುವ ಭರವಸೆ ನೀಡಿದ್ದಾರೆ. ಬೇರೆಯವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನ್ಯಾಯಬದ್ಧವಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಸಂಸತ್ ನಲ್ಲಿ ನನ್ನ ಜಿಲ್ಲೆಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಬೇರೆ ಯಾವುದೇ ಸಂಸದರ ಜೊತೆಗೆ ಹೋಲಿಕೆ ಮಾಡಿ ನೋಡಿ ಎಂದು ಹೇಳಿದರು.

top videos
    First published: