ನಾವಿರುವ ಭೂಮಿಯಲ್ಲೇ ನಮ್ಮಿಂದ ಬಚ್ಚಿಟ್ಟುಕೊಂಡಿರುವ ಅದೆಷ್ಟೋ ಅಚ್ಚರಿ ಮತ್ತು ರಹಸ್ಯಗಳಿವೆ. ಇನ್ನು, ಈ ವಿಶಾಲ ಬ್ರಹ್ಮಾಂಡದಲ್ಲಿ ನಮಗೆ ಗೊತ್ತಿಲ್ಲದ ಅದೆಷ್ಟು ಸಂಗತಿಗಳಿರಬೇಡ..! ನಮ್ಮ ನೆರೆಹೊರೆಯ ಸೂರ್ಯನ ಸುತ್ತ ಎಷ್ಟು ಗ್ರಹಗಳಿರಬಹುದು ಎಂದು ನಿಖರವಾಗಿ ಹೇಳುವುದು ಕಷ್ಟ. ನಮ್ಮದೇ ಸೂರ್ಯನಲ್ಲಿರುವ ಗ್ರಹಗಳಿಗೆ ಹೊಸ ಹೊಸ ಉಪಗ್ರಹಗಳಿರುವುದು ಬೆಳಕಿಗೆ ಬರುತ್ತಲೇ ಇರುತ್ತವೆ. ನಮಗೆ ಅಗುದಿ ಸಮೀಪ ಇರುವ ಚಂದ್ರನಲ್ಲಿ ಏನೆಲ್ಲಾ ರಹಸ್ಯಗಳಿವೆ ಎಂದು ತಿಳಿಯಲು ಇನ್ನೂ ಪ್ರಯತ್ನಿಸುತ್ತಲೇ ಇದ್ದೇವೆ. ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣ ಇದೆ. ನಾವಿರುವ ವಿಶ್ವವಲ್ಲದೇ ಇನ್ನೊಂದು ಪ್ರಪಂಚವೂ ನಮ್ಮ ಜೊತೆಜೊತೆಗೇ ಸಮ್ಮಿಳಿತವಾಗಿದೆ ಎಂಬ ಮಾತು ಕಳೆದ ಎರಡು ದಿನಗಳಿಂದ ಮತ್ತೆ ಕೇಳಿಸಲು ಪ್ರಾರಂಭವಾಗಿದೆ. ನ್ಯೂಟ್ರಿನೋ ಎಂಬ ಸೂಕ್ಷ್ಮಾತಿಸೂಕ್ಷ್ಮ ವಸ್ತುವಿನ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಹೊಸ ವಿಸ್ಮಯಕಾರಿ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಶುರುವಾಗಿವೆ.
ಹಾಲಿವುಡ್ ಸಿನಿಮಾಗಳನ್ನ ನೋಡುವವರಿಗೆ ಈ ಸುದ್ದಿ ಬಹಳ ರೋಚಕ ಎನಿಸಬಹುದು. ಟೈಮ್ ಟ್ರಾವೆಲಿಂಗ್ನಂತಹ ರೋಚಕ ವಿಚಾರ ಇದೆ. ಅಷ್ಟಕ್ಕೂ ಈ ಪರ್ಯಾಯ ಪ್ರಪಂಚದ ವಿಚಾರ ಬಂದಿದ್ದು ಯಾಕೆ?
ಇದನ್ನೂ ಓದಿ: ಸೂರ್ಯನಲ್ಲೂ ‘ಲಾಕ್ಡೌನ್’?; ಭೂಮಿಯಲ್ಲಿ ಸಂಭವಿಸಲಿದೆ ಭಾರೀ ಪ್ರಕೃತಿ ವಿಕೋಪ – ವಿಜ್ಞಾನಿಗಳ ಎಚ್ಚರಿಕೆ
ಹಿಮಬಂಡೆಗಳೇ ತುಂಬಿರುವ ಅಂಟಾರ್ಟಿಕಾ ಖಂಡದಲ್ಲಿ ನಾಸಾ ಸಂಸ್ಥೆ ANITA ಪ್ರಯೋಗ ನಡೆಸುತ್ತಿದೆ. ANITA ಎಂದರೆ ಅಂಟಾರ್ಟಿಕ್ ಇಂಪಲ್ಸಿವ್ ಟ್ರಾನ್ಸಿಯೆಂಟ್ ಆ್ಯಂಟೆನಾ. ಇದು ನಮ್ಮ ಬ್ರಹ್ಮಾಂಡದ ಶಬ್ದಗಳನ್ನು ಆಲಿಸಲು ಮತ್ತು ನ್ಯೂಟ್ರಿನೋ ಎಂಬ ಶಕ್ತಿಶಾಲಿ ಸೂಕ್ಷ್ಮ ವಸ್ತುವನ್ನು ಅಧ್ಯಯನ ಮಾಡಲು ಅಂಟಾರ್ಟಿಕಾ ಖಂಡದ ಬಳಿ ನಡೆಯುತ್ತಿರುವ ಪ್ರಯೋಗವಾಗಿದೆ. ಕಾಸ್ಮಿಕ್ ಕಿರಣಗಳನ್ನ ಗುರುತಿಸಬಲ್ಲ ಆ್ಯಂಟೆನಾ ಇರುವ ಹೀಲಿಯಮ್ ಬಲೂನುಗಳನ್ನು ಆಗಸಕ್ಕೆ ಹಾರಿಬಿಡಲಾಗಿದೆ. ಭೂಮಿಯ ಸದ್ದುಗದ್ದಲದಿಂದ ಮುಕ್ತವಾಗಿರಲೆಂದು 1.21 ಲಕ್ಷ ಅಡಿ ಎತ್ತರದಲ್ಲಿ ಈ ಬಲೂನುಗಳಿವೆ. ನಮ್ಮ ಕಮರ್ಷಿಯಲ್ ವಿಮಾನಗಳು ಹಾರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎತ್ತರದಲ್ಲಿ ಈ ಹೀಲಿಯಂ ಬಲೂನುಗಳು ಹಾರುತ್ತಾ ಅಧ್ಯಯನಕ್ಕೆ ನೆರವಾಗುತ್ತಿವೆ.
ಈ ANITA ಪ್ರಯೋಗದ ವೇಳೆ ಹೀಲಿಯಮ್ ಬಲೂನಿನ ಆ್ಯಂಟೆನಾಗಳು ನ್ಯೂಟ್ರಿನೋ ವಸ್ತುಗಳ ವಿಚಿತ್ರ ಗುಣವನ್ನು ಪತ್ತೆ ಮಾಡಿವೆ. ನ್ಯೂಟ್ರಿನೋಗಳು ಆಗಸದ ಕಡೆಯಿಂದ ಭೂಮಿಯತ್ತ ಬರುವುದು ಸಹಜ. ಆದರೆ, ಭೂಮಿಯಿಂದ ಮೇಲಕ್ಕೆ ಈ ಸೂಕ್ಷ್ಮವಸ್ತುಗಳು ಚಿಮ್ಮುತ್ತಿರುವುದನ್ನು ANITA ಗುರುತಿಸಿದೆ. ಇದು ಬಹಳ ವಿಚಿತ್ರವಾದುದು. ನಮ್ಮ ಈಗಿನ ವಿಜ್ಞಾನದ ಜ್ಞಾನದ ಪರಿಧಿಗೆ ನಿಲುಕದಂಥದ್ದು. ಇವು ಮಾಮೂಲಿಯ ನ್ಯೂಟ್ರಿನೋ ಕಣಗಳಲ್ಲ. ಮಾಮೂಲಿಯ ನ್ಯೂಟ್ರಿನೋಗಳು ಬಹಳ ಕಡಿಮೆ ಶಕ್ತಿ ಇರುತ್ತವೆ. ಯಾವುದೇ ವಸ್ತುವನ್ನೂ ಸಲೀಸಾಗಿ ಹಾದುಹೋಗಬಲ್ಲುದು. ಪಾರದರ್ಶಕ ಗಾಜನ್ನು ಬೆಳಕು ಹಾದುಹೋಗುವ ಹಾಗೆ. ಪ್ರತಿ ಒಂದು ಸೆಕೆಂಡ್ಗೆ ನಮ್ಮ ದೇಹದಿಂದ 100 ಟ್ರಿಲಿಯನ್ ನ್ಯೂಟ್ರಿನೋಗಳು ಹಾದುಹೋಗುತ್ತವೆ. ನಮ್ಮ ದೇಹದ ಯಾವ ಭಾಗಕ್ಕೂ ಯಾವುದೇ ರೀತಿಯ ಪರಿಣಾಮ ಬೀರದೇ, ಒಂಚೂರು ಅರಿವಾಗದ ರೀತಿಯಲ್ಲಿ ದೇಹ ನುಸುಳಿ ಹೋಗುತ್ತವೆ. ಇವು ಹೆಚ್ಚೂಕಡಿಮೆ ಝೀರೋ ಮಾಸ್ ಅಂದರೆ ಶೂನ್ಯ ತೂಕಕ್ಕೆ ಸಮೀಪ ಇರುತ್ತವೆ.
ಇದನ್ನೂ ಓದಿ: ಅಮಾವಾಸ್ಯೆಯಲ್ಲ, ಗ್ರಹಣವಲ್ಲ: ಕ್ರಿ.ಶ. 1110ರಲ್ಲಿ ಚಂದ್ರ ಇಡೀ ರಾತ್ರಿ ಕಣ್ಮರೆಯಾಗಿದ್ದು ಹೇಗೆ? ವಿಜ್ಞಾನಿಗಳಿಗೆ ಸಿಕ್ತು ಉತ್ತರ
ಆದರೆ, ಅಂಟಾರ್ಟಿಕಾದ ಆಗಸದಲ್ಲಿ ಪತ್ತೆಯಾದ ನ್ಯೂಟ್ರಿನೋಗಳು ಶಕ್ತಿಶಾಲಿಯಾದವುಗಳು. ಟಾವ್(Tau) ನ್ಯೂಟ್ರಿನೋಗಳೆನ್ನುತ್ತಾರೆ. ಇವು ಘನ ವಸ್ತು (Solid) ದಾಟಿ ಹೋಗಲಾರವು. ಇವು ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುತ್ತಿರುವುದು ಹೊಸ ಹೊಸ ವಿಚಾರಗಳಿಗೆ ಎಡೆ ಮಾಡಿಕೊಡುತ್ತಿವೆ.
ಕೆಲವರು ಇದು ಸಮಯ ಹಿಂದಕ್ಕೆ ಹೋಗುತ್ತಿರುವ ಮುನ್ಸೂಚನೆ ಇದು ಎನ್ನುತ್ತಾರೆ. ಟೈಮ್ ಟ್ರಾವೆಲಿಂಗ್ ಕಾನ್ಸೆಪ್ಟುಗಳು ಬರುತ್ತಿವೆ. ಹಾಗೆಯೇ, ನಾವಿರುವ ಬ್ರಹ್ಮಾಂಡಕ್ಕೆ ಸಮ್ಮಿಳಿತವಾಗಿ ನಮಗೆ ಗೋಚರವಾಗದ ಇನ್ನೊಂದು ಬ್ರಹ್ಮಾಂಡವೂ ಇದೆ ಎನ್ನುವ ವಾದಗಳಿವೆ. ಅಂದರೆ ಪ್ಯಾರಲೆಲ್ ಯೂನಿವರ್ಸ್ ಥಿಯರಿಗಳು ಚರ್ಚೆಯಲ್ಲಿವೆ. ನಾಲ್ಕು ವರ್ಷಗಳಿಂದಲೂ ಈ ಪರ್ಯಾಯ ವಿಶ್ವದ ಪರಿಕಲ್ಪನೆಗಳು ಹೆಚ್ಚಾಗಿ ಚರ್ಚಿತವಾಗುತ್ತಿವೆ. ಯಾರೋ ಕಾನ್ಸಿರೆಸಿ ಚಿಂತಕರು ಮಾಡುತ್ತಿರುವ ತರ್ಕಗಳಲ್ಲ. ವಿಜ್ಞಾನಿಗಳ ವಲಯದಲ್ಲೇ ಚರ್ಚೆಯಾಗುತ್ತಿರುವ ವಿಚಾರ.
ಆದರೆ, ಅನೇಕ ವಿಜ್ಞಾನಿಗಳು ಈ ವಾದವನ್ನು ಒಪ್ಪುವುದಿಲ್ಲ. ಹಾಗೇ ತಿರಸ್ಕರಿಸುವುದೂ ಇಲ್ಲ. ಈ ನ್ಯೂಟ್ರಿನೋಗಳ ಗುಣಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಈಗಿನ ಭೌತಶಾಸ್ತ್ರದ ಜ್ಞಾನ ಸಮರ್ಪಕವಾಗಿಲ್ಲ. ನಮಗಿನ್ನೂ ಗೊತ್ತಿರದ ಬೇರೆಯೇ ರೀತಿಯ ಭೌತ ವಿಜ್ಞಾನದ ಸಾಧ್ಯತೆಗಳಿದ್ದಿರಬಹುದು. ಈಗಲೇ ಪ್ಯಾರಲೆಲ್ ಯೂನಿವರ್ಸ್ ತರ್ಕಕ್ಕೆ ಬದ್ಧರಾಗುವುದು ತಪ್ಪು. ಇದನ್ನು ಗಂಭೀರವಾಗಿ ಪರಿಗಣಿಸದೆ, ಹೆಚ್ಚೆಚ್ಚು ಅಧ್ಯಯನ, ಪ್ರಯೋಗಗಳನ್ನು ಮಾಡಬೇಕು ಎಂದು ಒಂದು ಗುಂಪಿನ ವಿಜ್ಞಾನಿಗಳು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ