UttaraPradesh| ನಿರುದ್ಯೋಗದ ವಿರುದ್ಧ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿ ಆಂದೋಲನ; ಇಕ್ಕಟ್ಟಿನಲ್ಲಿ ಆದಿತ್ಯನಾಥ್ ಸರ್ಕಾರ

ಮಹಿಳಾ ಕಾಂಗ್ರೆಸ್‌ ರಾಷ್ಟ್ರೀಯ ಸಂಯೋಜಕಿ ಸದಫ್‌ ಜಫಾರ್‌ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಯುವಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರಪ್ರದೇಶ ವಿದ್ಯಾರ್ಥಿಗಳ ಅಭಿಯಾನ.

ಉತ್ತರಪ್ರದೇಶ ವಿದ್ಯಾರ್ಥಿಗಳ ಅಭಿಯಾನ.

 • Share this:
  ಉತ್ತರಪ್ರದೇಶ: ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶ (UttaraPradesh) ಮತ್ತೊಂದು ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿದೆ. ಉತ್ತರಪ್ರದೇಶ ಗೆದ್ದವರು ದೇಶವನ್ನು ಗೆಲ್ಲುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಇದೇ ಕಾರಣಕ್ಕೆ ಮತ್ತೊಂದು ಅವಧಿಗೆ ಅಧಿಕಾರವನ್ನು ಹಿಡಿಯುವ ಸಲುವಾಗಿ ಬಿಜೆಪಿ (BJP) ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸುತ್ತಿದೆ. ಇದಲ್ಲದೆ, ಕಾಂಗ್ರೆಸ್ (Congress)​, ಬಿಎಸ್​ಪಿ (BSP), ಎಸ್​ಪಿ (SP) ಸಹ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಪ್ರಯತ್ನದಲ್ಲಿದೆ. ಆದರೆ, ಉತ್ತರಪ್ರದೇಶ ಚುನಾವಣೆಯಲ್ಲಿ ಯಾವುದು ಚುನಾವಣೆಯನ್ನು ಎದುರಿಸುವ ಅಂಶ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಕೊರೋನಾ (CoronaVirus) ನಿಯಂತ್ರಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ವಿರುದ್ಧ ದೇಶದಾದ್ಯಂತ ಅಸಮಾಧಾನ ಇದೆ. ಆದರೆ, ಇದನ್ನು ತಮಗೆ ಲಾಭವಾಗುವಂತೆ ಬದಲಿಸಿಕೊಳ್ಳು ವಲ್ಲಿ ವಿರೋಧ ಪಕ್ಷಗಳು ಎಡವಿದೆ. ಈ ನಡುವೆ ಬಿಜೆಪಿ ಅಯೋಧ್ಯೆ ರಾಮ ಮಂದಿರವನ್ನು (Ram Mandir) ಮುಂದಿಟ್ಟು ಮತ ಕೇಳುವ ಯೋಜನೆಯಲ್ಲಿದೆ. ಆದರೆ, ಇದನ್ನು ವಿರೋಧಿಸುವ ನಿಟ್ಟಿನಲ್ಲಿ ಉತ್ತರಪ್ರದೇಶ ವಿದ್ಯಾರ್ಥಿಗಳ ಅಭಿಯಾನ 2022ರಲ್ಲಿ ನಡೆಯಲಿರುವ ಚುನಾವಣೆಯನ್ನು ವಿಷಯಾಧಾರಿತ ಚರ್ಚೆಗೆ ತರುವ ನಿಟ್ಟಿನಲ್ಲಿ "ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ" ವನ್ನು ಆರಂಭಿಸಿದೆ. ಈ ಮೂಲಕ ಆದಿತ್ಯನಾಥ್ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ.

  ಉತ್ತರಪ್ರದೇಶದಲ್ಲಿ ಪ್ರಸ್ತುತ ಖಾಲಿ ಇರುವ 25 ಲಕ್ಷ ಉದ್ಯೋಗಗಳನ್ನು ಯೋಗಿ ಆದಿತ್ಯನಾಥ ಸರ್ಕಾರ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಶುಕ್ರವಾರ ಚಾಲನೆ ಪಡೆದಿದೆ.

  ‘ಛಾತ್ರ್ ಯುವ ರೋಜ್‌‌ಗಾರ್‌ ಅಧಿಕಾರ್‌ ಮೋರ್ಚಾ’ ಸಂಘಟನೆಯ ನೇತೃತ್ವದಲ್ಲಿ ಚಳವಳಿಗೆ ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರವನ್ನು ಎಚ್ಚರಿಸಲು ಪ್ರಭಾವ ಬೀರಲು ಸಂಘಟಕರು ಮುಂದಾಗಿದ್ದಾರೆ. ಲಕ್ನೋದಲ್ಲಿ ಸೆ. 24ರಂದು ‘ರೋಜ್‌ಗಾರ್‌ ಅಧಿಕಾರ್‌ ಸಮ್ಮೇಳನ’ ನಡೆದಿದೆ. ಈ ಸಮ್ಮೇಳನದಲ್ಲಿ ವಿರೋಧ ಪಕ್ಷಗಳ ಹಲವು ನಾಯಕರೂ ಪಾಲ್ಗೊಂಡಿದ್ದು, "ಘನತೆಯ ಜೊತೆಗೆ ಉದ್ಯೋಗ, ಪ್ರತಿಯೊಬ್ಬ ಯುವಜನರಿಗೂ ಶಿಕ್ಷಣವೆಂಬುದು ಮೂಲಭೂತ ಹಕ್ಕು" ಎಂದು ಬಿಜೆಪಿ ನೇತೃತ್ವದ ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

  ಬಿಹಾರದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ ನಾಯಕ ಮನೋಜ್‌ ಮನ್ಜಿಲ್‌, ಸಾಮಾಜಿಕ ಚಳವಳಿಗಳನ್ನು ದಮನ ಮಾಡುವ ಉತ್ತರ ಪ್ರದೇಶದ ಸರ್ಕಾರದ ಪ್ರವೃತ್ತಿಯನ್ನು ಖಂಡಿಸಿದ್ದಾರೆ. "ದೇಶದ ಯುವಜನರ ನಿರುದ್ಯೋಗಕ್ಕೆ ಶೇ. 10ರಷ್ಟು ಕೊಡುಗೆ ಉತ್ತರ ಪ್ರದೇಶದ್ದಾಗಿದೆ. ಲಾಕ್‌ಡೌನ್‌ ಜಾರಿಯಿಂದಾಗಿ ದೊಡ್ಡ ಮಟ್ಟದ ಉದ್ಯೋಗ ನಷ್ಟ ಉಂಟಾಗಿದೆ" ಎಂದಿದ್ದಾರೆ.

  ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ರಾಷ್ಟ್ರೀಯ ಸಂಯೋಜಕಿ ಸದಫ್‌ ಜಫಾರ್‌ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, "ಯುವಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.

  ಮುಂದುವರಿದು, "ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಮಾರಿ ಹಣವನ್ನು ಹೊಂದಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸೆಂಟ್ರಲ್‌ ವಿಸ್ತಾ ಥರದ ಅಪ್ರಯೋಜಕ ಯೋಜನೆಗಳಿಗೆ ಹಣವನ್ನು ವಿನಿಯೋಗಿಸುತ್ತಿದೆ" ಎಂದು ಕುಟುಕಿದ್ದಾರೆ.ಆಮ್‌ ಆದ್ಮಿ ಪಾರ್ಟಿಯ ಪ್ರೊ.ಡಿ.ಎನ್‌.ಎಸ್‌.ಯಾದವ್‌ ಅವರು, ಪ್ರಜೆಗಳ ಮೂಲಭೂತ ಹಕ್ಕುಗಳ ಕುರಿತು ಬೆಳಕು ಚೆಲ್ಲಿದ್ದಾರೆ.

  ಇದನ್ನೂ ಓದಿ: ಬಿಜೆಪಿಯ 2 ಕೋಟಿ ಉದ್ಯೋಗದ ಆಶ್ವಾಸನೆ ಏನಾಯ್ತು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಎಲ್ಲಿ?; ಡಿ.ಕೆ. ಶಿವಕುಮಾರ್ ಪ್ರಶ್ನೆ

  "ಜನರಿಂದ ಆಯ್ಕೆಯಾದ ಸರ್ಕಾರವನ್ನು ನಿರುದ್ಯೋಗದ ಕುರಿತು ಪ್ರಶ್ನಿಸುವುದು ದೇಶದ ಪ್ರತಿಯೊಬ್ಬ ಯುವಜನರ ಕರ್ತವ್ಯ" ಎಂದಿದ್ದಾರೆ. “ನಿರುದ್ಯೋಗ ಕುರಿತ ಅಂಕಿ-ಅಂಶಗಳನ್ನು ಸರ್ಕಾರ ಮುಚ್ಚಿಡುತ್ತಿದೆ. ಉದ್ಯೋಗ ಸರ್ವೇ ನಡೆಸುವುದನ್ನು ಕಾರ್ಮಿಕ ಸಚಿವಾಲಯ ನಿಲ್ಲಿಸಿದೆ. ದೇಶದಲ್ಲಿ ಉದ್ಯೋಗನಾಶದ ಕುರಿತು ಕುರುಹುಗಳನ್ನು ನಾಶಪಡಿಸಲು ಸರ್ಕಾರ ಮುಂದಾಗಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.

  ರಾಷ್ಟ್ರೀಯ ಲೋಕ ದಳ ನಾಯಕರಾದ ಅಂಬುಜ್ ಪಟೇಲ್‌ ಮಾತನಾಡಿ, "ಹಿಂದೂ, ಮುಸ್ಲಿಂ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ನಿರುದ್ಯೋಗ ವಿರೋಧಿ ಚಳವಳಿಯ ದಿಕ್ಕು ಬದಲಿಸಲು ಬಿಜೆಪಿ ಯತ್ನಿಸುತ್ತಿದೆ. ಯುವಜನರು ಯಾವುದೇ ಧಾರ್ಮಿಕ ಹಾಗೂ ಜಾತಿ ಸಂಬಂಧಿತ ವಿಷಯಗಳಲ್ಲಿ ಭಾಗಿಯಾಗಬಾರದು. ಉದ್ಯೋಗ ಹಾಗೂ ಶಿಕ್ಷಣ ವಿದ್ಯಾರ್ಥಿಗಳ ಆದ್ಯತೆಯಾಗಬೇಕು" ಎಂದು ಎಚ್ಚರಿಸಿದ್ದಾರೆ.

  ಇದನ್ನೂ ಓದಿ: Bharat Bandh| ರೈತರು ಕರೆ ನೀಡಿರುವ ಸೆ.27 ಭಾರತ್​ ಬಂದ್​ಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಬೆಂಬಲ!

  ಪ್ರಸಿದ್ಧ ವಿಮರ್ಶಕ ವೀರೇಂದ್ರ ಯಾದವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, "ನಿರುದ್ಯೋಗ ವಿರುದ್ಧದ ಚಳವಳಿ ದೇಶವನ್ನು ಕಾಪಾಡುವ ಹೋರಾಟವಾಗಿದೆ" ಎಂದು ಬಣ್ಣಿಸಿದ್ದಾರೆ. ಮಾಜಿ ಐಎಎಸ್‌ ಅಧಿಕಾರಿ ಸೂರ್ಯ ಪ್ರತಾಪ್‌ ಮಾತನಾಡಿ, "ಈ ಚಳವಳಿ ಸರ್ಕಾರವನ್ನು ಬದಲಿಸುವುದಕ್ಕೆ ಸಂಬಂಧಿಸಿದ್ದಲ್ಲ. ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ್ದು" ಎಂದು ಅಭಿಪ್ರಾಯಪಟ್ಟಿದ್ದಾರೆ.
  Published by:MAshok Kumar
  First published: