ನಟಿ ರಿಯಾ ಚಕ್ರವರ್ತಿ ವಿರುದ್ಧ ನಟ ಸುಶಾಂತ್ ಅವರ ತಂದೆ ಬಿಹಾರದ ಪಾಟ್ನದಲ್ಲಿ ದಾಖಲಿಸಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಹೃಷಿಕೇಶ ರಾಯ್, ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರೆಸಲಿದೆ ಎಂದು ಆದೇಶ ನೀಡಿದ್ದಾರೆ.
ಪಾಟ್ನಾದಲ್ಲಿ ದಾಖಲಾಗಿದ್ದ ಎಫ್ಐಆರ್ ಸಿಂಧುವಿಲ್ಲ. ಅದನ್ನು ಮುಂಬೈಗೆ ವರ್ಗಾಯಿಸಬೇಕೆಂದು ರಿಯಾ ಮಾಡಿಕೊಂಡ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಪಾಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಹಕರಿಸಬೇಕು ಹಾಗೂ ಮಹಾರಾಷ್ಟ್ರ ಪೊಲೀಸರು ಅಗತ್ಯ ದಾಖಲೆಗಳನ್ನು ಸಿಬಿಐಗೆ ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟನ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದರು. ಪಾಟ್ನಾದಲ್ಲಿ ನಟ ಸುಶಾಂತ್ ಅವರ ತಂದೆ ನೀಡಿರುವ ದೂರನ್ನು ಆಧರಿಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ 306 (ಆತ್ಮಹತ್ಯೆಗೆ ಪ್ರಚೋದನೆ), 341 (ತಪ್ಪಾದ ಸಂಯಮಕ್ಕಾಗಿ ಶಿಕ್ಷೆ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ), 380 (ವಾಸಿಸುವ ಮನೆಯಲ್ಲೇ ಕಳ್ಳತನ), 406 (ವಿಶ್ವಾಸಾರ್ಹ ಉಲ್ಲಂಘನೆ) ಮತ್ತು 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
![sushanth]()
ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ
ಸುಶಾಂತ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ ಎಂದು ಆರೋಪಿಸಿದ್ದ ಅವರ ತಂದೆ ಕೆ.ಕೆ. ಸಿಂಗ್ ಕಳೆದ ಜುಲೈ 28 ರಂದು ಪಾಟ್ನಾದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನಟಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿದ್ದರು. ಅಲ್ಲದೆ, ಅಲ್ಪಾವಧಿಯಲ್ಲಿಯೇ ರಿಯಾ ಅವರು ಸುಶಾಂತ್ ಅವರ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಸುಶಾಂತ್ ಸಿಂಗ್ ತಂದೆ ನೀಡಿರುವ ದೂರಿನ ಅನ್ವಯ ಜಾರಿ ನಿರ್ದೇಶನಾಯಲ ಸಹ ರಿಯಾ ಚಕ್ರವರ್ತಿ ಅವರ ವಿಚಾರಣೆ ನಡೆಸಿದೆ. ಸುಶಾಂತ್ ಸಾವಿನ ಪ್ರಕರಣ ದಿನಕ್ಕೊಂದು ರೀತಿಯ ತಿರುವು ಪಡೆಯುತ್ತಿದ್ದು, ಮುಂಬೈ ಪೊಲೀಸರ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಇದೇ ಕಾರಣದಿಂದಾಗಿ ಸುಶಾಂತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ನಡೆಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ