ಪಾಕಿಸ್ತಾನದಲ್ಲಿ ಲಂಕಾ ನಾಗರಿಕನ ಬರ್ಬರ ಹತ್ಯೆ ಘಟನೆಗೆ ಶ್ರೀಲಂಕಾ ಆಘಾತ; ಉಗ್ರರ ಸದೆಬಡಿಯಲು ಆಗ್ರಹ

Sri Lanka National’s barbaric murder in Pakistan- ಪಾಕಿಸ್ತಾನದ ಆಪ್ತ ರಾಷ್ಟ್ರವಾದ ಶ್ರೀಲಂಕಾದ ನಾಗರಿಕರೊಬ್ಬರನ್ನು ಸಿಯಾಲ್​ಕೋಟ್​ನಲ್ಲಿ ಧರ್ಮಾಂಧರ ಗುಂಪು ಭೀಕರವಾಗಿ ಹಲ್ಲೆ ಎಸಗಿ ಸಾರ್ವಜನಿಕವಾಗಿಯೇ ಕೊಂದು ಸುಟ್ಟುಹಾಕಿದ ಘಟನೆಗೆ ಶ್ರೀಲಂಕಾ ಆಘಾತ ವ್ಯಕ್ತಪಡಿಸಿದೆ.

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್

  • News18
  • Last Updated :
  • Share this:
ಬೆಂಗಳೂರು, ಡಿ. 4: ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯೊಬ್ಬರನನ್ನು ಮತಾಂಧ ಗುಂಪೊಂದು ಭೀಕರವಾಗಿ ಹಲ್ಲೆಗೈದು ಕೊಂದು ನಂತರ ಸುಟ್ಟುಹಾಕಿದ ಘಟನೆ ನಿನ್ನೆ ಶುಕ್ರವಾರ ಸಂಭವಿಸಿದೆ. ಪಾಕಿಸ್ತಾನದ ಜೊತೆ ಹಿಂದಿನಿಂದಲೂ ಸೌಹಾರ್ದ ಸಂಬಂಧ ಹೊಂದಿರುವ ಶ್ರೀಲಂಕಾ, ಈ ಘೋರ ಘಟನೆಗೆ ಆಘಾತ ವ್ಯಕ್ತಪಡಿಸಿದೆ. ಅಪರಾಧಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಒತ್ತಾಯಿಸಿದೆ.

ಪ್ರಿಯಾಂತ ದಿಯಾವದನ ಕುಮಾರ ಎಂಬುವರು ಬರ್ಬರವಾಗಿ ಹತ್ಯೆಯಾದವರು. ಶ್ರೀಲಂಕಾ ನಾಗರಿಕರಾಗಿದ್ದ 40 ವರ್ಷದ ಪ್ರಿಯಾಂತ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್​ಕೋಟ್ ನಗರದಲ್ಲಿರುವ ರಾಜ್​ಕೋ ಇಂಡಸ್ಟ್ರೀಸ್ ಎಂಬ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಧರ್ಮನಿಂದನೆ ಆರೋಪಗಳನ್ನ ಮಾಡಿ ನೂರಾರು ಧರ್ಮಾಂಧರಿದ್ದ ಗುಂಪು ಶುಕ್ರವಾರ ಮಧ್ಯಾಹ್ನ ಫ್ಯಾಕ್ಟರಿ ಹೊರಗೆ ಪ್ರಿಯಾಂತರನ್ನ ಹಿಡಿದು ಭೀಕರವಾಗಿ ಥಳಿಸಿ ಹತ್ಯೆಗೈದು ನಂತರ ಸುಟ್ಟುಹಾಕಿ ಅಟ್ಟಹಾಸಗೈದಿದ್ದರು.

ಏನು ಧರ್ಮನಿಂದನೆ ಆರೋಪ?:

ಘಟನೆ ನಡೆದಾಗ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಪ್ರಕಾರ, ಪ್ರಿಯಾಂತ ಅವರು ತಮ್ಮ ಫ್ಯಾಕ್ಟರಿ ಗೋಡೆ ಮೇಲೆ ಅಂಟಿಸಲಾಗಿದ್ದ ಉಗ್ರ ಸಂಘಟನೆಯೊಂದರ ಪೋಸ್ಟರ್ ಅನ್ನು ಕಿತ್ತುಹಾಕಿದದರು. ತೆಹ್ರೀಕ್-ಎ-ಲಬೈಕ್ (TLP) ಎಂಬ ಉಗ್ರಸಂಘಟನೆಗೆ ಸೇರಿದ ಪೋಸ್ಟರ್ ಅದಾಗಿತ್ತು. ಇತ್ತೀಚೆಗಷ್ಟೇ ಪಾಕಿಸ್ತಾನ ಸರ್ಕಾರ ಈ ಉಗ್ರ ಸಂಘಟನೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಇದರ ಬೆನ್ನಲ್ಲೇ ಸಂಘಟನೆ ಈ ಘೋರ ಕೃತ್ಯ ಎಸಗಿದೆ.

ಉಗ್ರ ಸಂಘಟನೆ ಆರೋಪ ಇದು:

ತೆಹ್ರೀಕ್-ಎ-ಲಬೈಕ್ ಸಂಘಟನೆ ಹೇಳಿರುವ ಪ್ರಕಾರ, ರಾಜ್​ಕೋ ಇಂಡಸ್ಟ್ರೀಸ್ ಕಾರ್ಖಾನೆಯ ಗೋಡೆಯ ಮೇಲೆ ಅಂಟಿಸಲಾಗಿದ್ದ ಪೋಸ್ಟರ್​ನಲ್ಲಿ ಪವಿತ್ರ ಕುರಾನ್​ನ ಸಾಲುಗಳನ್ನ ಮುದ್ರಿಸಲಾಗಿತ್ತು. ಹೀಗಾಗಿ, ಈ ಪೋಸ್ಟರ್ ಅನ್ನು ಕಿತ್ತು ಕಸದ ಬುಟ್ಟಿಹಾಕುವ ಮೂಲಕ ಆ ವ್ಯಕ್ತಿಯಿಂದ (ಪ್ರಿಯಾಂತ) ಧರ್ಮನಿಂದನೆ ಆಯಿತೆಂಬ ಆರೋಪ ಮಾಡಲಾಗಿದೆ.

ಪ್ರಿಯಾಂತ ಅವರು ಟಿಎಲ್​​ಪಿ ಸಂಘಟನೆಯ ಪೋಸ್ಟರ್ ಅನ್ನು ಕಿತ್ತುಹಾಕಿದ ವಿಚಾರ ಬಹಳ ಬೇಗ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ. ಕೆಲವೇ ನಿಮಿಷಗಳಲ್ಲಿ ನೂರಾರು ಧರ್ಮಾಂಧರು ಫ್ಯಾಕ್ಟರಿಯನ್ನ ಸುತ್ತುವರಿದು ಪ್ರಿಯಾಂತನನ್ನು ಹಿಡಿದು ಸಾರ್ವಜನಿಕವಾಗಿಯೇ ಹೊಡೆದುಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಪ್ರಿಯಾಂತ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ದುರುಳುರು ಸುಟ್ಟುಹಾಕಿದ್ದರು.

ಇದನ್ನೂ ಓದಿ: Parag Agrawal​ ಸಿಇಒ ಆಗುತ್ತಿದ್ದಂತೆ ಟ್ವಿಟರ್​ ತೊರೆದ ಹಿರಿಯ ಅಧಿಕಾರಿಗಳು; ಕಾರಣ ಇದು!

ಈ ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಶ್ರೀಲಂಕಾ ಸರಕಾರ ಆಘಾತ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಚೇರಿಗೆ ಕರೆ ಮಾಡಿ, ಆರೋಪಿಗಳ ವಿರುದ್ಧ ತತ್​ಕ್ಷಣವೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.

ಆರೋಪಿಗಳನ್ನ ಸುಮ್ಮನೆ ಬಿಡುವುದಿಲ್ಲ ಎಂದ ಇಮ್ರಾನ್ ಖಾನ್:

ಪಾಕಿಸ್ತಾನಕ್ಕೆ ಶ್ರೀಲಂಕಾ ಮಿತ್ರರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಲಂಕಾ ಪ್ರಜೆಯ ಬರ್ಬರ ಹತ್ಯೆ ಘಟನೆ ಎರಡೂ ದೇಶಗಳ ಸಂಬಂಧ ಹದಗೆಡಲು ಎಡೆ ಮಾಡಿಕೊಡುವ ಅಪಾಯ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡಲೇ ತನಿಖೆಗೆ ಆದೇಶಿಸಿದರು. ಘಟನೆಗೆ ಕಾರಣರಾದ ಯಾರನ್ನೂ ಬಿಡುವುದಿಲ್ಲ. ಮೃತನ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದಾಗಿ ಇಮ್ರಾನ್ ಖಾನ್ ಹೇಳಿಕೆ ನೀಡಿದರು. ಇದೀಗ ಅಲ್ಲಿನ ಪೊಲೀಸರು 50ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ.

ಸ್ನೇಹಕ್ಕೆ ಸಂಚಕಾರ?:

ಪಾಕಿಸ್ತಾನದ ಖಾಸಗಿ ವಲಯದಲ್ಲಿ ನೂರಾರು ಲಂಕಾ ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ. ನಿನ್ನೆ ಆ ಘಟನೆ ನಡೆದ ಬಳಿಕ ಈ ಎಲ್ಲರ ಭದ್ರತೆ ಬಗ್ಗೆ ಅವರ ಕುಟುಂಬದವರಿಗೆ ಆತಂಕ ಕಾಡುತ್ತಿದೆ.

“ನಮಗೆ ನಂಬಲೂ ಆಗದಷ್ಟು ಆಘಾತ ಆಗಿದೆ. ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯನ್ನ ಕೊಂದುಹಾಕಬಹುದೆಂದು ಊಹಿಸಲೂ ಸಾಧ್ಯ ಆಗಿರಲಿಲ್ಲ. ಈ ದೇಶದಲ್ಲಿ ಹೆಚ್ಚುತ್ತಿರುವ ಧರ್ಮಾಂಧತೆ ನಮಗೆ ಕಳವಳಕಾರಿ ಎನಿಸಿದೆ. ಇಂಥ ಘಟನೆಗಳು ನಮ್ಮ ಈ ಎರಡು ದೇಶಗಳ ನಡುವಿನ ಬಾಂಧವ್ಯಕ್ಕೆ ಪೆಟ್ಟುಕೊಡಬಹುದು. ಸ್ವಾತಂತ್ರ್ಯ ಬಂದಾಗಿನಿಂದಲೂ ಪಾಕಿಸ್ತಾನ ನಮಗೆ ನೆರೆಯ ದೇಶ ಮಾತ್ರವಲ್ಲ, ಸ್ನೇಹ ರಾಷ್ಟ್ರವೂ ಆಗಿದೆ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶ್ರೀಲಂಕಾ ರಾಜತಾಂತ್ರಿಕ ಅಧಿಕಾರಿಯೊಬ್ಬರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.

ಉಗ್ರರನ್ನ ಸುಮ್ಮನೆ ಬಿಟ್ಟರೆ ಅನಾಹುತ ಎಂದ ಲಂಕಾ ಸಚಿವ:

ಇದೇ ವೇಳೆ, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಮಗ ಹಾಗೂ ಲಂಕಾದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ನಮಲ್ ರಾಜಪಕ್ಸ ಅವರು ಲಂಕಾ ಪ್ರಜೆಯ ಹತ್ಯೆ ಘಟನೆಯನ್ನ ಬಲವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: Actor Shivaram: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಹಿರಿಯ ನಟ ಶಿವರಾಮ್ ಇನ್ನಿಲ್ಲ

“ಪಾಕಿಸ್ತಾನದಲ್ಲಿ ಪ್ರಿಯಾಂತ ದಿಯಾವದನ ಅವರನ್ನ ಬರ್ಬರವಾಗಿ ಕೊಂದಿರುವ ಘಟನೆ ಖಂಡನೀಯವಾಗಿದೆ. ಈ ಘಟನೆಗೆ ಕಾರಣರಾದವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಉಗ್ರಗಾಮಿ ಶಕ್ರಿಗಳನ್ನ ಮುಕ್ತವಾಗಿ ಬಿಟ್ಟರೆ ಯಾರಿಗೆ ಏನು ಬೇಕಾದರೂ ಅನಾಹುತ ಆಗಬಹುದು ಎಂಬುದು ಅರಿವಿನಲ್ಲಿರಲಿ” ಎಂದು ನಮಲ್ ರಾಜಪಕ್ಸ ತಮ್ಮ ಹೇಳಿಕೆಯಲ್ಲಿ ಪಾಕಿಸ್ತಾನ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇನ್ನು, ಶ್ರೀಲಂಕಾದಲ್ಲಿರುವ ಪ್ರಮುಖ ಬೌದ್ಧ ಧರ್ಮೀಯ ಸಂಘಟನೆಯೊಂದು ಈ ಹತ್ಯೆ ಘಟನೆ ಬಹಳ ಗಂಭೀರ ಸ್ವರೂಪದ್ದೆಂದು ಹೇಳಿ ಖಂಡನೆ ವ್ಯಕ್ತಪಡಿಸಿದೆ. ಹಾಗೆಯೇ, ಶ್ರೀಲಂಕಾ ಅಧ್ಯಕ್ಷ ಗೋಟ್ಟಾಬಯ ರಾಜಪಕ್ಸ ಅವರು ಘಟನೆಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಪಾಕಿಸ್ತಾನದಲ್ಲಿರುವ ಇತರ ಲಂಕಾ ನಾಗರಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ಧಾರೆ.ರಾಜತಾಂತ್ರಿಕ ಅಧಿಕಾರಿಗಳಿಂದಲೂ ನಿಗಾ:

ಎರಡೂ ದೇಶಗಳ ರಾಜತಾಂತ್ರಿ ಸಿಬ್ಬಂದಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ತಿಳಿದುಬಂದಿದೆ. ಅಪರಾಧಿಗಳನ್ನ ಕಾನೂನು ವಶಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಸಂಪರ್ಕಲ್ಲಿರಬೇಕೆಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ನಲ್ಲಿರುವ ಲಂಕಾ ರಾಯಭಾರ ಕಚೇರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ, ಕೊಲಂಬೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಕೂಡ ಲಂಕಾ ಸರ್ಕಾರಕ್ಕೆ ಎಲ್ಲಾ ಮಾಹಿತಿ ವಿನಿಮಯ ಮಾಡುತ್ತಿದೆ.

ಇದನ್ನೂ ಓದಿ: Blockchain Technology- ವಿಶ್ವಾಸಾರ್ಹ ಸಮಾಜಕ್ಕೆ ಬ್ಲಾಕ್​ಚೈನ್ ಟೆಕ್ನಾಲಜಿ ಅಗತ್ಯ: ಮುಕೇಶ್ ಅಂಬಾನಿ

ಪಾಕ್-ಲಂಕಾ ಮಧ್ಯೆ ಆಪ್ತ ಸಂಬಂಧ:

ಶ್ರೀಲಂಕಾ ಮತ್ತು ಪಾಕಿಸ್ತಾನ ಮಿತ್ರರಾಷ್ಟ್ರಗಳಷ್ಟೇ ಅಲ್ಲದೆ, ಎರಡೂ ದೇಶಗಳ ಮಧ್ಯೆ ಸಾಕಷ್ಟು ವಾಣಿಜ್ಯ ವ್ಯವಹಾರ ಚಟುವಟಿಕೆಗಳು ನಡೆಯುತ್ತವೆ. ಪಾಕಿಸ್ತಾನದಿಂದ ಆಹಾರ ಧಾನ್ಯ, ಸಕ್ಕರೆ, ಈರುಳ್ಳಿ, ಆಲೂಗಡ್ಡೆ ಮತ್ತು ಔಷಧ ಸಾಮಗ್ರಿಗಳನ್ನ ಶ್ರೀಲಂಕಾ ಆಮದು ಮಾಡಿಕೊಳ್ಳುತ್ತದೆ. ಶ್ರೀಲಂಕಾದಿಂದ ಪಾಕಿಸ್ತಾನ ಚಹಾ, ರಬ್ಬರ್, ದಾಲ್ಚಿನ್ನಿ (Cinnamon), ಮಸಾಲೆ ಪದಾರ್ಥ, ಹರಳು (Gem), ಸಮುದ್ರ ಆಹಾರ ಇತ್ಯಾದಿಯನ್ನ ಆಮದು ಮಾಡಿಕೊಳ್ಳುತ್ತದೆ.

ಕೆಲ ತಿಂಗಳ ಹಿಂದೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾಗೆ ಭೇಟಿ ನೀಡಿದ್ದರು. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧನ್ನು ಇನ್ನಷ್ಟು ಗಟ್ಟಿಗೊಳಿಸಲು ಒಪ್ಪಿಕೊಂಡಿದ್ದವು. ಹಾಗೆಯೇ, ಪಾಕಿಸ್ತಾನದ ಸ್ಥಳೀಯ ಕ್ರಿಕೆಟ್ ಟೂರ್ನಿಗಳನ್ನ ನಿರ್ವಹಿಸಲು ಹಲವು ಮಾಜಿ ಲಂಕಾ ಕ್ರಿಕೆಟಿಗರು ಪಾಕಿಸ್ತಾನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಅನೇಕ ರೀತಿಯಲ್ಲಿ ಸ್ನೇಹಪೂರ್ವಕ ಸಂಬಂಧ ಹೊಂದಿರುವ ಎರಡೂ ದೇಶಗಳ ಮಧ್ಯೆ ಈ ಘಟನೆ ಒಡಕು ಸೃಷ್ಟಿಸುವ ಸಾಧ್ಯತೆ ಇಲ್ಲದಿಲ್ಲ.
Published by:Vijayasarthy SN
First published: