Sri lanka Financial Crisis: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಲಾಭವಾಗುತ್ತಿದೆ.. ಏನದು?

ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ಭಾರತದ ಉದ್ಯಮಕ್ಕೆ ಲಾಭವಾಗುವ ನಿರೀಕ್ಷೆಯಿದೆ. ಅಲ್ಲದೆ, ಉತ್ತಮ ಗುಣಮಟ್ಟದ ಆರ್ಡರ್‌ಗಳನ್ನು ರಫ್ತು ಮಾಡಿದರೆ ಭಾರತದ ರಫ್ತು ಕ್ಷೇತ್ರ, ಪ್ರಮುಖವಾಗಿ ಉಡುಪು ಹಾಗೂ ಚಹಾ ವಿಚಾರದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಲಿದೆ .

ಶ್ರೀಲಂಕಾದಲ್ಲಿ ಡೀಸೆಲ್​ಗೆ ಸರತಿ ಸಾಲು

ಶ್ರೀಲಂಕಾದಲ್ಲಿ ಡೀಸೆಲ್​ಗೆ ಸರತಿ ಸಾಲು

 • Share this:
  ಶ್ರೀಲಂಕಾದಲ್ಲಿ ಆರ್ಥಿಕ ಅಧ:ಪತನವಾಗಿದೆ (Sri Lanka crisis) . ಅಲ್ಲಿ ಸಾಮಾನ್ಯ ವಸ್ತುಗಳಿಗೂ ಜನರು ಪರದಾಡುತ್ತಿದ್ದು, ಎಲ್ಲದರ ಬೆಲೆ ತೀವ್ರ ಏರಿಕೆಯಾಗಿದೆ(Price Hike). ಜನರು ಬೀದಿ ಬೀದಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ (Protest Against Government) ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ ಶ್ರೀಲಂಕಾದಿಂದ ರಫ್ತಾಗುತ್ತಿದ್ದ ಗಾರ್ಮೆಂಟ್ಸ್‌ ಮತ್ತು ಟೀ ಅಥವಾ ಚಹಾಗೆ ಈಗ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆಯಂತೆ. ತಮಿಳುನಾಡಿನ ತಿರುಪುರ್‌ನ ಜವಳಿ ಹಬ್ ಮತ್ತು ದಕ್ಷಿಣ ಭಾರತ ಹಾಗೂ ಅಸ್ಸಾಂನ ಟೀ ಎಸ್ಟೇಟ್‌ಗಳಿಗೆ ವಿದೇಶದಿಂದ ಹೆಚ್ಚಿನ ಆರ್ಡರ್‌ಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ದ್ವೀಪ ರಾಷ್ಟ್ರದಲ್ಲಿನ ಆರ್ಥಿಕತೆ ಮತ್ತು ರಾಜಕೀಯ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಿಂದ ರಫ್ತಾಗುತ್ತಿದ್ದ ಗಾರ್ಮೆಂಟ್ಸ್ ಮತ್ತು ಚಹಾಗೆ ಈಗ ಭಾರತದಲ್ಲಿ ಬೇಡಿಕೆಯನ್ನು ಹೆಚ್ಚಾಗಿಸಿದೆ.

  ಇದನ್ನೂ ಓದು: Sanath Jayasuriya: ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದು ಥ್ಯಾಂಕ್ಸ್ ಹೇಳಿದ ಸನತ್ ಜಯಸೂರ್ಯ.. ಕಾರಣವೇನು?

  ಉಡುಪು ಉದ್ಯಮಕ್ಕೆ ಬೇಡಿಕೆ

  "ಇದು ಶ್ರೀಲಂಕಾದಲ್ಲಿ ಉತ್ಪಾದನಾ ವಲಯವನ್ನು ದುರ್ಬಲಗೊಳಿಸಿದೆ, ವಿಶೇಷವಾಗಿ ಉಡುಪುಗಳು" ಎಂದು ತಿರುಪುರ್ ರಫ್ತುದಾರರ ಸಂಘದ ಅಧ್ಯಕ್ಷ ರಾಜಾ ಎಂ. ಷಣ್ಮುಗಂ ಹೇಳಿದರು. "ಶ್ರೀಲಂಕಾದ ಉಡುಪು ಉದ್ಯಮವು ಗುಂಡಿಗಳನ್ನು ಸಹ ಆಮದು ಮಾಡಿಕೊಳ್ಳುತ್ತದೆ. ನಡೆಯುತ್ತಿರುವ ಬಿಕ್ಕಟ್ಟಿನ ಕಾರಣದಿಂದಾಗಿ, ಜಾಗತಿಕ ಬ್ರ್ಯಾಂಡ್‌ಗಳು ಶ್ರೀಲಂಕಾದಿಂದ ಭಾರತದ ತಿರುಪುರ್ ಜವಳಿ ಕೇಂದ್ರಕ್ಕೆ ಕೆಲವು ಆರ್ಡರ್‌ಗಳನ್ನು ವರ್ಗಾವಣೆ ಮಾಡಲು ಪ್ರಾರಂಭಿಸಿವೆ. ಮುಂಬರುವ ಶರತ್ಕಾಲದ ಋತುವಿಗಾಗಿ ಈ ಆರ್ಡರ್‌ಗಳು ಬರುತ್ತಿದೆ’’ ಎಂದೂ ಅವರು ಹೇಳಿದರು.

  5.42 ಬಿಲಿಯನ್‌ ಡಾಲರ್‌ ಮೌಲ್ಯದ ಉಡುಪುಗಳನ್ನು ರಫ್ತು

  ಜಾಗತಿಕ ಬ್ರ್ಯಾಂಡ್‌ಗಳಾದ ಝಾರಾ, ಮ್ಯಾಂಗೋ ಮತ್ತು H&M - ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಕಾಂಬೋಡಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾದ ದೇಶಗಳಿಗೆ ಆರ್ಡರ್‌ಗಳನ್ನು ನೀಡುತ್ತವೆ. "ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಕಾಂಬೋಡಿಯಾಗಳ ಕೈಯಲ್ಲಿ ದೊಡ್ಡ ಆರ್ಡರ್‌ಗಳಿವೆ. ಈ ಸನ್ನಿವೇಶದಲ್ಲಿ ಉಳಿದಿರುವ ಏಕೈಕ ಆಯ್ಕೆ ಭಾರತವಾಗಿದೆ. ಆದರೂ, ಹೆಚ್ಚಿನ ಹತ್ತಿ ಮತ್ತು ನೂಲು ಬೆಲೆಗಳು ಭಾರತೀಯ ಜವಳಿ ವ್ಯಾಪಾರಕ್ಕೆ ಪ್ರಮುಖ ಕಾಳಜಿಯಾಗಿದೆ" ಎಂದು ಷಣ್ಮುಗಂ ಹೇಳಿದರು. ಶ್ರೀಲಂಕಾ ವಾರ್ಷಿಕವಾಗಿ ಜಾಗತಿಕ ಮಾರುಕಟ್ಟೆಗಳಿಗೆ 5.42 ಬಿಲಿಯನ್‌ ಡಾಲರ್‌ ಮೌಲ್ಯದ ಉಡುಪುಗಳನ್ನು ರಫ್ತು ಮಾಡುತ್ತದೆ.

  ಭಾರತದ ಚಹಾಗೂ ಭರ್ಜರಿ ಡಿಮ್ಯಾಂಡ್​

  ಉಡುಪುಗಳ ರಫ್ತು ಆರ್ಡರ್‌ಗಳನ್ನು ಭಾರತಕ್ಕೆ ವರ್ಗಾಯಿಸುತ್ತಿರುವಂತೆ, ದೇಶದ ಚಹಾ ಉದ್ಯಮವು ಸಹ ಶ್ರೀಲಂಕಾ ಚಹಾಗಳನ್ನು ಮಾರಾಟ ಮಾಡುತ್ತಿದ್ದ ಮಾರುಕಟ್ಟೆಗಳಿಂದ ರಫ್ತು ವಿಚಾರಣೆಗಳನ್ನು ಪಡೆಯಲಾರಂಭಿಸಿದೆ.  "ಶ್ರೀಲಂಕಾದ ಬಹುತೇಕ ಎಲ್ಲಾ ಚಹಾ ಸಂಸ್ಕರಣಾ ಘಟಕಗಳು ದಿನಕ್ಕೆ 12-13 ಗಂಟೆಗಳ ಕಾಲ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುತ್ತಿವೆ ಮತ್ತು ಅವುಗಳ ಜನರೇಟರ್‌ಗಳನ್ನು ಚಲಾಯಿಸಲು ಸಾಕಷ್ಟು ಇಂಧನವಿಲ್ಲ. ಇದು ಉತ್ಪಾದನೆಯ ಅಡ್ಡಿಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಕಪ್ಪು ಚಹಾ ಎಲೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಕೆಲವು ದಿನಗಳ ಹಿಂದೆ ಕೊಲಂಬೋದಲ್ಲಿದ್ದ ದಕ್ಷಿಣ ಭಾರತ ಚಹಾ ರಫ್ತುದಾರರ ಸಂಘದ ಮುಖ್ಯಸ್ಥ ದೀಪಕ್ ಶಾ ಹೇಳಿದರು.

  ಇದನ್ನೂ ಓದಿ: SriLanka Crisis: ಜನಸಾಮಾನ್ಯರಿಗೆ ಕ್ರಿಕೆಟಿಗರ ಬೆಂಬಲ; ಆಡಳಿತದ ವಿರುದ್ಧ ದನಿ ಎತ್ತಿದ ಸಂಗಕ್ಕಾರ, ಜಯವರ್ಧನೆ

  ಶ್ರೀಲಂಕಾ ಇರಾಕ್, ಇರಾನ್, ಯುಎಇ, ಲಿಬ್ಯಾ, ರಷ್ಯಾ ಮತ್ತು ಟರ್ಕಿಯಂತಹ ದೇಶಗಳಿಗೆ ರಫ್ತು ಮಾಡುವ ಸಾಂಪ್ರದಾಯಿಕ ಚಹಾಗಳನ್ನು ಉತ್ಪಾದಿಸುತ್ತದೆ. ಭಾರತವೂ ಸಹ ಸಾಂಪ್ರದಾಯಿಕ ಚಹಾವನ್ನು ಉತ್ಪಾದಿಸುತ್ತದೆ, ಇದು ಹೆಚ್ಚಾಗಿ ಇರಾನ್ ಮತ್ತು ರಷ್ಯಾಕ್ಕೆ ಹೋಗುತ್ತದೆ. "ಸಾಂಪ್ರದಾಯಿಕ ಚಹಾ ಸೇವಿಸುವ ರಾಷ್ಟ್ರಗಳ ಕೆಲವು ಆರ್ಡರ್‌ಗಳನ್ನು ಭಾರತಕ್ಕೆ ತಿರುಗಿಸಲಾಗುತ್ತಿದೆ" ಎಂದು ದೀಪಕ್ ಶಾ ಹೇಳಿದರು.

  ಭಾರತದ ಉದ್ಯಮಕ್ಕೆ ಲಾಭ

  ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ಯಾಕೇಜಿಂಗ್ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಶ್ರೀಲಂಕಾದಲ್ಲಿ ಪ್ಯಾಕೆಟ್ ಟೀ ಮಾರಾಟ ಮಾಡುತ್ತಿದ್ದವರು ಸಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಒಟ್ಟಾರೆ ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ಭಾರತದ ಉದ್ಯಮಕ್ಕೆ ಲಾಭವಾಗುವ ನಿರೀಕ್ಷೆಯಿದೆ. ಅಲ್ಲದೆ, ಉತ್ತಮ ಗುಣಮಟ್ಟದ ಆರ್ಡರ್‌ಗಳನ್ನು ರಫ್ತು ಮಾಡಿದರೆ ಭಾರತದ ರಫ್ತು ಕ್ಷೇತ್ರ, ಪ್ರಮುಖವಾಗಿ ಉಡುಪು ಹಾಗೂ ಚಹಾ ವಿಚಾರದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಲಿದೆ ಎಂಬುದರಲ್ಲಿ ಯಾವ ಅನುಮಾನಗಳೂ ಬೇಡ.
  Published by:Kavya V
  First published: