ಮುಸ್ಲೀಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ; ರಾಹುಲ್ ಗಾಂಧಿ

ಮುಸ್ಲೀಂ ವೃದ್ಧರನ್ನು ರಾಮನಾಮ ಜಪಿಸುವಂತೆ ಒತ್ತಾಯಿಸುತ್ತಿರುವ ವ್ಯಕ್ತಿ ನಿಜವಾದ ರಾಮ ಭಕ್ತನಾಗಿರಲು ಸಾಧ್ಯವಿಲ್ಲ. ಧರ್ಮದ ಕಾರಣಕ್ಕೆ ನಡೆದ ಈ ದೌರ್ಜನ್ಯ ಸಮಾಜ ಮತ್ತು ಧರ್ಮ ಎರಡಕ್ಕೂ ದೊಡ್ಡ ಕಳಂಕ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
   ನವ ದೆಹಲಿ (ಜೂನ್ 15); ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ರಾಮ ಭಕ್ತರು ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಮುಸ್ಲೀಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಥಳಿಸಿದ್ದರು. ಅಲ್ಲದೆ, ಆತನ ಆತನ ಗಡ್ಡವನ್ನು ಬೋಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜೂನ್​ 5ರಂದು ಅಬ್ದುಲ್​ ಸಮದ್​ ಎಂಬ ಹಿರಿಯ ವ್ಯಕ್ತಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅವರ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಅವನ್ನು ಎಳೆದುಕೊಂಡ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅವರಿಗೆ ಜೈ ಶ್ರೀರಾಮ್​ , ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಹೊಡೆದಿದ್ದಾರೆ. ಅಲ್ಲದೇ ಮರದ ಕಟ್ಟಿಗೆಯಿಂದ ಮನಬಂದಂತೆ ಥಳಿಸಿದ್ದರು.

  ಅಷ್ಟೇ ಅಲ್ಲದೇ, ಆ ವ್ಯಕ್ತಿಯನ್ನು ಪಾಕಿಸ್ತಾನಿ ಗೂಢಚಾರಿ ಎಂದು ಆರೋಪಿಸಿದ್ದಾರೆ. ದಾಳಿಕೋರರ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಸಮದ್​​ ಅವರ ಗಡ್ಡ ಕತ್ತರಿಸುವ ಪ್ರಯತ್ನ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮದ್​, ತಮ್ಮನ್ನು ಬಿಟ್ಟು ಬಿಡುವಂತೆ ಯುವಕರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಅವರನ್ನು ಹಿಂಸಿಸಲಾಗಿದೆ.  ಈ ಘಟನೆಯನ್ನು ಅನೇಕ ರಾಷ್ಟ್ರೀಯ ನಾಯಕರು ಖಂಡಿಸಿದ್ದರು. ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಮುಸ್ಲೀಂ ವ್ಯಕ್ತಿಯ ಮೇಲೆ ಹೀಗೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಮಾಜ ಮತ್ತು ಧರ್ಮಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

  ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಒಬ್ಬ ವಯಸ್ಸಾದ ವ್ಯಕ್ತಿಯನ್ನು ವಿನಾ ಕಾರಣ ಥಳಿಸುವುದು ಅತ್ಯಂತ ಅಮಾನವೀಯ. ಮುಸ್ಲೀಂ ವೃದ್ಧರನ್ನು ರಾಮನಾಮ ಜಪಿಸುವಂತೆ ಒತ್ತಾಯಿಸುತ್ತಿರುವ ವ್ಯಕ್ತಿ ನಿಜವಾದ ರಾಮ ಭಕ್ತನಾಗಿರಲು ಸಾಧ್ಯವಿಲ್ಲ. ಇಂತಹ ಕ್ರೌರ್ಯಗಳು ಮಾನವೀಯತೆಯನ್ನು ಇಲ್ಲದಂತೆ ಮಾಡುತ್ತವೆ. ಧರ್ಮದ ಕಾರಣಕ್ಕೆ ನಡೆದ ಈ ದೌರ್ಜನ್ಯ ಸಮಾಜ ಮತ್ತು ಧರ್ಮ ಎರಡಕ್ಕೂ ದೊಡ್ಡ ಕಳಂಕ" ಎಂದು ಕಿಡಿಕಾರಿದ್ದಾರೆ.

  ಆದರೆ, ಇದಕ್ಕೆ ಟ್ವೀಟ್ ಮೂಲಕವೇ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಶ್ರೀ ರಾಮ ಸತ್ಯವನ್ನು ಹೇಳುವಂತೆ ಭೋದಿಸುತ್ತಾನೆ. ಆದರೆ, ನೀವು ಜೀವನದಲ್ಲಿ ಎಂದಿಗೂ ಸತ್ಯ ಮಾತನಾಡಿದವರಲ್ಲ. ಬದಲಾಗಿ ಸಮಾಜದಲ್ಲಿ ಸುಳ್ಳನ್ನು ಹರಡುತ್ತಾ, ದ್ವೇಷವನ್ನು ಭಿತ್ತುವುದೇ ನಿಮ್ಮ ಕೆಲಸವಾಗಿದೆ" ಎಂದಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: