news18-kannada Updated:February 17, 2021, 3:43 PM IST
ಪ್ರಾತಿನಿಧಿಕ ಚಿತ್ರ.
ನವದೆಹಲಿ(ಫೆ.17): ಭಾರತಕ್ಕೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರಿ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದ್ದು, ಆ ದೇಶಗಳಿಂದ ಬರುವ ಜನರಿಗೆ ಹೆಚ್ಚು ಒತ್ತು ನೀಡಿ ಪರೀಕ್ಷೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ಕೊರೊನಾ ವೈರಸ್ ರೂಪಾಂತರ ಪತ್ತೆಯಾಗಿದೆ ಮತ್ತು ಬ್ರೆಜಿಲ್ ರೂಪಾಂತರವು ಒಬ್ಬರಲ್ಲಿ ಕಂಡುಬಂದಿದೆ ಎಂದು ಉನ್ನತ ವೈದ್ಯಕೀಯ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ. ಈ ಎಲ್ಲಾ ಐದು ಜನರನ್ನು ಪ್ರತ್ಯೇಕಿಸಲಾಗಿದೆ ಎಂದು ತಿಳಿದುಬಂದಿದೆ.
"ಐಸಿಎಂಆರ್-ಎನ್ಐವಿ ದಕ್ಷಿಣ ಆಫ್ರಿಕಾದ ರೂಪಾಂತರ SARS-CoV-2 ಅನ್ನು ಪ್ರತ್ಯೇಕಿಸಲು ಮತ್ತು ಕಲ್ಚರ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಬ್ರೆಜಿಲ್ ರೂಪಾಂತರ SAS-CoV-2 ಅನ್ನು ಎನ್ಐವಿ-ಪುಣೆಯಲ್ಲಿ ಪ್ರತ್ಯೇಕಿಸಿ ಕಲ್ಚರ್ ಮಾಡಲಾಗಿದೆ'' ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾರತದಲ್ಲಿ ಯುಕೆ ಸ್ಟ್ರೈನ್ ಪ್ರಕರಣಗಳು 187 ಇವೆ. ಅಲ್ಲದೆ, ಅವರ ಎಲ್ಲಾ ಸಂಪರ್ಕಿತರನ್ನು ಪ್ರತ್ಯೇಕಿಸಿ ಪರೀಕ್ಷಿಸಲಾಗಿದೆ ಎಂದು ಡಾ.ಭಾರ್ಗವ ಹೇಳಿದರು.
ಯುಕೆಯಿಂದ ಬರುವ ಪ್ರಯಾಣಿಕರಿಗಾಗಿ ಇರುವ ನಿಯಮವನ್ನೇ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ನಿಂದ ಬರುವ ವಿಮಾನಗಳ ಪ್ರಯಾಣಿಕರಿಗೆ ಅನುಸರಿಸಲಾಗುವುದು. ಕೋವಿಡ್ ನೆಗೆಟಿವ್ ರಿಪೋರ್ಟ್ ಮತ್ತು ಪ್ರತಿ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ನಿಯಮ ಜಾರಿಯಲ್ಲಿರಲಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. "ದಕ್ಷಿಣ ಆಫ್ರಿಕಾ ಅಥವಾ ಬ್ರೆಜಿಲ್ನಿಂದ ಯಾವುದೇ ನೇರ ವಿಮಾನಗಳಿಲ್ಲ, ಆದ್ದರಿಂದ ಆರೋಗ್ಯ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪರ್ಕದಲ್ಲಿದೆ" ಎಂದು ಅವರು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆಗಾಗಿ ಗುದ್ದಾಟ; ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ?
ಅಸ್ತಿತ್ವದಲ್ಲಿರುವ ಲಸಿಕೆಗಳು ಯುಕೆ ರೂಪಾಂತರವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ದಕ್ಷಿಣ ಆಫ್ರಿಕಾದ ಮತ್ತು ಬ್ರೆಜಿಲಿಯನ್ ರೂಪಾಂತರಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಪ್ರಯೋಗಗಳು ನಡೆಯುತ್ತಿವೆ ಎಂದು ಐಸಿಎಂಆರ್ ಮುಖ್ಯಸ್ಥರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ರೂಪಾಂತರವು ಯುಎಸ್ ಸೇರಿದಂತೆ ಸದ್ಯ ವಿಶ್ವದ 41 ದೇಶಗಳಲ್ಲಿ ಹರಡಿದೆ. ಭಾರತದಲ್ಲಿ ಈ ರೂಪಾಂತರ ಕೊರೋನಾ ನಾಲ್ವರಲ್ಲಿ ಇದ್ದು, ಇವರು ಅಂಗೋಲಾ, ಟಾಂಜಾನಿಯಾ ಮತ್ತು ದಕ್ಷಿಣ ಆಫ್ರಿಕಾದವರು ಎಂದು ತಿಳಿದುಬಂದಿದೆ. ಇನ್ನು, ಯುಕೆ ರೂಪಾಂತರವು 82 ದೇಶಗಳಿಗೆ ಮತ್ತು ಬ್ರೆಜಿಲಿಯನ್ ಕೋವಿಡ್ ಒಂಭತ್ತು ದೇಶಗಳಿಗೆ ಹರಡಿದೆ.ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಮಹಾರಾಷ್ಟ್ರ ಮತ್ತು ಕೇರಳದಂತಹ ಕೆಲವೇ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು, ಹೊಸ ತಳಿಗಳು ಹೆಚ್ಚು ಸಾಂಕ್ರಾಮಿಕ ಮತ್ತು ವೇಗವಾಗಿ ಹರಡುತ್ತವೆ ಮತ್ತು ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಲಸಿಕೆಗಳು ಈ ರೋಗಿಗಳ ಮೇಲೆ ಕಡಿಮೆ ಪರಿಣಾಮಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾಹಿತಿ ನೀಡಿದೆ.
ಎಲ್ಲಾ ಮೂರು ತಳಿಗಳು ತಮ್ಮ ಸ್ಪೈಕ್ ಪ್ರೋಟೀನ್ ಅಥವಾ ಮಾನವ ಜೀವಕೋಶಗಳಿಗೆ ಅಂಟಿಕೊಳ್ಳುವ ವೈರಸ್ನ ಭಾಗದ ಬದಲಾವಣೆಗಳ ಮೂಲಕ ಸಾಗಿವೆ. ಅವು ಜೀವಕೋಶಗಳಿಗೆ ಸೋಂಕು ತಗುಲಿಸುವಲ್ಲಿ ಉತ್ತಮವೆಂದು ತೋರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಮತ್ತು ಬ್ರೆಜಿಲಿಯನ್ ತಳಿಗಳು ಯುಕೆ ರೂಪಾಂತರಕ್ಕಿಂತ ವ್ಯಕ್ತಿಯ ಶ್ವಾಸಕೋಶವನ್ನು ಸುಲಭವಾಗಿ ಸೋಂಕು ತರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
Published by:
Latha CG
First published:
February 17, 2021, 3:43 PM IST