ಕೊಲಂಬೋ: ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೆ ಒಳಗಾಗಿದ್ದ ಭಾರತದ 54 ಮೀನುಗಾರರ ಪೈಕಿ 40 ಜನರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಲಂಕಾ ನೌಕಾಪಡೆಯು ವಶಕ್ಕೆ ಪಡೆದಿದ್ದ ಐದು ದೋಣಿಗಳಲ್ಲಿ ನಾಲ್ಕು ದೋಣಿಗಳನ್ನು ಮರಳಿಸಲಾಗಿದೆ. ಪುದುಚೇರಿಯ ಕಾರೈಕಲ್ ಮೂಲದ 14 ಮೀನುಗಾರರು ಶ್ರೀಲಂಕಾ ವಶದಲ್ಲಿಯೇ ಇದ್ದು, ತಡವಾಗಿ ಅವರ ಬಿಡುಗಡೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆಯು ದೇಶದ ಸರಹದ್ದಿನ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಐದು ಮೀನುಗಾರಿಕಾ ಬೋಟ್ ಮತ್ತು ಕನಿಷ್ಠ 54 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ಗುರುವಾರ ತಿಳಿಸಿತ್ತು.
ನೌಕಾಪಡೆಯು 14 ಮೀನುಗಾರರನ್ನೊಳಗೊಂಡು ಭಾರತೀಯ ಮೀನುಗಾರಿಕೆಯ ದೊಡ್ಡ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಬಂಧಿಸಿತ್ತು.
ಆಗಾಗ್ಗೆ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸುತ್ತಿರುವ ಕುರಿತು ಮೀನುಗಾರರ ಒಕ್ಕೂಟದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಶೀಘ್ರ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೀನುಗಾರರು ಆದಷ್ಟು ಬೇಗನೇ ಬಿಡುಗಡೆಯಾಗದಿದ್ದರೆ, ಮೀನುಗಾರಿಕೆ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಏಪ್ರಿಲ್ 6ರ ತಮಿಳುನಾಡು ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ