Vijayasarthy SNVijayasarthy SN
|
news18 Updated:January 2, 2021, 1:07 PM IST
ಸುವೇಂದು ಅಧಿಕಾರಿ.
- News18
- Last Updated:
January 2, 2021, 1:07 PM IST
ಕೋಲ್ಕತಾ(ಜ. 02): ವಿಧಾನಸಭಾ ಚುನಾವಣೆ ಸನಿಹಕ್ಕೆ ಬರುತ್ತಿರುವಂತೆಯೇ ಆಡಳಿತಾರೂಢ ಟಿಎಂಸಿ ಪಕ್ಷದ ಹಡಗು ಅಲುಗಾಡತೊಡಗಿದೆ. ಅನೇಕ ಟಿಎಂಸಿ ನಾಯಕರು ಬಿಜೆಪಿ ಕಡೆ ಮುಖ ಮಾಡುತ್ತಿರುವುದು ಮುಂದುವರಿದಿದೆ. ಮಾಜಿ ಸಚಿವ ಸುವೇಂದು ಅಧಿಕಾರಿ ಕಳೆದ ತಿಂಗಳು ಟಿಎಂಸಿ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಅವರ ಸಹೋದರ ಸೌಮೇಂದು ಅಧಿಕಾರಿ ಕೂಡ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲ, ಕಾಂಥಿ ಪುರಸಭೆಯ ಇತರ 14 ಟಿಎಂಸಿ ಸದಸ್ಯರೂ ಕೂಡ ಕಮಲ ಪಾಳಯಕ್ಕೆ ವಲಸೆ ಹೋಗಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ವರ್ಷಾರಂಭದಲ್ಲೇ ಬಿಗ್ ಶಾಕ್ ಸಿಕ್ಕಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುವೇಂದು ಅಧಿಕಾರಿ ಅವರು ತಮ್ಮ ಸಹೋದರ ಹಾಗೂ ಇತರ 15 ಟಿಎಂಸಿ ಕೌನ್ಸಿಲರ್ಗಳನ್ನ ಬಿಜೆಪಿಗೆ ಬರಮಾಡಿಕೊಂಡರು. ಈ ನಾಯಕರ ಜೊತೆ 5,000 ಟಿಎಂಸಿ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆಂದು ಹೇಳಲಾಗುತ್ತಿದೆ.
ಟಿಎಂಸಿ ಪಕ್ಷವು ಕಾಂಥಿ ಪುರಸಭೆಯ ಆಡಳಿತದಿಂದ ಸೌಮೇಂದು ಅಧಿಕಾರಿ ಅವರನ್ನ ಕೆಳಗಿಳಿಸಿತ್ತು. ಆಗಲೇ ಅವರು ಬಿಜೆಪಿ ಸೇರ್ಪಡೆಯ ಮಾತುಗಳು ಕೇಳಿಬಂದಿದ್ದವು. ಸೌಮೇಂದು ಅವರನ್ನ ಹುದ್ದೆಯಿಂದ ತೆಗೆದುಹಾಕಿದ್ದ ರಾಜ್ಯ ಸರ್ಕಾರದ ಸೇಡಿನ ಕ್ರಮ ಎಂದು ಬಣ್ಣಿಸಿದ ಸುವೇಂದು ಅಧಿಕಾರಿ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಲೆ ಪ್ರವಹಿಸಿ ಟಿಎಂಸಿ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: Buta Singh Death - ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ನಿಧನ
“ಸೌಮೇಂದು ಅವರಿಗೆ ಮುಂದೆ ಸುದೀರ್ಘ ರಾಜಕೀಯ ಹಾದಿ ಇದೆ. ಇಷ್ಟು ವರ್ಷಗಳ ಕಾಲ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಇತರ 14 ಪುರಸಭೆ ಸದಸ್ಯರೂ ಪಕ್ಷಕ್ಕಾಗಿ ಶ್ರಮಪಟ್ಟಿದ್ದಾರೆ. ಅಧಿಕಾರಿ ಕುಟುಂಬ ಇನ್ಮುಂದೆ ಪಿಶಿ-ಭಾಯಿಪೋ (ಮಮತಾ ಬ್ಯಾನರ್ಜಿ ಮತ್ತವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ) ಪಕ್ಷದೊಂದಿಗೆ ಇರುವುದಿಲ್ಲ” ಎಂದು ಹೇಳಿದ ಸುವೇಂದು ಅಧಿಕಾರಿ, ಬಿಜೆಪಿಗೆ ಬಂದ ಎಲ್ಲಾ ನಾಯಕರಿಗೂ ಪಕ್ಷದ ಧ್ವಜ ನೀಡಿ ಸ್ವಾಗತ ಮಾಡಿದರು.
ಕಾಂಥಿ ಪುರಸಭೆಗೆ ಈಗಾಗಲೇ ಚುನಾವಣೆ ನಡೆಯಬೇಕಿತ್ತಾದರೂ ವಿಳಂಬ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುವೇಂದು, 20 ಸದಸ್ಯಬಲದ ಪುರಸಭೆ ಚುನಾವಣೆಯಲ್ಲಿ ಟಿಎಂಸಿಗೆ ಸೋಲು ನಿಶ್ಚಿತವಾದ್ದರಿಂದ ಸರ್ಕಾರ ಚುನಾವಣೆಯನ್ನು ನಡೆಸಲು ವಿಳಂಬಿಸುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ: COVID-19 Vaccination: ದೇಶಾದ್ಯಂತ ಕೊರೋನಾ ಲಸಿಕೆ ಉಚಿತ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್
“ಸ್ಥಳೀಯ ಸಂಸ್ಥೆ ಚುನಾವಣೆಯಾಗಿರಲಿ, ವಿಧಾನಸಭೆ ಚುನಾವಣೆಯಾಗಿರಲಿ ಜನರು ಬಿಜೆಪಿಗೆ ಈ ಬಾರಿ ಮತ ಹಾಕುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದ ದಕ್ಷಿಣ ಕಾಂಥಿ ಮತ್ತಿತರ ಪ್ರದೇಶಗಳಲ್ಲಿ ಕಮಲ ಈ ಬಾರಿ ಅರಳಲಿದೆ. ನಮ್ಮ ಕುಟುಂಬವನ್ನು ವಿನಾಕಾರಣ ಗುರಿ ಮಾಡಲಾಗುತ್ತಿದೆ. ಚುನಾವಣಾ ರಣರಂಗದಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ” ಎಂದು ಸುವೇಂದು ಅಧಿಕಾರಿ ಪಣತೊಟ್ಟರು.ಸುವೇಂದು ಅಧಿಕಾರಿ ಅವರ ಕುಟುಂಬದ ಹಲವು ಸದಸ್ಯರು ರಾಜಕೀಯದಲ್ಲಿದ್ದಾರೆ. ದಿಬ್ಯೇಂದು ಅಧಿಕಾರಿ ಮತ್ತು ಸಿಸಿರ್ ಅಧಿಕಾರಿ ಅವರು ಟಿಎಂಸಿಯ ಲೋಕಸಭಾ ಸದಸ್ಯರಾಗಿದ್ದಾರೆ. ಅವರೂ ಕೂಡ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ.
Published by:
Vijayasarthy SN
First published:
January 2, 2021, 1:05 PM IST