ಕೊಲಂಬೋ(ಮಾ. 14): ಶ್ರೀಲಂಕಾ ದೇಶದಲ್ಲಿ ಬುರ್ಖಾ ನಿಷೇಧಕ್ಕೆ ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿನ ಸಾರ್ವಜನಿಕ ಭದ್ರತಾ ಸಚಿವ ನಿವೃತ್ತ ನೌಕಾಪಡೆ ಅಧಿಕಾರಿ ಸರತ್ ವೀರಸೇಕರ ಅವರು ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದ್ದು, ಸರ್ಕಾರ ಕೂಡ ಗಂಭೀರವಾಗಿ ಆಲೋಚಿಸುತ್ತಿದೆ. ಸಚಿವರೂ ಕೂಡ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಮಹಿಳೆಯರು ಬುರ್ಖಾ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಶಿಫಾರಸು ಮಾಡುವ ಕ್ಯಾಬಿನೆಟ್ ಪತ್ರಕ್ಕೆ ತಾನು ಸಹಿ ಹಾಕಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷ ಗೋಟಬಾಯ ರಾಜಪಕ್ಸ ಅವರ ಆಪ್ತರೆನಿಸಿರುವ ರೇರ್ ಅಡ್ಮಿರಲ್ ಸರತ್ ವೀರಸೇಕರ ಅವರು ಮಾಡಿರುವ ಬುರ್ಖಾ ನಿಷೇಧದ ಪ್ರಸ್ತಾಪವನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಕಾನೂನಾಗಿ ರೂಪುಗೊಳ್ಳಲಿದೆ.
“ಶ್ರೀಲಂಕಾಗೆ ಬುರ್ಖಾ ಹೊಸತು. ಹಿಂದೆ ಯಾವ ಮುಸ್ಲಿಮ್ ಮಹಿಳೆಯರೂ ಬುರ್ಖಾ ಧರಿಸುತ್ತಿರಲಿಲ್ಲ. ಶ್ರೀಲಂಕಾದಲ್ಲಿ ಎಲ್ಲಾ ಧರ್ಮೀಯರು ಸುದೀರ್ಘ ಕಾಲ ಶಾಂತಿಯುತ ಸಹಭಾಳ್ವೆ ಹೊಂದಿದ್ದರು. ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರು ಬುರ್ಖಾ ಧರಿಸುತ್ತಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ ತರುತ್ತದೆ” ಎಂದು ಸಚಿವ ವೀರಸೇಕರ ಅಭಿಪ್ರಾಯಪಟ್ಟಿದ್ಧಾರೆ.
ಶ್ರೀಲಂಕಾದಲ್ಲಿ ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಅಲ್ಲಿ ಬುರ್ಖಾ ನಿಷೇಧಕ್ಕೆ ಬಹಳ ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಲಂಕಾ ಸಂಸ್ಕೃತಿಗೆ ಬುರ್ಖಾ ಹೊಂದಿಕೆಯಾಗುವುದಿಲ್ಲ ಎಂಬುದು ಅಲ್ಲಿನವರ ಅಸಮಾಧಾನ. 2019ರಲ್ಲಿ ಈಸ್ಟರ್ ಸಂಡೇ ಹಬ್ಬದಂದು ಉಗ್ರಗಾಮಿ ದಾಳಿ ಸಂಭವಿಸಿದ ಬಳಿಕ ಮುಸ್ಲಿಮರ ಮೇಲೆ ಕಣ್ಣಿಡಬೇಕೆಂಬ ಅಭಿಪ್ರಾಯಗಳು ಹೆಚ್ಚಾಗಿ ಕೇಳಿಬಂದವು. ಕೆಲ ಕಟ್ಟರ್ ಬೌದ್ಧ ಬಿಕ್ಕುಗಳು ಬುರ್ಖಾ ನಿಷೇಧಿಸಬೇಕೆಂದು ಒತ್ತಾಯ ಹಾಕುತ್ತಲೇ ಬಂದಿದ್ದಾರೆ.
ಆದರೆ, ಶ್ರೀಲಂಕಾದ ಕೆಲ ಮುಸ್ಲಿಮ್ ಸಂಘಟನೆಗಳು ಬುರ್ಖಾ ನಿಷೇಧ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿವೆ. ಬುರ್ಖಾ ಧರಿಸುವುದು ಮುಸ್ಲಿಮ್ ಮಹಿಳೆಯರ ಮೂಲಭೂತ ಹಕ್ಕಾಗಿದ್ದು, ಅದನ್ನು ಸರ್ಕಾರ ನಿಷೇಧಿಸಲು ಆಗದು ಎಂದು ಇವು ಹೇಳುತ್ತಿವೆ. ಆದರೆ, ಸರ್ಕಾರ ಕೂಡ ಒತ್ತಡದಲ್ಲಿದೆ. ಮುಸ್ಲಿಮ್ ಸಮುದಾಯ ಮೂಲಭೂತವಾದವನ್ನ ಅಪ್ಪಿಕೊಳ್ಳುತ್ತಿದ್ದು ಇದು ಸಿಂಹಳೀ ರಾಷ್ಟ್ರವನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಾ ಹೋಗುತ್ತಿದೆ. ಈಗಲೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯಗಳು ಸರ್ಕಾರದೊಳಗೆ ಹೆಚ್ಚಾಗಿ ಕೇಳಿಬರುತ್ತಿವೆ. ಬುರ್ಖಾ ನಿಷೇಧದ ಜೊತೆಗೆ ಸರ್ಕಾರ 1,000 ಸಾವಿರ ಮದರಸಾ ಶಿಕ್ಷಣ ಸಂಸ್ಥೆಗಳನ್ನ ಮುಚ್ಚಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಶ್ರೀಲಂಕಾದಲ್ಲಿ ಇರುವ 2.2 ಕೋಟಿ ಜನಸಂಖ್ಯೆ ಪೈಕಿ ಮುಸ್ಲಿಮರು 20 ಲಕ್ಷದಷ್ಟಿದ್ದಾರೆ. ಅಂದರೆ ಶೇ. 10ರಷ್ಟು ಜನಸಂಖ್ಯೆ ಮುಸ್ಲಿಮರದ್ದು. ಈಶಾನ್ಯ ಭಾಗದಲ್ಲಿ ಇವರ ಪ್ರಮಾಣ ಹೆಚ್ಚು. ಭಾರತದಲ್ಲಿರುವ ಮುಸ್ಲಿಮರಿಗೆ ಹೋಲಿಸಿದರೆ ಲಂಕಾ ಮುಸ್ಲಿಮರು ತಕ್ಕಮಟ್ಟಿಗೆ ಸಿರಿವಂತರು. ಇವರಲ್ಲಿ ಬಹುತೇಕರು ವ್ಯಾಪಾರಸ್ಥರಾಗಿದ್ದು, ಶ್ರೀಮಂತರೂ ಹೌದು. ಲಂಕಾ ರಾಜಧಾನಿ ಕೊಲಂಬೋದಲ್ಲಿರುವ ಬಹುತೇಕ ವ್ಯಾಪಾರಗಳು ಮುಸ್ಲಿಮರ ನಿಯಂತ್ರಣದಲ್ಲೇ ಇವೆ.
ಇದನ್ನೂ ಓದಿ: ಎಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ - AICTE ಸ್ಪಷ್ಟನೆ
ಲಂಕಾದಲ್ಲಿರುವ ಮುಸ್ಲಿಮರಲ್ಲಿ ಬಹುತೇಕರು ತಮಿಳು ಭಾಷಿಕರಾಗಿದ್ದು, ತಮಿಳು ಸಂಸ್ಕೃತಿಯನ್ನ ಮೈಗೂಡಿಸಿಕೊಂಡಿದ್ಧಾರೆ. ಆದರೆ, ತಮ್ಮನ್ನು ತಾವು ತಮಿಳರು ಎಂದು ಕರೆಸಿಕೊಳ್ಳಲು ಇಚ್ಛಿಸದ ಇವರು ತಾವು ವಿಭಿನ್ನ ಎಂದು ವಾದಿಸುತ್ತಾರೆ. ಇದು ಆಗಿನ ಎಲ್ಟಿಟಿಇ ಮುಖ್ಯಸ್ಥ ಕ್ಯಾಪ್ಟನ್ ಪ್ರಭಾಕರನ್ ಅವರಿಗೆ ಇರಿಸುಮುರುಸು ತಂದಿತ್ತು. ಪರಿಣಾಮವಾಗಿ, ಎಲ್ಟಿಟಿಇ ಅಧೀನದಲ್ಲಿದ್ದ ಲಂಕಾ ಉತ್ತರ ಭಾಗದಿಂದ ಮುಸ್ಲಿಮರನ್ನ ಉಚ್ಛಾಟಿಸಲಾಯಿತು. ರಾತ್ರೋರಾತ್ರಿ ಲಕ್ಷಾಂತರ ಮುಸ್ಲಿಮರು ಮನೆಮಠ ಕಳೆದುಕೊಂಡು ನಿರ್ಗತಿಕರಾಗಬೇಕಾಯಿತು.
ಇತ್ತೀಚಿನ ದಿನಗಳಲ್ಲಿ ಲಂಕಾದಲ್ಲಿ ಕೋಮುಗಲಭೆಗಳು ಸಂಭವಿಸುವುದು ಹೆಚ್ಚಾಗಿದೆ. ಈಗ ಬುರ್ಖಾ ಮತ್ತು ಮದರಸಾ ಬಂದ್ ಮಾಡಲಿರುವುದು ಇಲ್ಲಿ ಇನ್ನಷ್ಟು ಪ್ರಕ್ಷುಬ್ದ ಪರಿಸ್ಥಿತಿಗೆ ಎಡೆ ಮಾಡಿಕೊಡುತ್ತದಾ ಅಥವಾ ಮುಸ್ಲಿಮ್ ಮೂಲಭೂತವಾದಕ್ಕೆ ಕಡಿವಾಣ ಬೀಳುತ್ತದಾ ಎಂಬುದನ್ನು ಕಾದುನೋಡಬೇಕು.
ವರದಿ: ಡಿ.ಪಿ. ಸತೀಶ್, CNN-News18
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ