news18-kannada Updated:April 6, 2021, 10:49 PM IST
sonu sood
ದೇಶದಲ್ಲಿ ಒಂದೇ ದಿನ ಲಕ್ಷಕ್ಕೂ ಅಧಿಕ ಮಂದಿ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನಲ್ಲೇ ಸಂಜೀವಿನಿ ಅಭಿಯಾನದೊಂದಿಗೆ ಕೈ ಜೋಡಿಸಿರುವುದಾಗಿ ಬಾಲಿವುಡ್ ನಟ ಸೋನು ಸೂದ್ ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದಾರೆ. ಸಂಜೀವಿನಿ ಅಭಿಯಾನವು ಭಾರತದ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದೆ. ಏಪ್ರಿಲ್ 7 ರಿಂದ ಈ ಅಭಿಯಾನ ಪ್ರಾರಂಭವಾಗಲಿದ್ದು, ಕೊರೋನಾ ಪೀಡಿತ ಪ್ರದೇಶಗಳ ಜನರಿಗೆ ಲಸಿಕೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ನೆಟ್ವರ್ಕ್ 18 ಪ್ರಾರಂಭಿಸಿರುವ ಈ ಅಭಿಯಾನಕ್ಕೆ ‘ಸಂಜೀವನಿ - ಎ ಶಾಟ್ ಅಟ್ ಲೈಫ್’ ಎಂದು ಹೆಸರಿಡಲಾಗಿದ್ದು, ಫೆಡರಲ್ ಬ್ಯಾಂಕ್ನ ಸಿಎಸ್ಆರ್ ಹಾಗೂ ಅಪೊಲೊ 24/7 ಸಹ ಆರೋಗ್ಯ ತಜ್ಞರು ಅಭಿಯಾನದೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ದೇಶದ ಅತೀ ಹೆಚ್ಚು ಕೊರೋನಾ ಪೀಡಿತ ಜಿಲ್ಲೆಗಳಲ್ಲಿ ಲಸಿಕೆ ತಲುಪಿಸುವುದು ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ.
ಈಗಾಗಲೇ ಎಲ್ಲೆಡೆ ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಪ್ರಸ್ತುತ ಭಾರತದಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಐದು ಜಿಲ್ಲೆಗಳನ್ನು ಈ ಅಭಿಯಾನಕ್ಕಾಗಿ ಆರಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕಿತರಿಗೆ ಉಚಿತ ಲಸಿಕೆಯನ್ನು ನೀಡಲಿದ್ದಾರೆ. ಸಾಂಕ್ರಾಮಿಕ ಸೋಂಕಿಗೆ ಕೇವಲ ಸರ್ಕಾರದಿಂದ ಮಾತ್ರ ಕ್ರಮಗಳನ್ನು ನಿರೀಕ್ಷಿಸುವಂತಿಲ್ಲ. ಬದಲಾಗಿ, ನೆಟ್ವರ್ಕ್ 18 ನಂತಹ ಜವಾಬ್ದಾರಿಯುತ ಖಾಸಗಿ ಕಂಪನಿಗಳು ಹೆಜ್ಜೆ ಹಾಕಬಹುದು ಎಂಬುದನ್ನು ಈ ಮೂಲಕ ಸಾರಿದ್ದಾರೆ.
ಇದರಿಂದ ದೇಶದಲ್ಲಿ ಕೊರೋನಾ 2ನೇ ಅಲೆಯನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ. ಹಾಗೆಯೇ ಜೀವವನ್ನು ಉಳಿಸಿ, ದೇಶದ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಈ ಅಭಿಯಾನ ಹೊಂದಿರುವುದು ವಿಶೇಷ. ಇದಕ್ಕಾಗಿ ಅಪೊಲೊ 24/7 ಚುಚ್ಚುಮದ್ದಿನ ಶಿಬಿರಗಳನ್ನು ಆಯ್ದ ಐದು ಜಿಲ್ಲೆಗಳಲ್ಲಿ ಪ್ರಾರಂಭಿಸಲಿದೆ. ಈ ಮೂಲಕ ತಜ್ಞ ವೈದ್ಯರು ಮತ್ತು ವ್ಯಾಕ್ಸಿನೇಷನ್ ತಜ್ಞರೊಂದಿಗೆ, COVID ಲಸಿಕೆಗಳ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲಿದೆ.
ಅಭಿಯಾನದ ರಾಯಭಾರಿ ಸೋನು ಸೂದ್ ಸ್ವತಃ ಲಸಿಕೆ ತೆಗೆದುಕೊಳ್ಳುವ ಮೂಲಕ ಸಂಜೀವನಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಲಸಿಕೆ ತೆಗೆದುಕೊಳ್ಳುವ ವಿಧಾನಗಳು ಮತ್ತು ಅದರ ಉದ್ದೇಶವನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಇನ್ನು ಈ ಅಭಿಯಾನದ ಮತ್ತೊಂದು ಪ್ರಮುಖ ಉದ್ದೇಶವೆಂದರೆ ಭಾರತದ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವುದಾಗಿದೆ. ಲಸಿಕೆಗಳ ತೆಗೆದುಕೊಳ್ಳದಿರುವ ತಪ್ಪು ಗ್ರಹಿಕೆಗಳು ದೂರವಾದರೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದಾಗಿದೆ.
ಹೀಗಾಗಿ ಸಂಜೀವನಿ ಅಭಿಯಾನದ ಮೂಲಕ ವ್ಯಾಕ್ಸಿನೇಷನ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ ಜನರನ್ನು ಲಸಿಕೆ ತೆಗೆದುಕೊಳ್ಳುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಅಮೃತಸರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ‘ಸಂಜೀವನಿ ಗಾಡಿ’ ವಾಹನಕ್ಕೆ ಫ್ಲ್ಯಾಗ್ ಆಫ್ ಮಾಡಲಾಗುತ್ತದೆ. ಈ ವಾಹನವು ಫೆಡರಲ್ ಬ್ಯಾಂಕ್ ಅಳವಡಿಸಿಕೊಂಡ ಐದು ಜಿಲ್ಲೆಗಳಲ್ಲಿ ಸುಮಾರು 1500 ಹಳ್ಳಿಗಳಿಗೆ ಭೇಟಿ ನೀಡಲಿದೆ. ಅಲ್ಲದೆ ಅಲ್ಲಿ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಅಭಿಯಾನದ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಅಮೃತಸರ, ನಾಸಿಕ್, ಇಂದೋರ್, ಗುಂಟೂರು ಮತ್ತು ದಕ್ಷಿಣ ಕನ್ನಡ ಸೇರಿರುವುದು ವಿಶೇಷ.
ಅಭಿಯಾನ ನಡೆಯಲಿರುವ ಹಳ್ಳಿಗಳಾದ್ಯಂತ ನಾಗರಿಕರಿಗೆ ಉಚಿತ ಲಸಿಕೆ ನೀಡಲಾಗುತ್ತದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ವ್ಯಾಕ್ಸಿನೇಷನ್ಗೆ ಹಣ ನೀಡುವುದಾಗಿ ಘೋಷಿಸಿರುವ ಸಮಯದಲ್ಲಿ, ಕೆಳ ಹಂತದ ಜನರಿಗೂ ಲಸಿಕೆ ತಲುಪಲು ಮತ್ತು ನಗರಗಳನ್ನು ಮೀರಿ ಹಳ್ಳಿಗಳಿಗೆ ವಾಕ್ಸಿನ್ ತುರ್ತು ಅವಶ್ಯಕತೆಯಿರುವುದನ್ನು ಮನಗಂಡು ಈ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಕೋವಿಡ್ -19 ಸಂಕೋಲೆಯಿಂದ ಹೊರಬರಲು ಭಾರತದ ಪ್ರತಿರಕ್ಷೆಯಾಗಿ ವಾಕ್ಸಿನ್ ಎಂಬುದೇ ಏಕೈಕ ಆಯ್ಕೆಯಾಗಿದೆ. ಹೀಗಾಗಿ ಏಪ್ರಿಲ್ 7 ರಂದು ಈ ವಿಶ್ವ ಆರೋಗ್ಯ ದಿನದಂದೇ ನೆಟ್ವರ್ಕ್ 18 ‘ಸಂಜೀವನಿ - ಎ ಶಾಟ್ ಆಫ್ ಲೈಫ್’ ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ದೇಶದ ನಾಗರಿಕರಿಗೆ ಲಸಿಕೆ ತಲುಪಿಸುವ ಸವಾಲಿನ ಕೆಲಸಕ್ಕೆ ನೆಟ್ವರ್ಕ್ 18 ಕೈಹಾಕಿದೆ.
Published by:
zahir
First published:
April 6, 2021, 10:44 PM IST