news18-kannada Updated:February 12, 2021, 4:34 PM IST
ಪ್ರಾತಿನಿಧಿಕ ಚಿತ್ರ
ಮಲತಾಯಿಯೊಬ್ಬರು 2 ವರ್ಷದ ಪುಟ್ಟ ಕಂದನನ್ನು ಬಿಸಿನೀರಿನಿಂದ ತುಂಬಿದ ಬಾತ್ ಟಬ್ ನಲ್ಲಿ ಹಾಕಿ ಕೊಂದು ಹಾಕಿದ್ದಾಳೆ. ತಾನು ಮಾಡಿದ ಮಹಾಪಾಪಕ್ಕೆ ಇದೀಗ ಆಕೆ ಜೈಲುಕಂಬಿ ಎಣಿಸುತ್ತಿದ್ದಾಳೆ. 2018 ರಂದು ಜೋರ್ಡಾನ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿತ್ತು. ಘೋರ ಕೃತ್ಯವೆಸಗಿ ಮಗುವನ್ನು ಕೊಂದ ಆರೋಪದಡಿ ಮಲತಾಯಿಗೆ 20 ವರ್ಷಗಳ ಶಿಕ್ಷೆ ವಿಧಿಸಿ ಜೋರ್ಡಾನ್ ಸುಪ್ರೀಂಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದೆ. ಮೊದಲ ಹಂಡತಿಯ ಮಕ್ಕಳನ್ನು ಸಾಕುವ ವಿಚಾರವಾಗಿ ಗಂಡನ ಜೊತೆ ಜಗಳವಾಡಿದ 2ನೇ ಹೆಂಡತಿ ಈ ಘೋರ ಕೃತ್ಯವೆಸಗಿದ್ದಾಳೆ. ತನ್ನ ಮೊದಲ ಹೆಂಡತಿಯ 4 ವರ್ಷದ ಹಾಗೂ 2 ವರ್ಷದ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತಿ ಹೇಳಿದ್ದಾನೆ. ಮಲತಾಯಿಯಾಗಿ ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕುವುದು ಬಿಟ್ಟು ಪತಿಯ ಮೇಲೆಯೇ ಆಕೆ ಕೋಪಿಸಿಕೊಂಡಿದ್ದಾಳೆ. ಪತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ 2 ವರ್ಷದ ಪುಟ್ಟ ಕಂದನನ್ನು ಕೊಲ್ಲಲು ನಿರ್ಧರಿಸಿದ್ದಾಳೆ.
ಅದರಂತೆ ಬಿಸಿನೀರಿನಿಂದ ತುಂಬಿದ ಬಾತ್ ಟಬ್ ನಲ್ಲಿ ಮಗುವನ್ನು ಮುಳುಗಿಸಿ ಅತ್ಯಂತ ಕ್ರೂರವಾಗಿ ಪುಟ್ಟಕಂದನನ್ನು ಕೊಲೆ ಮಾಡಿದ್ದಾಳೆ. ಕುದಿಯುವ ನೀರನ್ನು ಸ್ನಾನದತೊಟ್ಟಿಯಲ್ಲಿ ಸುರಿದು 2 ವರ್ಷದ ಬಾಲಕನನ್ನು ಅದರೊಳಗೆ ಹಾಕಿರುವುದನ್ನು ಮಲತಾಯಿ ಒಪ್ಪಿಕೊಂಡಿದ್ದಾಳೆ. ಪುಟ್ಟ ಮಗು ಕಿರುಚಲು ಪ್ರಾರಂಭಿಸಿದಾಗ ಆಕೆ ಹೊರತೆಗೆದಿದ್ದಾಳೆ. ಸುಟ್ಟಗಾಯಗಳಿಂದ ಬಳಲುತ್ತಿದ್ದ ಕಂದನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ 15 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಇದನ್ನು ಓದಿ: ದೀದಿಗೆ ಮತ್ತೊಂದು ಶಾಕ್; ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿ ಸಂಸದ
2019ರ ನವೆಂಬರ್ನಲ್ಲಿ ಆಕೆಯನ್ನು ಕೆಳ ಹಂತದ ನ್ಯಾಯಾಲಯವು ಜೈಲಿಗೆ ಹಾಕಿತ್ತು. ಆದರೆ, ಆಕೆಯ ಪರ ವಕೀಲರು ಈ ತೀರ್ಪನ್ನು ಪ್ರಶ್ನಿಸಿತ್ತು. ಜೋರ್ಡಾನ್ನ ಸುಪ್ರೀಂಕೋರ್ಟ್ ಈಗ 20 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಬಾಲಕನನ್ನು ಕೊಂದಿದ್ದಕ್ಕಾಗಿ ಆರೋಪಿಗೆ ಸೂಕ್ತ ಶಿಕ್ಷೆಯನ್ನು ನೀಡಲಾಗಿದೆ ಎಂದು ಅಂತಿಮ ತೀರ್ಪು ನೀಡಿದೆ.
ತಾನು ಮಾಡಿದ ತಪ್ಪಿಗೆ ವಿಧಿಸಿದ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಆಕೆ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದಳಾದರೂ ಪ್ರಯೋಜನವಾಗಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಅವರ ಬೆಳವಣಿಗೆಗೆ ಕಾರಣವಾಗಬೇಕಿದ್ದ ಮಲತಾಯಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಘೋರ ಕೃತ್ಯವನ್ನು ಎಸಗಿರುವುದು ಭಯಾನಕ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಲ್ಲಿ ಆಕೆ ಇಬ್ಬರು ಮಕ್ಕಳಿಗೆ ಆಗಾಗ ಹೊಡೆದು ಹಿಂಸೆ ನೀಡುತ್ತಿದ್ದಳು ಎಂದು ಕೂಡ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
Published by:
Seema R
First published:
February 12, 2021, 4:34 PM IST