ಅಸಮಾಧಾನ, ವದಂತಿಗಳಿಗೆ ತೆರೆ; ನ್ಯಾ| ರಂಜನ್ ಗೊಗೋಯ್ ಮುಂದಿನ ಸಿಜೆಐ

ಸಿಜೆಐ ದೀಪಕ್ ಮಿಶ್ರಾ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ನ್ಯಾ| ರಂಜನ್ ಗೊಗೋಯ್ ಅವರ ಹೆಸರನ್ನು ಶಿಫಾರಸು ಮಾಡಿ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆಂಬ ಮಾಹಿತಿ ನ್ಯೂಸ್18 ವಾಹಿನಿಗೆ ಲಭಿಸಿದೆ.


Updated:September 1, 2018, 5:20 PM IST
ಅಸಮಾಧಾನ, ವದಂತಿಗಳಿಗೆ ತೆರೆ; ನ್ಯಾ| ರಂಜನ್ ಗೊಗೋಯ್ ಮುಂದಿನ ಸಿಜೆಐ
ನ್ಯಾ| ರಂಜನ್ ಗೊಗೋಯ್ ಮತ್ತು ನ್ಯಾ| ದೀಪಕ್ ಮಿಶ್ರಾ

Updated: September 1, 2018, 5:20 PM IST
- ನ್ಯೂಸ್18 ಕನ್ನಡ

ನವದೆಹಲಿ: ಈ ವರ್ಷದ ಆರಂಭದಲ್ಲಿ ನಾಲ್ವರು ಹಿರಿಯ ಸುಪ್ರೀಂ ನ್ಯಾಯಮೂರ್ತಿಗಳು ಸಿಜೆಐ ದೀಪಕ್ ಮಿಶ್ರಾ ವಿರುದ್ಧವೇ ಸಿಡಿದೆದ್ದು ಪತ್ರಿಕಾಗೋಷ್ಠಿ ನಡೆಸಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಈಗ ಅದೇ ಸಿಜೆಐ ಅವರು ತಮ್ಮ ಉತ್ತರಾಧಿಕಾರವನ್ನು ಆ ನಾಲ್ವರಲ್ಲಿ ಒಬ್ಬರಿಗೆ ನೀಡುತ್ತಿದ್ದಾರೆ. ಮುಂದಿನ ಸಿಜೆಐ ಸ್ಥಾನಕ್ಕೆ ನ್ಯಾ| ರಂಜನ್ ಗೊಗೋಯ್ ಅವರ ಹೆಸರನ್ನು ನ್ಯಾ| ದೀಪಕ್ ಮಿಶ್ರಾ ಶಿಫಾರಸು ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಮೂಲಗಳು ದೃಢಪಡಿಸಿವೆ. ತಮ್ಮ ಇಚ್ಛಾನುಸಾರ ಮುಖ್ಯನ್ಯಾಯಮೂರ್ತಿಗಳ ಸ್ಥಾನಕ್ಕೆ ಹೆಸರನ್ನು ಸೂಚಿಸುವ ಅವಕಾಶವಿತ್ತಾದರೂ ದೀಪಕ್ ಮಿಶ್ರಾ ಅವರು ಸರ್ವೋಚ್ಚ ನ್ಯಾಯಾಲಯದ ಇದೂವರಿಗಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿರುವುದು ಗಮನಾರ್ಹ. ಇದರೊಂದಿಗೆ ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಸುಪ್ರೀಂಕೊರ್ಟ್​ನಲ್ಲಿ ನ್ಯಾಯಮೂರ್ತಿಗಳ ನಡುವೆ ಕಾಣಿಸಿದ್ದ ಬಿರುಕು ಕೇವಲ ತಾತ್ಕಾಲಿಕ ಎಂಬುದು ದೀಪಕ್ ಮಿಶ್ರಾ ಅವರ ನಿರ್ಧಾರದಿಂದ ನಿರೂಪಿತವಾಗಿದೆ.

ಈ ವರ್ಷದ ಜನವರಿ 15ರಂದು ಸುಪ್ರೀಂಕೋರ್ಟ್​ನ ಹಿರಿಯ ನ್ಯಾಯಾಧೀಶರಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಠಿ ಕರೆದು ಸರ್ವೋಚ್ಚ ನ್ಯಾಯಾಲಯದೊಳಗಿನ ಕೆಲ ವ್ಯವಹಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯನ್ಯಾಯಮೂರ್ತಿಗಳು ತಮ್ಮೊಂದಿಗೆ ಸಮಾಲೋಚನೆ ಮಾಡದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸುಪ್ರೀಂಕೋರ್ಟ್​ನ ನ್ಯಾಯಾಧೀಶರು ಈ ರೀತಿ ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ಹೊರಹಾಕಿದ್ದು ದೇಶದ ಇತಿಹಾಸದಲ್ಲಿ ಅದೇ ಮೊದಲಾಗಿತ್ತು. ಕೇಂದ್ರ ಸರಕಾರ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಸರ್ವೋಚ್ಚ ನ್ಯಾಯಮೂರ್ತಿಗಳ ಬಹಿರಂಗ ಬಂಡಾಯ ಎಂದೇ ಆ ಘಟನೆಯನ್ನು ಬಿಂಬಿಸಲಾಗಿತ್ತು. ಸಿಜೆಐ ದೀಪಕ್ ಮಿಶ್ರಾ ಅವರೊಂದಿಗೆ ಈ ನಾಲ್ವರ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರತೊಡಗಿದವು. ಇದೀಗ ನ್ಯಾ| ರಂಜನ್ ಗೊಗೋಯ್ ಅವರ ಹೆಸರನ್ನು ಸಿಜೆಐ ಸ್ಥಾನಕ್ಕೆ ಶಿಫಾರಸು ಮಾಡುವುದರೊಂದಿಗೆ ನ್ಯಾ| ದೀಪಕ್ ಮಿಶ್ರಾ ಅವರು ಈ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ನ್ಯಾ| ರಂಜನ್ ಗೊಗೋಯ್ ಅವರ ಹೆಸರನ್ನ ಶಿಫಾರಸು ಮಾಡಿ ನ್ಯಾ| ದೀಪಕ್ ಮಿಶ್ರಾ ಅವರು ಕಳುಹಿಸಲಿರುವ ಕಡತಗಳಿಗೆ ಕಾನೂನು ಮಂತ್ರಾಲಯದಿಂದ ಒಪ್ಪಿಗೆಯ ಮುದ್ರೆ ಸಿಗಬೇಕಿದೆ. ಮುಖ್ಯನ್ಯಾಯಮೂರ್ತಿಗಳು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸಬೇಕೆಂದು ಕೋರಿ ಕೆಲ ದಿನಗಳ ಹಿಂದಷ್ಟೇ ಕಾನೂನು ಸಚಿವಾಲಯವು ಪತ್ರ ಬರೆದಿತ್ತು.

ನ್ಯಾ| ದೀಪಕ್ ಮಿಶ್ರಾ ಅವರ ಮುಖ್ಯನ್ಯಾಯಮೂರ್ತಿ ಸ್ಥಾನದ ಅಧಿಕಾರಾವಧಿ ಅಕ್ಟೋಬರ್ 2ವರೆಗೆ ಇದೆ. ಅಷ್ಟರೊಳಗೆ ಅವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಸೂಚಿಸಬೇಕಿತ್ತು. ಒಂದು ತಿಂಗಳ ಮುಂಚೆಯೇ ದೀಪಕ್ ಮಿಶ್ರಾ ಖಚಿತ ನಿರ್ಧಾರ ಕೈಗೊಂಡಿದ್ದಾರೆ.
Loading...

ಮುಂದಿನ ಮುಖ್ಯನ್ಯಾಯಮೂರ್ತಿಯಾಗಲಿರುವ ರಂಜನ್ ಗೊಗೋಯ್ ಅವರು ಅಸ್ಸಾಮ್ ಸಂಜಾತರಾಗಿದ್ದು, ಹಲವಾರು ಪ್ರಮುಖ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳಾಗಿ ತೀರ್ಪು ನೀಡಿದ್ದಾರೆ. ರಾಜಕಾರಣಿಗಳನ್ನ ವೈಭವೀಕರಿಸುವಂತಹ ಸಾರ್ವಜನಿಕ ಜಾಹೀರಾತುಗಳಿಗೆ ಕಡಿವಾಣ ಹಾಕುವ ತೀರ್ಪು ನೀಡಿದ್ದು ಇದೇ ನ್ಯಾ| ರಂಜನ್ ಗೊಗೋಯ್ ಅವರೆಯೇ.

ಮುಂಬರುವ ದಿನಗಳು ನೂತನ ಮುಖ್ಯನ್ಯಾಯಮೂರ್ತಿಗಳಿಗೆ ಬಹಳ ಸವಾಲಿನದ್ದಾಗಿದೆ. ಅನೇಕ ಪ್ರಮುಖ ಪ್ರಕರಣಗಳು ಚಾಲನೆಯಲ್ಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು ಇವಿಎಂ ಮತಯಂತ್ರಗಳ ಬಳಕೆ ಬಗ್ಗೆ ಮರುಪರಿಶೀಲನೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...