ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್ ಅವರು ಮದುವೆ ಸಮಾರಂಭವೊಂದರಲ್ಲಿ ಕಿಕ್ಕಿರಿದ ಜನಸಂದಣಿಯ ನಡುವೆ ಮಾಡಿದ ನೃತ್ಯ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡಿರುವ ಗೋರಖ್ ಪುರ ಪೋಲಿಸರು ಎಫ್.ಐ.ಆರ್. ಬಳುವಳಿ ನೀಡಿದ್ದಾರೆ! ಸಮಾಜವಾದಿ ಪಕ್ಷದ ಪ್ರಚಾರ ಗೀತೆಯಾದ “ಸಮಾಜವಾದ್ ಕಾ ಜಂಡಾ ಫಿರ್ ಸೆ ಯುಪಿ ಮೆ ಲಹೆರಾಯೆಗಾ” ಹಾಡಿಗೆ ಮನದಣಿಯೆ ಕುಣಿದು ಕುಪ್ಪಳಿಸಿದ್ದ ಯಾದವ್ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿತ್ತು. ಆ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳಾದ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ಶಿಷ್ಟಾಚಾರಗಳನ್ನು ಉಲ್ಲಂಘಿಸಿರುವುದೂ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದುದರಿಂದ ಬಹಳಷ್ಟು ಟೀಕೆಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಗೋರಖ್ಪುರ ಪೋಲಿಸರು ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೃತ್ಯ ವಿರೋಧಿಸಿದವರ ಮೇಲೆ ಹಲ್ಲೆ:
ಉತ್ತರಪ್ರದೇಶದ ಗೋರಖ್ಪುರ ಜಿಲ್ಲೆಯ ಬಜಿನಾಥಪುರದಲ್ಲಿ ಬುಧವಾರ ಈ ಮದುವೆ ಸಮಾರಂಭ ನಡೆದಿತ್ತು. ಗ್ರಾಮದ ಮುಖ್ಯಸ್ಥ ಬಲ್ಕಿಷನ್ ಯಾದವ್ ಎಂಬವರ ಮಗಳ ಮದುವೆ ಸಮಾರಂಭದಲ್ಲಿ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ್ದ ಶೈಲೇಂದ್ರ ಯಾದವ್, ಫುಲ್ ಜೋಷ್ನಲ್ಲಿ ವೇದಿಕೆಯ ಮೇಲೆ ನೆಗೆದು ಅಲ್ಲಿ ನೃತ್ಯ ಮಾಡುತ್ತಿದ್ದ ಹುಡುಗಿಯರ ಜತೆಗೆ ತಾವೂ ಹೆಜ್ಜೆ ಹಾಕಲು ಆರಂಭಿಸಿದರು. ಆಗ ಗ್ರಾಮಸ್ಥರು ಅವರನ್ನು ತಡೆಯಲು ಯತ್ನಿಸಿದಾಗ ಶೈಲೇಂದ್ರ ಯಾದವ್ ಬೆಂಬಲಿಗರು ಅವರಿಗೆ ಥಳಿಸಲು ಆರಂಭಿಸಿದರು. ಈ ಗಲಾಟೆಯಲ್ಲಿ ಕೆಲವು ಕುರ್ಚಿಗಳು ಕೂಡ ಮುರಿದು ಹೋದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ನಿಯಮಾವಳಿ ಉಲ್ಲಂಘಿಸಿರುವ ಸಮಾಜವಾದಿ ಪಕ್ಷದ ನಾಯಕ, ಕಾರ್ಯಕ್ರಮದ ಆಯೋಜಕರು ಹಾಗೂ ಅಲ್ಲಿ ಹಾಜರಿದ್ದ ಜನರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ವಿಡಿಯೋದಲ್ಲಿ ವೇದಿಕೆಯಲ್ಲಿ ಕಾಣಿಸುತ್ತಿದ್ದ ಎಲ್ಲರ ವಿರುದ್ಧ ಹಲ್ಲೆ, ಬೆದರಿಕೆ, ಗಲಭೆ, ವಿಪತ್ತು ನಿರ್ವಹಣೆ ಕಾಯಿದೆಯಡಿ ಕೊರೊನಾ ನಿಯಾವಳಿ ಉಲ್ಲಂಘನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಶೈಲೇಂದ್ರ ಯಾದವ್ ಅವರು ಗೋರಖ್ಪುರ ಜಿಲ್ಲಾ ಪಂಚಾಯಿತಿಯ ಸದಸ್ಯೆ ರೇಣು ಯಾದವ್ ಅವರ ಪತಿಯಾಗಿದ್ದು, ತಾನು ಮದುವೆ ಸಂದರ್ಭದಲ್ಲಿ ಎಲ್ಲ ನಿಯಮಾವಳಿಗಳನ್ನು ಪಾಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: CoronaVirus: ತಮಿಳುನಾಡಿನ ಮೃಗಾಲಯದಲ್ಲಿ ಸಿಂಹಗಳಿಗೆ ಕೊರೋನಾ ಪಾಸಿಟಿವ್; ಒಂದು ಸಿಂಹ ಸಾವು!
ಮದುವೆ ಸಮಾರಂಭದಲ್ಲಿ ಆರ್ಕೆಸ್ಟ್ರಾ ನಡೆಸುವಂತಿಲ್ಲ:
ಕೊರೋನಾ ವೈರಸ್ ನಿಯಮಾವಳಿ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ಹಾಗೂ ನೃತ್ಯ ಪ್ರದರ್ಶನಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಥ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರು ಇಂಥ ಕಾರ್ಯಕ್ರಮಗಳಲ್ಲಿ ಸೇರುವುದನ್ನು ನಿರ್ಬಂಧಿಸಲು ಎಲ್ಲ ಜಿಲ್ಲೆಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಲಯದ ಎಡಿಜಿ ಅಖಿಲ್ ಕುಮಾರ್ ಅವರು ಎಲ್ಲ ಜಿಲ್ಲೆಗಳ ಪೊಲೀಸರಿಗೆ ಖಡಕ್ಕಾಗಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ