Train Accident: ಶವಗಳ ರಾಶಿ ಇರಿಸಿದ್ದ ಶಾಲೆಯೀಗ ಖಾಲಿ-ಖಾಲಿ! ಮಕ್ಕಳಿಗೆ ಕಾಡುತ್ತಿದೆಯಾ ಭೂತದ ಭಯ?

ಶವ ಸಂಗ್ರಹಿಸಿದ್ದ ಶಾಲೆ

ಶವ ಸಂಗ್ರಹಿಸಿದ್ದ ಶಾಲೆ

ರೈಲು ಅಪಘಾತದಲ್ಲಿ ವಿರೂಪಗೊಂಡಿರುವ ಶವಗಳನ್ನು ಸಾಲಾಗಿ ಇರಿಸಲು ಈ ಶಾಲೆಯನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಈ ಶಾಲೆಗೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯಪಡುತ್ತಿದ್ದಾರಂತೆ!

 • Trending Desk
 • 3-MIN READ
 • Last Updated :
 • Odisha (Orissa), India
 • Share this:

  ಒಡಿಶಾ: ಬಾಲಾಸೋರ್‌ನಲ್ಲಿ (Balasore) ನಡೆದ ತ್ರಿವಳಿ ರೈಲು ದುರಂತ (train accident) ಸಂಪೂರ್ಣ ದೇಶವನ್ನೇ ಬೆಚ್ಚಿಬೀಳಿಸಿದ ಅಪಘಾತವಾಗಿದೆ. ಈ ಅಪಘಾತದಲ್ಲಿ ಮರಣ ಹೊಂದಿದವರೆಷ್ಟೋ? ಸಾವು ಬದುಕಿನ ನಡುವೆ ಹೋರಾಡಿದವರೆಷ್ಟೋ, ಆಸ್ಪತ್ರೆ ಸೇರಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಗಾಯಾಳುಗಳೆಷ್ಟೋ? ಒಟ್ಟಿನಲ್ಲಿ ದೇಶ ಕಂಡ ಕರಾಳ ರೈಲು ದುರಂತವಾಗಿ ಬಾಲಾಸೋರ್‌ನ ಈ ಅಪಘಾತ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅಪಘಾತ ನಡೆದ ಸ್ಥಳದಿಂದ ಪಡೆದಿದ್ದ ಶವಗಳನ್ನು (dead body) ಘಟನಾ ಸ್ಥಳಕ್ಕೆ ಹತ್ತಿರವೇ ಇದ್ದ ಬಹಂಗಾ ಸರಕಾರಿ ಶಾಲೆಯಲ್ಲಿ (Bahanga Government School) ಇರಿಸಲಾಗಿತ್ತು. ಶವಗಳನ್ನು ಶಾಲೆಯಿಂದ ರವಾನಿಸಲಾಗಿದ್ದರೂ ಶಾಲೆ ಪ್ರವೇಶಿಸುವ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಇದು ಭಯವನ್ನುಂಟು ಮಾಡಲಿದೆ ಎಂದು ಆಡಳಿತ ವರ್ಗ ತಿಳಿಸಿದೆ. ಹಾಗಾಗಿ ಶಾಲೆಯನ್ನು ಕೆಡವಲು ತಯಾರಿ ನಡೆಸಲಾಗುತ್ತಿದೆ ಎಂಬುದು ವರದಿಯಾಗಿದೆ.


  ಜೂನ್ 16 ರಂದು ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಲಿದ್ದು ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯನ್ನು ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ. ಶಾಲೆಯ ಕುರಿತು ಪ್ರತಿಯೊಬ್ಬರಲ್ಲಿ ಭಯ ಅಚ್ಚೊತ್ತಿದೆ ಎಂದು ಶಾಲಾ ಆಡಳಿತ ಕಮಿಟಿ ಜಿಲ್ಲಾ ಆಡಳಿತ ವರ್ಗಕ್ಕೆ ಈಗಾಗಲೇ ತಿಳಿಸಿದೆ ಎಂದು ವರದಿಯಾಗಿದೆ.


  ಶವಗಳನ್ನು ಶಾಲಾ ಕೊಠಡಿಗಳಲ್ಲಿ ಇರಿಸಲಾಗಿತ್ತು


  ಅಪಘಾತ ನಡೆದ ಸ್ಥಳದಿಂದ 500 ಮೀಟರ್ ಸನಿಹದಲ್ಲಿ ಬಹಂಗಾ ನೋಡಲ್ ಶಾಲೆ ಇದ್ದು ಅಪಘಾತದಲ್ಲಿ ಮರಣ ಹೊಂದಿದ್ದ 250 ಶವಗಳನ್ನು, ಬಾಲಾಸೋರ್ ಹಾಗೂ ಭುಬನೇಶ್ವರದಲ್ಲಿರುವ ಆಸ್ಪತ್ರೆಯ ಶವಾಗಾರಗಳಿಗೆ ರವಾನಿಸುವ ಮುನ್ನ ತಾತ್ಕಾಲಿಕ ನೆಲೆಯಾಗಿ ಈ ಶಾಲೆಯನ್ನು ಆಯ್ದುಕೊಳ್ಳಲಾಗಿತ್ತು ಎಂಬುದಾಗಿ ಸಂರಕ್ಷಣಾ ತಂಡದ ಸಿಬ್ಬಂದಿಗಳು ತಿಳಿಸಿದ್ದಾರೆ.


  ಇದನ್ನೂ ಓದಿ: Body Embalming: ರೈಲು ಅಪಘಾತದಲ್ಲಿ ಸತ್ತವರ ದೇಹಕ್ಕೆ ಎಂಬಾಮಿಂಗ್ ಮಾಡಲು ಸೂಚನೆ, ಹೀಗಂದ್ರೇನು?


  ವಿರೂಪಗೊಂಡಿದ್ದ ಶವಗಳ ರಾಶಿ


  ವಿರೂಪಗೊಂಡಿರುವ ಶವಗಳನ್ನು ಸಾಲಾಗಿ ಇರಿಸಲು ಆರು ತರಗತಿಗಳು ಹಾಗೂ ಹಾಲ್‌ಗಳನ್ನು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶವಗಳನ್ನು ಹಾಗೂ ಅಲ್ಲಿದ್ದ ರಕ್ತದ ಕಲೆಗಳನ್ನು ಸಂಪೂರ್ಣವಾಗಿ ತೊಳೆದು ಕಟ್ಟಡವನ್ನು ಸ್ಯಾನಿಟೈಸ್ ಮಾಡಿದ್ದರೂ ಹೆಚ್ಚಿನವರ ಮನದಲ್ಲಿ ಇದೇ ಘಟನೆ ಮರುಕಳಿಸಿ ಒಂದು ರೀತಿಯ ಭಯವನ್ನು ಸೃಷ್ಟಿಸಿದೆ ಎಂಬುದು ಆಡಳಿತ ಮಂಡಳಿ ಚಿಂತೆಯಾಗಿದೆ.


  ಸುಖಾಸುಮ್ಮನೆ ಭಯ ಬಿತ್ತಬೇಡಿ ಎಂದ ಕಲೆಕ್ಟರ್


  ಬಾಲಾಸೋರ್ ಜಿಲ್ಲಾ ಕಲೆಕ್ಟರ್ ದತ್ತಾತ್ರೇಯ ಭವೂಸಾಹೇಬ್ ಶಿಂಧೆ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾರಲ್ಲೂ ಭಯ ಹಾಗೂ ಸಂದೇಶವನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಇದು ಅನಾವಶ್ಯಕ. ಯುವಜನರಲ್ಲಿ ಗಾಬರಿ ಹಾಗೂ ಒಂದು ರೀತಿಯ ಭಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. 65 ವರ್ಷ ಪುರಾತನಾದ ಶಾಲೆಯೆಂಬ ಹೆಗ್ಗಳಿಕೆಯನ್ನು ಸರಕಾರಿ ಶಾಲೆ ಪಡೆದುಕೊಂಡಿದ್ದು, ಇಲ್ಲಿರುವ ವಿಜ್ಞಾನ ಪ್ರಯೋಗಾಲಯ ಅಂಧಕಾರದಿಂದ ಬೆಳಕಿನೆಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ದಾರಿಯಾಗಬೇಕು ಎಂದು ತಿಳಿಸಿದ್ದಾರೆ.


  ಮಕ್ಕಳು, ಪೋಷಕರಿಗೆ ಅಭಯ


  ಶಾಲಾ ಕಟ್ಟಡವನ್ನು ಕೆಡವಬೇಕೇ ಬೇಡವೇ ಎಂಬ ನಿರ್ಧಾರವನ್ನು ಇನ್ನಷ್ಟು ಸಭೆಯ ಮೂಲಕ ಚರ್ಚಿಸಿ ಕೈಗೊಳ್ಳಬೇಕಾಗಿದೆ ಎಂದು ಕಲೆಕ್ಟರ್ ತಿಳಿಸಿದ್ದಾರೆ. ಅಧಿಕಾರಿಗಳ ತಂಡ ಶಾಲಾ ಕಟ್ಟಡಗಳಿಗೆ ಭೇಟಿ ನೀಡಿದ್ದು ಪೋಷಕರ ಹಾಗೂ ಶಿಕ್ಷಕರ ಸಂದೇಹಗಳನ್ನು ನಿವಾರಿಸಿದ್ದಾರೆ ಎಂದು ಶಾಲಾ ಸೆಕ್ರೆಟರಿ ಎಸ್ ಅಶ್ವಥ್ ತಿಳಿಸಿದ್ದಾರೆ. ನಮ್ಮ ಮೇಲಾಧಿಕಾರಿಗಳ ಹಾಗೂ ಶಾಲಾ ಆಡಳಿತ ಮಂಡಳಿಯ ವರದಿಗಳಿಗಾಗಿ ನಾವು ಕಾಯುತ್ತಿದ್ದು ಇದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
  ಇದು ಮಕ್ಕಳ ಹಾಗೂ ಹದಿಹರೆಯದವರ ಮನದಲ್ಲಿ ಇನ್ನಷ್ಟು ಭಯವನ್ನು ಉಂಟುಮಾಡಲಿದೆ, ಹಾಗಾಗಿ ಶವಗಳನ್ನಿರಿಸಿದ್ದ ತರಗತಿಗಳನ್ನು ಕೆಡವಿ ಅಲ್ಲಿ ಹೊಸ ತರಗತಿಗಳನ್ನು ನಿರ್ಮಿಸುವಂತೆ ನಾವು ಸರಕಾರದಲ್ಲಿ ವಿನಂತಿಸುತ್ತಿದ್ದೇವೆ ಎಂದು ಪ್ರಾಂಶುಪಾಲರಾದ ಪ್ರಮೀಣಾ ಸ್ವೇನ್ ತಿಳಿಸಿದ್ದಾರೆ.


  ಇದನ್ನೂ ಓದಿ: Train Accident: ದುರಂತದಲ್ಲಿ ನೂರಾರು ಮಂದಿ ಮೃತಪಟ್ಟಾಗ ವಾರಸುದಾರರಿಲ್ಲದ ಶವಗಳನ್ನು ಏನು ಮಾಡಲಾಗುತ್ತದೆ? ನಿಯಮಗಳೇನು?


  ಕೌನ್ಸೆಲಿಂಗ್ ನಡೆಸಲು ರಾಜ್ಯ ಸರ್ಕಾರದ ಚಿಂತನೆ


  ಬಹಾನಾಗಾ ಹಾಗೂ ಹತ್ತಿರದ ಗ್ರಾಮಸ್ಥರು ಕೆಲವೊಂದು ಭಯಾನಕ ದೃಶ್ಯಗಳನ್ನು ನೋಡಿರುವುದಾಗಿ ಹಾಗೂ ಆ ಅನುಭವ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದೀಗ ರಾಜ್ಯ ಸರಕಾರವು ಶಿಕ್ಷಕರು ಹಾಗೂ ಮಕ್ಕಳ ಮನದಲ್ಲಿ ಶಾಲೆಯ ಕುರಿತು ಮೂಡಿರುವ ಸಂದೇಹ ಹಾಗೂ ಭಯವನ್ನು ಹೋಗಲಾಡಿಸಲು ಕೌನ್ಸಲಿಂಗ್ ತರಗತಿಗಳನ್ನು ಏರ್ಪಡಿಸುವ ಯೋಜನೆ ರೂಪಿಸಿದೆ ಅಂತ ಅಶ್ವಥ್ ತಿಳಿಸಿದ್ದಾರೆ.

  First published: