ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿ, ಕೋವಿಡ್ ಟೆಸ್ಟ್ ನೆಗೆಟಿವ್ ಸಹ ಬಂದಿತ್ತು. ಆದರೂ ಚೇತರಿಸಿಕೊಳ್ಳದ ಗಾಯಕ ನಮ್ಮನ್ನೆಲ್ಲ ಅಗಲಿದ್ದಾರೆ. ಸ್ವರ ಮಾಂತ್ರಿಕ ಹಾಗೂ ಸಂಗೀತ ಕ್ಷೇತ್ರದ ದಿಗ್ಗಜ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಲೋಕಕ್ಕೆ ನಿಜಕ್ಕೂ ತುಂಬಲಾರದ ನಷ್ಟ. ಗಾಯಕನ ಅಗಲಿಕೆಗೆ ಕೋಟ್ಯಂತರ ಮಂದಿ ಕಂಬನಿ ಮಿಡಿದಿದ್ದಾರೆ. ಗಾಯನದ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಾ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಬಾಲಸುಬ್ರಹ್ಮಣ್ಯಂ ಅವರನ್ನು ಎಸ್ಪಿಬಿ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಹೀಗೆ ಕರೆಸಿಕೊಳ್ಳುವುದು ಎಂದರೆ ಅವರಿಗೆ ತುಂಬಾ ಇಷ್ಟವಂತೆ. ಬಾಲಸುಬ್ರಹ್ಮಣ್ಯಂ ಅವರು ಒಂದು ಕಾಲದಲ್ಲಿ 135 ಕೆಜಿ ತೂಕ ಇದ್ದರಂತೆ. ಆಗ ದೇಹದ ತೂಕ ಇಳಿಸಿಕೊಳ್ಳಲು ಸಿಕ್ಕಾಪಟ್ಟೆ ಪ್ರಯತ್ನಿಸಿದ್ದರಂತೆ. ಡಯಟ್ ಹಾಗೂ ವ್ಯಾಯಾಮದಿಂದ ತೂಕ ಕಡಿಮೆಯಾಗದಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ಬಗ್ಗೆ ತೂಕ ಇಳಿಸಿಕೊಂಡ ನಂತರ ಬಾಲಸುಬ್ರಹ್ಮಣ್ಯಂ ಅವರೇ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಾಲಸುಬ್ರಹ್ಮಣ್ಯಂ ಅವರು ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿದ್ದರು. 135 ಕೆ.ಜಿ ಇದ್ದವರು 96 ಕೆ.ಜಿ.ಗೆ ಇಳಿದಿದ್ದರು. ಇದು ಆಗಿದ್ದು 2012ರಲ್ಲಿ. ನಂತರ ಈ ಕುರಿತಾಗಿ ಒಮ್ಮೆ ಇನ್ಸ್ಟಿಟ್ಯೂಟ್ ಆಫ್ ಬ್ಯಾರಿಯಾಟ್ರಿಕ್ ಎಂಜಿಎಂ ಹೆಲ್ತ್ ಕೇರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ನನ್ನನ್ನು ತುಂಬಾ ಕಾರ್ಯಕ್ರಮದಲ್ಲಿ ಹಾಗೂ ವೇದಿಕೆಗಳಲ್ಲಿ ನೋಡಿರುತ್ತೀರಾ. ಆಗ ಎಷ್ಟು ದಪ್ಪಗಿದ್ದೆ, ಈಗ ನಾನು 96 ಕೆ.ಜಿ ಇದ್ದೀನಿ. ಈ ತೂಕ ಕಡಿಮೆ ಅಲ್ಲ. ಆದರೆ, ನನ್ನ ವಯಸ್ಸಿಗೆ ಸರಿಯಾಗಿದೆ ಎಂದೆನಿಸುತ್ತಿದೆ. ಅದಕ್ಕೆ ಇದೇ ತೂಕವನ್ನು ಕಾಯ್ದುಕೊಂಡು ಹೋಗುತ್ತಿದ್ದೇನೆ. ತೂಕವನ್ನು ಸಹಜ ಪದ್ಧತಿಗಳ ಮೂಲಕ ಇಳಿಸಿಕೊಳ್ಳುವುದು ಒಳ್ಳೆಯದು. ಅದು ಸಾಧ್ಯವಾಗದಾಗ ಬ್ಯಾರಿಯಾಟ್ರಿಕ್ ಸರ್ಜರಿ ಸುರಕ್ಷಿತ ಮಾರ್ಗ ಎಂದಿದ್ದರು.
ಇದು ಕಾಸ್ಮೆಟಿಕ್ ಸರ್ಜರಿ ಅಲ್ಲ. ನಾನು ನನ್ನ ಮಗ ಇಬ್ಬರೂ ಮಾಡಿಸಿಕೊಂಡಿದ್ದೇವೆ. ಅದು ಸಿನಿಮಾದಲ್ಲಿ ಹೀರೋ ಆಗಲು ಮಾಡಿದ್ದಲ್ಲ. ಸಕ್ಕರೆ ಕಾಯಿಲೆ ಬರಬಾರದೆಂದು ಹೀಗೆ ಮಾಡಿದ್ದು. ಎಷ್ಟೋ ರೋಗಗಳಿಗೆ ಸಕ್ಕರೆ ಕಾಯಿಲೆ ಮೂಲ. ವಿಪರ್ಯಾಸ ಅಂದರೆ ದಪ್ಪ ಇರುವವರನ್ನು ನಮ್ಮ ದೇಶದಲ್ಲಿ ಕಾಮಿಡಿಯನ್ಸ್ ನೋಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು ಬಾಲಸುಬ್ರಹ್ಮಣ್ಯಂ.
ಇದನ್ನೂ ಓದಿ: ರಶ್ಮಿಕಾರ ಡಯಟ್ ಸೀಕ್ರೆಟ್: ಲಿಲ್ಲಿ ಸೇವಿಸುವ ಬೆಳಗಿನ ಉಪಹಾರದ ವಿಡಿಯೋ ಇಲ್ಲಿದೆ..!
ದಕ್ಷಿಣ ಭಾರತದ ಪ್ರಮುಖ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದ ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ತೆಲುಗು, ತಮಿಳಿನಲ್ಲಿ 72ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಶ್ರುತಿ ಹಾಗೂ ಶಶಿಕುಮಾರ್ ಅವರೊಂದಿಗೂ ನಟಿಸಿದ್ದಾರೆ. ತೆಲುಗಿನಲ್ಲಿ ಇತ್ತೀಚೆಗೆ ತೆರೆಕಂಡ ದೇವ್ದಾಸ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ