PM Modi birthday- ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನಕ್ಕೆ ಕ್ರೀಡಾಪಟುಗಳ ಶುಭಕೋರಿಕೆ

ಸೈನಾ ನೆಹ್ವಾಲ್, ಮೀರಾಬಾಯ್ ಚಾನು, ಅಂಕಿತಾ ರೈನಾ ಮೊದಲಾದ ಕ್ರೀಡಾಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿ ಪೋಸ್ಟ್ ಹಾಕಿದ್ದಾರೆ.

ನರೇಂದ್ರ ಮೋದಿ ಜೊತೆ ಮೀರಾಬಾಯಿ ಚಾನು

ನರೇಂದ್ರ ಮೋದಿ ಜೊತೆ ಮೀರಾಬಾಯಿ ಚಾನು

 • News18
 • Last Updated :
 • Share this:
  ನವದೆಹಲಿ, ಸೆ. 17: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನವಾದ (Narendra Modi 71st Birthday) ಇಂದು ಹಲವು ಭಾರತೀಯ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ. ಒಲಿಂಪಿಕ್ಸ್ ವಿಜೇತರಿಂದ ಹಿಡಿದು ಅನೇಕ ಕ್ರೀಡಾಪಟುಗಳು (Indian sportspersons) ಪ್ರಧಾನಿಗೆ ವಿಶ್ ಆಡಿದ್ಧಾರೆ. ದೇಶದ ಮಾಜಿ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಈ ಸಂದರ್ಭದಲ್ಲಿ ಪ್ರಧಾನಿ ಅವರನ್ನ ಹುಟ್ಟಾ ನಾಯಕರೆಂದು ಬಣ್ಣಿಸಿದ್ದಾರೆ. “ಪ್ರಿಯ ನರೇಂದ್ರ ಮೋದಿ ಸರ್, ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು… ನೀವು ವಿಶಿಷ್ಟ ಗುಣಗಳಿರುವ ಸ್ವಭಾತಃ ನಾಯಕರಾಗಿದ್ದೀರಿ. ಹಲವರಿಗೆ ನೀವು ಸ್ಪೂರ್ತಿಯಾಗಿದ್ದೀರಿ” ಎಂದು ಒಲಿಂಪಿಕ್ಸ್ ಪದಕ ವಿಜೇತೆಯೂ ಆದ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.

  ದೇಶದ ನೂತನ ವೇಟ್​​ಲಿಫ್ಟಿಂಗ್ ತಾರೆ ಹಾಗೋ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಯ್​ಖೋಂ ಮೀರಾಬಾಯ್ ಚಾನು ಅವರೂ ಪ್ರಧಾನಿ ಜನ್ಮದಿನಕ್ಕೆ ಶುಭ ಕೋರಿದ್ಧಾರೆ. “….ದೇಶಕ್ಕಾಗಿ ನಿಮ್ಮ ಸಮರ್ಪಣೆ ಮತ್ತು ಪರಿಕಲ್ಪನೆ ನಮಗೆ ಯಾವಾಗಲೂ ಸ್ಫೂರ್ತಿ ಕೊಡುತ್ತಿರುತ್ತದೆ. ನಿಮಗೆ ದೀರ್ಘಾಯಸ್ಸು ಮತ್ತು ಆರೋಗ್ಯ ಸಿಗಲೆಂದು ಹಾರೈಸುತ್ತೇನೆ” ಎಂದು ಚಾನು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

  ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಕೂಡ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. “…ವರ್ಷಗಳ ಕಾಲ ನೀವಿತ್ತ ಬೆಂಬಲಕ್ಕೆ ಧನ್ಯವಾದ. ಕೆಲ ಸಂದರ್ಭದಲ್ಲಿ ನಿಮ್ಮ ಜೊತೆ ಮಾತನಾಡುವ ಗೌರವ ನನಗೆ ಸಿಕ್ಕಿತ್ತು. ಭಾರತೀಯ ಅಥ್ಲೀಟ್ಸ್​ಗೆ ನೀವು ಸದಾ ಬೆಂಬಲ ಕೊಡುತ್ತಾ ಬಂದಿದ್ದೀರಿ. ನಿಮಗೆ ಆರೋಗ್ಯ ಹಾಗೂ ಸಂಪದ್ಭರಿತ ಜೀವನ ಸಿಗಲಿ ಎಂದು ಹಾರೈಸುತ್ತೇನೆ” ಎಂದು ರೈನಾ ಹೇಳಿದ್ದಾರೆ.

  ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಹೆಪ್ಟಾಥ್ಲೀಟ್ ಕ್ರೀಡಾಪಟು ಸ್ವಪ್ನ ಬರ್ಮನ್ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ಧಾರೆ. ಪ್ರಧಾನಿ ಜೊತೆ ಭೇಟಿಯಾದ ಸಂದರ್ಭದಲ್ಲಿ ತೆಗೆಸಿಕೊಂಡ ಫೋಟೋಗಳನ್ನ ಅವರು ತಮ್ಮ ಟ್ವೀಟ್​ನಲ್ಲಿ ಲಗತ್ತಿಸಿದ್ದಾರೆ.
  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 71ನೇ ಜನ್ಮದಿನ. ಇನ್ನೂ ಶಾಸಕರಾಗುವ ಮುನ್ನವೇ ಗುಜರಾತ್ ರಾಜ್ಯದ ಸಿಎಂ ಆಗುವ ಮೂಲಕ ಅಚ್ಚರಿ ಮೂಡಿಸಿದ್ದ ನರೇಂದ್ರ ಮೋದಿ ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಯಾವ ಚುನಾವಣೆಯಲ್ಲೂ ಅವರು ಸೋತಿದ್ದಿಲ್ಲ. ಗುಜರಾತ್​ನಲ್ಲಿ ಸತತ ಮೂರು ಅವಧಿ ಆಡಳಿತ ನಡೆಸಿದ ಹೆಗ್ಗಳಿಕೆ ಅವರದ್ದು. ಕೇಂದ್ರದಲ್ಲಿ ಎರಡನೇ ಅವಧಿಗೆ ಪ್ರಧಾನಿ ಆಗಿದ್ದಾರೆ.

  ಇದನ್ನೂ ಓದಿ: Narendra Modi: ಪ್ರಧಾನಿ ಮೋದಿ ನಡೆದುಬಂದ ದಾರಿ, ಚಿತ್ರಗಳಲ್ಲಿ ಬದುಕಿನ ಪುಟಗಳ ಅನಾವರಣ

  ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು ಹೊಂದಿದ್ದ ಅವರು ಮದುವೆಯಾದರಾದರೂ ಪತ್ನಿಯಿಂದ ದೂರ ಉಳಿದು ಆರೆಸ್ಸೆಸ್ ಪ್ರಚಾರಕರಾಗಿ ಮುಂದುವರಿದರು. ನಂತರ ಅವರು ಆರೆಸ್ಸೆಸ್ ವತಿಯಿಂದ ಗುಜರಾತ್ ಬಿಜೆಪಿಗೆ ನಿಯುಕ್ತರಾದರು. ಕೇಶುಭಾಯ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ನರೇಂದ್ರ ಮೋದಿ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆಗಿನ್ನೂ ಮೋದಿ ಒಮ್ಮೆಯೂ ಶಾಸಕರಾಗಿದ್ದಿಲ್ಲ. ಅವರು ಅಧಿಕಾರಕ್ಕೆ ಏರಿದ ಸ್ವಲ್ಪ ದಿನಗಳಲ್ಲೇ ಗೋಧ್ರಾ ಹತ್ಯಾಕಾಂಡ ಮತ್ತು ಗುಜರಾತ್ ಗಲಭೆಗಳಾದವು. ಅಗಿನಿಂದ ನರೇಂದ್ರ ಮೋದಿ ತೀಕ್ಷ್ಣ ವ್ಯಕ್ತಿತ್ವದವರಾಗಿ ಬದಲಾದವರೆನ್ನಲಾಗಿದೆ.

  ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಕ್ರೀಡಾ ಕ್ಷೇತ್ರಕ್ಕೆ ಪ್ರಾಮುಖ್ಯತೆ ಕೊಡುತ್ತಾ ಬಂದಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೆಚ್ಚೆಚ್ಚು ಪದಕಗಳನ್ನ ಗೆಲ್ಲುವ ಗುರಿಯೊಂದಿಗೆ ಯೋಜನೆಗಳನ್ನ ರೂಪಿಸಲಾಗಿದೆ. ಅದರ ಫಲ ಈ ಬಾರಿ ಒಲಿಂಪಿಕ್ಸ್​ನಲ್ಲಿ ಸಿಕ್ಕಿದೆ. ಟೋಕಿಯೋದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ಗಳಲ್ಲಿ ಭಾರತ ಈ ಬಾರಿ ದಾಖಲೆಯ ಪದಕಗಳನ್ನ ಬಾಚಿತು. ಪದಕ ಗೆದ್ದ ಕ್ರೀಡಾಪಟುಗಳು, ಪದಕ ಗೆಲ್ಲದಿದ್ದರೂ ವೀರೋಚಿತವಾಗಿ ಹೋರಾಟ ತೋರಿದ ಕ್ರೀಡಾಪಟುಗಳೊಂದಿಗೆ ನರೇಂದ್ರ ಮೋದಿ ಫೋನ್ ಮೂಲಕ ಸಂಭಾಷಣೆ ನಡೆಸಿದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ. ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಅವರು ನೀಡಿದ ಉತ್ತೇಜನಾದಾಯಕ ಮಾತುಗಳು ತಮಗೆ ಸ್ಫೂರ್ತಿ ನೀಡಿದವು ಎಂದು ಅನೇಕ ಕ್ರೀಡಾಪಟುಗಳು ಹೇಳಿಕೊಂಡಿದ್ದುಂಟು.
  Published by:Vijayasarthy SN
  First published: