ಬಾಲಿವುಡ್ ಬಾದ್​ಶಾ ಭೇಟಿಗೆಂದು ಬಂದು ಜೈಲುಪಾಲಾಗಿದ್ದ ಪಾಕ್ ಪ್ರಜೆ 22 ತಿಂಗಳ ಬಳಿಕ ಬಿಡುಗಡೆ

Latha CG | news18india
Updated:December 29, 2018, 5:59 PM IST
ಬಾಲಿವುಡ್ ಬಾದ್​ಶಾ ಭೇಟಿಗೆಂದು ಬಂದು ಜೈಲುಪಾಲಾಗಿದ್ದ ಪಾಕ್ ಪ್ರಜೆ 22 ತಿಂಗಳ ಬಳಿಕ ಬಿಡುಗಡೆ
ಶಾರುಖ್​ ಖಾನ್​
  • Share this:
ನವದೆಹಲಿ(ಡಿ. 29): 6 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಮುಂಬೈನ ಹಮೀದ್​ ಅನ್ಸಾರಿ ಮೊನ್ನೆಯಷ್ಟೇ ಬಿಡುಗಡೆಯಾಗಿ ಭಾರತಕ್ಕೆ ಬಂದರು. ಈ ಘಟನೆಯ ನೆನಪು ಮಾಸುವ ಬೆನ್ನಲ್ಲೇ ಭಾರತದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಪಾಕಿಸ್ತಾನದ ಪ್ರಜೆಯೊಬ್ಬ ಬಿಡುಗಡೆಯಾಗಿ ತವರಿಗೆ ಮರಳಿದ್ದಾರೆ. ಶಾರುಕ್ ಖಾನ್ ಮತ್ತು ಕಾಜೋಲ್ ಅವರನ್ನು ಭೇಟಿ ಮಾಡಲು ಅಕ್ರಮ ಮಾರ್ಗದಲ್ಲಿ ಬಂದಿದ್ದ ಈ ಪಾಕ್ ಪ್ರಜೆಗೆ ಸೆಲಬ್ರಿಟಿಗಳ ದರ್ಶನ ಭಾಗ್ಯದ ಬದಲು ಜೈಲುಭಾಗ್ಯ ಸಿಕ್ಕಿತು.

22 ವರ್ಷದ ಅಬ್ದುಲ್ಲಾ 22 ತಿಂಗಳುಗಳ ಕಾಲ ಭಾರತೀಯ ಜೈಲಿನಲ್ಲಿದ್ದ. ಈತ ಪಾಕಿಸ್ತಾನದ ಮಿಂಗೋರಾ ಪ್ರದೇಶದ ನಿವಾಸಿ. ಅನ್ಸಾರಿ ತನ್ನ ಪ್ರೇಯಸಿಯನ್ನು ಭೇಟಿಯಾಲು ಪಾಕಿಸ್ತಾನದ ಗಡಿ ದಾಟಿ ಹೋದರೆ, ಅಬ್ದುಲ್ಲಾ ಭಾರತದ ಬಾಲಿವುಡ್​ ನಟರನ್ನು ಭೇಟಿಯಾಗಲು ಗಡಿ ದಾಟಿ ಬರುತ್ತಾನೆ. ಅಬ್ದುಲ್​ ಬಾಲಿವುಡ್​ ನಟರಾದ ಶಾರುಖ್​ ಖಾನ್​ ಮತ್ತು ಕಾಜೋಲ್​ ಅವರನ್ನು ಭೇಟಿಯಾಗಲು ಅಕ್ರಮ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದ. ಕಳೆದ ವರ್ಷ ಅಂದರೆ 2017 ರ ಮೇ 25 ರಂದು ಭಾರತೀಯ ಅಧಿಕಾರಿಗಳು ವಾಘಾ ಗಡಿಯಲ್ಲಿ ಅಬ್ದುಲ್ಲಾ ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಆರು ವರ್ಷ ಪಾಕ್​ ಜೈಲಲ್ಲಿದ್ದ ಹಮೀದ್ ಅನ್ಸಾರಿ ಭಾರತಕ್ಕೆ ವಾಪಸ್

ಬಾಲಿವುಡ್​ ನಟರನ್ನು ಭೇಟಿ ಮಾಡುವುದು ಅಬ್ದುಲ್ಲಾ ಅವರ ಅಭಿಲಾಷೆಯಾಗಿತ್ತು. ಆದರೆ ಅವರ ಆಸೆ ಈಡೇರಿರಲಿಲ್ಲ. ಹೀಗಾಗಿ ಅಬ್ದುಲ್ಲಾ ಬಾಲಿವುಡ್​ ಸ್ಟಾರ್ ನಟರಾದ ಶಾರುಖ್​ ಖಾನ್ ಮತ್ತು ಕಾಜೋಲ್​ ಅವರನ್ನು ಭೇಟಿ ಮಾಡಲು ಭಾರತೀಯ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಭಾರತೀಯ ಜೈಲಿನಿಂದ ಬಿಡುಗಡೆಗೊಂಡು ಪಾಕಿಸ್ತಾನಕ್ಕೆ ತೆರಳಿದ ಅಬ್ದುಲ್ಲಾ ಅವರನ್ನು ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗೆಳೆಯರು ಆತ್ಮೀಯವಾಗಿ ಸ್ವಾಗತಿಸಿದರು.

'ನನ್ನನ್ನು ಭಾರತದ ಗಡಿ ಭದ್ರತಾ ಪಡೆ ಬಂಧಿಸಿ ಅಮೃತಸರದ ಕೇಂದ್ರೀಯ ಕಾರಾಗೃಹಕ್ಕೆ ಕಳಿಸುವ ಮುನ್ನ ಪೊಲೀಸ್​ ಠಾಣೆಗೆ ಸ್ಥಳಾಂತರಿಸಿತ್ತು. ಬಾಲಿವುಡ್​ ನಟರಾದ ಶಾರುಖ್​ ಖಾನ್​ ಮತ್ತು ಕಾಜೋಲ್​ ಅವರನ್ನು ಭೇಟಿಯಾಗಲು ವ್ಯವಸ್ಥೆ ಮಾಡಿ ಎಂದು ನಾನು ಭಾರತ ಸರ್ಕಾರಕ್ಕೆ ಪತ್ರ ಬರೆದು, ಜೈಲಿನ ಅಧಿಕಾರಿಗಳ ಮುಖಾಂತರ ಕಳಿಸಿದ್ದೆ, ಆದರೆ ನನ್ನ ಮನವಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ' ಎಂದು ಅಬ್ದುಲ್ಲಾ ಹೇಳುತ್ತಾರೆ.

ಅಷ್ಟೇ ಅಲ್ಲದೇ, ಪಾಕಿಸ್ತಾನಿ ಪ್ರಜೆಗಳು ಯಾವುದೇ ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ಬರಬೇಡಿ ಎಂದು ಅಬ್ದುಲ್ಲಾ ಮನವಿ ಮಾಡಿದ್ದಾರೆ. ನಾನು ಇನ್ನೆಂದೂ ಅಕ್ರಮ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
First published: December 29, 2018, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading