ಕರುಣಾನಿಧಿ ಸತ್ತ ನಂತರ ಅಪ್ಪನನ್ನು ಅಪ್ಪ ಎಂದು ಕರೆಯುವ ಕೊನೆ ಅವಕಾಶ ಮಗ ಸ್ಟಾಲಿನ್​ಗೆ..!

news18
Updated:August 8, 2018, 6:27 PM IST
ಕರುಣಾನಿಧಿ ಸತ್ತ ನಂತರ ಅಪ್ಪನನ್ನು ಅಪ್ಪ ಎಂದು ಕರೆಯುವ ಕೊನೆ ಅವಕಾಶ ಮಗ ಸ್ಟಾಲಿನ್​ಗೆ..!
news18
Updated: August 8, 2018, 6:27 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಕರುಣಾನಿಧಿ ಅವರ ಮರಣದಿಂದ ಹೆಚ್ಚು ವಿಚಲಿತರಾಗಿ ನೋವು ತಿಂದವರು ಸ್ಟಾಲಿನ್. 65 ವರ್ಷಗಳಿಂದ ಅಪ್ಪನ ಗರಡಿಯಲ್ಲಿ ಬೆಳೆದು, ರಾಜಕೀಯ ಪಟ್ಟುಗಳನ್ನ ಕಲಿತ ಸ್ಟಾಲಿನ್​ ಅವರ ರಾಜಕೀಯ ಜೀವನ ಏರಿಳಿತಗಳನ್ನು ಕಣ್ಣಾರೆ ಕಂಡವರು.

ಸ್ಟಾಲಿನ್ ಅವರು ಬುದ್ದಿ ಬಂದಾಗನಿಂದ ಅಪ್ಪನನ್ನು ಕೇವಲ ನಾಯಕನಾಗಿಯೇ ನೋಡಿದ್ದಾರೆ. ಅಂದಿನಿಂದ ಅವರ ಅಗಲಿಕೆಯವರೆಗೂ ಎಂದೂ ಅಪ್ಪ ಎಂದು ಕರೆದೇ ಇಲ್ಲವಂತೆ. ತಂದೆಯನ್ನು ಅಪ್ಪ ಎಂದು ಕರೆಯಲು ಒಂದು ಅವಕಾಶ ಸಿಗದಿದ್ದಕ್ಕೆ ಇಂದಿಗೂ ಅವರಿಗೆ ನೋವಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ಅಪ್ಪ ಮಗನ ನಡುವೆ ಕೇವಲ ನಾಯಕ ಹಾಗೂ ಕಟ್ಟಾ ಹಿಂಬಾಲಕನ ಸಂಬಂಧವಿತ್ತು. ಆದರೂ ಈ ಸಂಬಂಧದಲ್ಲಿ ಒಂದು ಭಾವನಾತ್ಮಕ ನಂಟಿತ್ತು. ಇದರಿಂದಲೇ ತಂದೆಯ ಅಗಲಿಕೆಯ ದುಖಃವನ್ನು ಸ್ಟಾಲಿನ್​ ಒಂದು ಭಾವನಾತ್ಮಕ ಕವಿತೆಯ ಮೂಲಕ ವ್ಯಕ್ತಪಡಿಸಿದ್ದಾರೆ.

ಬದುಕಿನುದ್ದಕ್ಕೂ ನಿನ್ನನ್ನ ನಾನು ತಲೈವಾ ಎಂದೇ ಕರೆದುಬಿಟ್ಟೆ. ಈಗ ನಿಸ್ಥೇಜನಾಗಿ ಮಲಗಿದ್ದೀಯ. ನಿನ್ನನ್ನ ನಾನು ಅಪ್ಪ ಅಂತ ಕರೆಯಲೇ ಎಂದು ಕವಿತೆಯಲ್ಲಿ ಕೇಳುತ್ತಾರೆ. ಅಂದರೆ ಬದುಕಿನದ್ದಕ್ಕೂ ಕರುಣಾನಿಧಿ ಸ್ಟಾಲಿನ್​ಗೆ ಒಬ್ಬ ನಾಯಕನಾಗಿ ಕಂಡವರು. ಹಾಗೆಯೇ ಪ್ರೀತಿಸಿದರು.

ತಂದೆಯ ಹೋರಾಟ, ಹಾರಾಟ ಅಧಃಪತನ ಎಲ್ಲವನ್ನೂ ಸ್ಟಾಲಿನ್ ಕಂಡಿದ್ದು ಒಬ್ಬ ನಾಯಕನಾಗಿಯೇ. ಈಗ ಅದೇ ನಾಯಕ ಇಲ್ಲ. ಸ್ಟಾಲಿನ್​ ಅವರಿಗೆ ತನ್ನೊಳಗಿನ ಅಪ್ಪ ನೆನಪಾಗಿದ್ದಾರೆ. ಎಂಥ ವೈರುದ್ಧ್ಯ ಅಲ್ಲವೆ. ಬಹುಶಃ ಅಪ್ಪ ಅಂತ ಬದುಕಿದ್ದಾಗಲೇ ಕರೆದಿದ್ದರೆ ಕರುಣಾನಿಧಿಗೆ ಇನ್ನಷ್ಟು ಸಂತೋಷವಾಗುತ್ತಿತ್ತೋ ಏನೋ. ಮಾನವೀಯ ಸಂಬಂಧದ ವಿಚಿತ್ರಗಳೇ ಹಾಗೆ. ಕೆಲವೊಮ್ಮೆ ಒಟ್ಟಿಗಿದ್ದರೂ ಆ ಭಾವನೆ ಬರುವುದೇ ಇಲ್ಲ.

ಕೆಲವೊಮ್ಮೆ ಮಾನವ ಸಂಬಂಧಗಳು ಎಷ್ಟು ಗೊಂದಲದ ಗೂಡಾಗಿರುತ್ತವೆ ಎಂದರೆ, ಅಪ್ಪ-ಮಗ ಜೊತೆಗಿದ್ದರು ಇಬ್ಬರೂ ಆ ಪ್ರೀತಿ ವ್ಯಕ್ತಪಡಿಸುವಲ್ಲಿ ಸೋತಿರುತ್ತಾರೆ. ಹೀಗಾಗಿಯೇ ಇಬ್ಬರೂ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಇಲ್ಲೂ ಅಷ್ಟೆ ಈ ಅಪ್ಪ-ಮಗನ ಸಂಬಂಧ ಕೇವಲ ಹೆಸರಿಗೆ ಮಾತ್ರವಿತ್ತು. ಇಲ್ಲಿ ಅಪ್ಪ, ಮಗನಿಗೆ ನಾಯಕನಾಗಿ, ಮಗ ಅಪ್ಪನನ್ನು ಮಾರ್ಗದರ್ಶನ ತೋರುವ ಗುರುವಿನಂತೆ ಗೌರವಿಸುತ್ತಿದ್ದ. ಕೇವಲ ಗೌರವ ಎಂಬ ಗೋಡೆಯ ಹಿಂದೆ ಅಪ್ಪ-ಮಗನ ಪ್ರೀತಿಯ ಗೋಡೆ ಬಹಳ ಚಿಕ್ಕದಾಗಿತ್ತು.
Loading...

ಸಂಬಂಧಗಳಿಗಿಂತ ಪಕ್ಷ ಹಾಗೂ ಸಿದ್ಧಾಂತಗಳಿಗೆ ಹೆಚ್ಚಿನ ಮಹತ್ವ ನೀಡಿದ ಕಾರಣಕ್ಕೆ ಏನೋ ಈಗ ಸ್ಟಾಲಿನ್​ ಅವರಿಗೆ ಅಪ್ಪನ ಪ್ರೀತಿಯ ನೆನಪಾಗಿದೆ.

ಅಪ್ಪನ ನೆನೆದ ಅವರು ಬರೆದ ಕವಿತೆ ಓದಿದರೆ ಎಂಥವರ ಹೃದಯವನ್ನೂ ತಟ್ಟುವುದರ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ. ಸ್ಟಾಲಿನ್​ ತಮಿಳಿನಲ್ಲಿ ಅಪ್ಪನಿಗೆ ಬರೆದ ಕವಿತೆಯ ಭಾವಾರ್ಥ ಇಲ್ಲಿದೆ...

ಅಪ್ಪಾ..
ಎಲ್ಲಿಗೆ ಹೋಗುವುದಿದ್ದರೂ ನೀನು
ನನಗೆ ಹೇಳಿ ಹೋಗುತ್ತಿದ್ದೆ
ಈಗೇಕೆ ಹೀಗೆ ಏನೂ ಹೇಳದೆ ನಡೆದುಬಿಟ್ಟೆ?
ತತ್ತರಿಸುವ ಸ್ಥಿತಿ ನನಗೆ ತಂದಿಟ್ಟು
ನೀನು ಹೋಗಿದ್ದಾದರೂ ಎಲ್ಲಿಗೆ?
33 ವರ್ಷಗಳ ಹಿಂದೆಯೇ ಹೇಳಿಬಿಟ್ಟಿದ್ದೆಯಲ್ಲ ನೀನು,
ನಿನ್ನ ಸ್ಮಾರಕದಲ್ಲೇನು ಬರೆಯಬೇಕೆಂದು;
ಬದುಕಿನುದ್ದಕ್ಕೂ ಹೋರಾಟ ಮಾಡಿದವನೊಬ್ಬ
ಈಗಿಲ್ಲಿ ಮಲಗಿದ್ದಾನೆ ಅಂತ?
ತೃಪ್ತಿಯಾಗಿದೆಯಾ ತಮಿಳು ಜನತೆಗೆ
ನೀ ಕೊಟ್ಟಿರುವ ಸೇವೆ?
ಸಾಕಾಯ್ತು ಮಾಡಿದ್ದು
ಎಂದು ನಿರ್ಧರಿಸಿ ಮಲಗಿಬಿಟ್ಟೆಯಾ?
ಅಥವಾ, ಬೇರಾರು ಸರಿಗಟ್ಟುತ್ತಾರೆ
ನಿನ್ನ 80 ವರ್ಷಗಳ ಸಾಧನೆ ನೋಡೋಣ
ಎಂದು ಮರೆಯಲ್ಲಿ ನಿಂತು ನೋಡುತ್ತಿರುವೆಯಾ?
ಮೊನ್ನೆ ಮೊನ್ನೆ, ಜೂನ್ 3ರಂದು ನಿನ್ನ ಹುಟ್ಟುಹಬ್ಬ
ಬೇಡಿದ್ದೆ ನಾನು ನಿನ್ನಲ್ಲಿ,
ನಿನ್ನ ಸಾಮರ್ಥ್ಯದ ಅರ್ಧದಷ್ಟಾದರೂ
ನನಗೆ ಕೊಡು ಎಂದು.
ಎಷ್ಟೋ ವರ್ಷಗಳ ಹಿಂದೆ ಅರಿಗ್ನಾರ್ ಅಣ್ಣಾ
ಅವರಿಂದ ಪಡೆದ ಗುಂಡಿಗೆಯನ್ನು ನನಗೆ ಕೊಡು ಎಂದು
ಅದಷ್ಟು ನನಗೆ ದೊರೆತರೆ ಸಾಕು,
ನಿನ್ನ ಕನಸು-ಆದರ್ಶಗಳಲ್ಲಿ
ಅರ್ಧದಷ್ಟನ್ನಾದರೂ ಈಡೇರಿಸಬಲ್ಲೆನೇನೋ..
ಕೋಟ್ಯಂತರ ಡಿಎಂಕೆ ಸೋದರರ
ಪರವಾಗಿ ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ,
ಕೇವಲ ಒಂದು ಸಾರಿ ಕರೆದುಬಿಡು
ಎಲ್ಲರನ್ನೂ ನೀನು ಸದಾ ಕರೆಯುತ್ತಿದ್ದ ಹಾಗೆ
ಒಡಹುಟ್ಟಿದ ಸೋದರರೇ ಎಂದು
ಅಷ್ಟು ಸಾಕು, ಶತಮಾನಗಳ ಕಾಲ
ನಮ್ಮಲ್ಲಿ ಶಕ್ತಿ, ಉತ್ಸಾಹ, ಚೈತನ್ಯ ತುಂಬುವುದಕ್ಕೆ
ಮತ್ತೊಂದು ಬೇಡಿಕೆ; ಬದುಕಿನುದ್ದಕ್ಕೂ ನಾನು
ನಿನ್ನನ್ನು ತಲೈವಾ ಎಂದೇ ಕರೆದುಬಿಟ್ಟೆ,
ಇದೊಂದು ಸಲ ಅಪ್ಪಾ ಎನ್ನಲೇ?
- ಕಂಬನಿ ತುಂಬಿದ ಕಂಗಳ ನಿನ್ನ ಮಗ, ಎಂ ಕೆ ಸ್ಟಾಲಿನ್.

.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...