ಕೋಲ್ಕತ್ತಾ (ಏ. 5): ಆಕೆ ಪ್ರತಿ ಬಂಗಾಳಿಗಳ ಪ್ರಜಾಪ್ರಭುತ್ವದ ಹಕ್ಕನ್ನು ಕಾಪಾಡಲು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ನಮ್ಮ ಧರ್ಮ ಹಾಗೂ ಪ್ರಜಾಪ್ರಭುತ್ವದ ಹಕ್ಕನ್ನು ಅಪಹರಿಸುತ್ತಿರುವವ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಸಮಾಜವಾದಿ ಸಂಸದೆ ಜಯಾಬಚ್ಚನ್ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಪರವಾಗಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ ಅವರು, ಮಮತಾ ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ದೌರ್ಜನ್ಯದ ವಿರುದ್ಧ ಒಬ್ಬಂಟಿಯಾಗಿ ಎಲ್ಲರ ವಿರುದ್ಧ ಆ ಮಹಿಳೆ ಹೋರಾಡುತ್ತಿದ್ದಾರೆ. ಆಕೆಯ ಕಾಲು ಮುರಿದಿದೆ. ಆದರೆ, ಆಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಮೂಲತಃ ಬೆಂಗಾಲಿಯವರಾದ ಜಯಾ ಬಚ್ಚನ್, ಉತ್ತರ ಪ್ರದೇಶ ರಾಜ್ಯಸಭಾ ಸಂಸದೆಯಾಗಿ ನಾಲ್ಕು ಅವಧಿ ಸೇವೆ ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ಹಿಂದೂ ವಿರೋಧಿ ಎಂದು ಪ್ರಚಾರ ನಡೆಸುತ್ತಿರುವ ಬಗ್ಗೆ ಟೀಕಿಸಿದ ಅವರು, ಮಮತಾ ಅವರು ಪಾಕಿಸ್ತಾನಿ, ಮುಸ್ಲಿಂ ಸಮುದಾಯದ ಓಲೈಕೆ ನಡೆಸುತ್ತಿದ್ದಾರೆ ಎನ್ನುವ ಮೂಲಕ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಅವರನ್ನು ದೀದಿಯಿಂದ ಬೇಗಂ ಮಾಡಲಾಗಿದೆ. ಜನರ ಸಂಪ್ರದಾಯವನ್ನು ಅವರಿಂದ ಹೈ ಜಾಕ್ ಮಾಡಬೇಡಿ. ಜನರ ಪ್ರಜಾಪ್ರಭುತ್ವ ಹಕ್ಕನ್ನು ಹೈಜಾಕ್ ಮಾಡಬೇಡಿ. ಬೆಂಗಾಳಿಗಳನ್ನು ಬೆದರಿಸುವ ತಂತ್ರಕ್ಕೆ ಮಣಿಯುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ಮಮತಾ ಬ್ಯಾನರ್ಜಿ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭರವಸೆಯಂತೆ ನಟಿ ಜಯಾ ಬಚ್ಚನ್ ದೀದಿ ಪರ ಬ್ಯಾಟಿಂಗ್ ನಡೆಸಿದರು.
ಇದನ್ನು ಓದಿ: ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್ಮುಖ್ ರಾಜೀನಾಮೆ
ಟೋಲಿಗೌಂಜ್ನ ಟಿಎಂಸಿ ಅಭ್ಯರ್ಥಿ ಆರೋಪ್ ಬಿಸ್ವಾಸ್ ಪರ ಪ್ರಚಾರ ನಡೆಸಿದರು ನಾಲ್ಕು ದಿನಗಳ ಕಾಲ ಅವರು ಪ್ರಚಾರ ಸಭೆಯಲ್ಲಿ ಭಾಗಿಯಾಗಲಿರುವ ಜಯಾ ಬಚ್ಚನ್ ಮಂಗಳವಾರ ಮತ್ತು ಬುಧವಾರ ದೀದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಏಪ್ರಿಲ್ 8ರವರೆಗೆ ಅವರು ಟಿಎಂಸಿ ಪರ ಮತಯಾಚಿಸಲಿದ್ದು, ಬಂಗಾಳದ ಮಗಳಿಗೆ ನಿಮ್ಮ ಮತ ಎಂಬ ಘೋಷವಾಕ್ಯದ ಅಡಿ ಪ್ರಚಾರ ನಡೆಸಿದ್ದಾರೆ.
ಏಂಟು ಹಂತದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎರಡು ಹಂತದ ಮತದಾನ ನಡೆದಿದೆ, ಮೂರನೇ ಹಂತದ ಮತದಾನ ನಾಳೆ ನಡೆಯಲಿದೆ. ಇದಾದ ಬಳಿಕ ಏಪ್ರಿಲ್ 10, 17, 22, 26 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ