• Home
 • »
 • News
 • »
 • national-international
 • »
 • Sonu Sood- ನಟ ಸೋನು ಸೂದ್​ಗೆ ಸೇರಿದ 6ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ಸರ್ವೇಕ್ಷಣೆ

Sonu Sood- ನಟ ಸೋನು ಸೂದ್​ಗೆ ಸೇರಿದ 6ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ಸರ್ವೇಕ್ಷಣೆ

ಸೋನು ಸೂದ್

ಸೋನು ಸೂದ್

IT Survey- ಮುಂಬೈ ಮತ್ತು ಲಕ್ನೋ ನಗರದಲ್ಲಿರುವ ಸೋನು ಸೂದ್ಗೆ ಸೇರಿದ ಆರು ಸ್ಥಳಗಳಿಗೆ ಐಟಿ ಅಧಿಕಾರಿಗಳ ವಿವಿಧ ತಂಡಗಳು ತೆರಳಿ ಸರ್ವೇಕ್ಷಣೆ ನಡೆಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 • News18
 • Last Updated :
 • Share this:

  ಮುಂಬೈ, ಸೆ. 15: ಕೋವಿಡ್ ಸಾಂಕ್ರಾಮಿಕ ಸ್ಥಿತಿ ಉದ್ಭವವಾದ ಬಳಿಕ ತಮ್ಮ ಸಾಮಾಜಿಕ ಕಾರ್ಯಗಳಿಂದ ಬಹಳಷ್ಟು ಗಮನ ಸೆಳೆಯುತ್ತಿರುವ ಬಾಲಿವುಡ್ ನಟ ಸೋನು ಸೂದ್ (Bollywood actor Sonu Sood) ಅವರಿಗೆ ಸೇರಿದ ಆರಕ್ಕೂ ಹೆಚ್ಚು ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ಸರ್ವೇಕ್ಷಣೆ (IT Survey) ನಡೆಸಿದ್ದಾರೆ. ಮುಂಬೈನಲ್ಲಿರುವ ಸೋನು ಸೂದ್ ನಿವಾಸಕ್ಕೂ ಆದಾಯ ತೆರಿಗೆ ಅಧಿಕಾರಿಗಳು ಹೋಗಿದ್ದರಾ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಐಟಿ ಮೂಲಗಳ ಪ್ರಕಾರ, ಮುಂಬೈ ಮತ್ತು ಲಕ್ನೋ ನಗರಗಳಲ್ಲಿರುವ ಸೋನು ಸೂದ್​ಗೆ ಸೇರಿದ ಸ್ಥಳಗಳಲ್ಲಿ ಮೇಲೆ ನಡೆದಿರುವುದು ಐಟಿ ರೇಡ್ ಅಲ್ಲ. ಇದು ಕೇವಲ ಸರ್ವೇಕ್ಷಣೆಯಷ್ಟೇ. ತೆರಿಗೆ ವಂಚನೆ ಆರೋಪವೊಂದರ ಪರಾಮರ್ಶೆ ನಿಮಿತ್ತ ಐಟಿ ಅಧಿಕಾರಿಗಳು ನಟನಿಗೆ ಸೇರಿದ ಸ್ಥಳಗಳಿಗೆ ತೆರಳಿ ಪರಿಶೀಲನೆಗಳನ್ನ ನಡೆಸಿದ್ದಾರೆನ್ನಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರವೊಂದರಲ್ಲಿ ಸೋನು ಸೂದ್ ತೆರಿಗೆ ವಂಚನೆ ನಡೆಸಿದ್ದಾರೆಂಬ ಆರೋಪ ಇದೆ.


  ಕಳೆದ ವರ್ಷ ಸೋನು ಸೂದ್ ಅವರು ಮುಂಬೈನಲ್ಲಿರುವ ತಮ್ಮ ಎಂಟು ಆಸ್ತಿಗಳನ್ನ ಅಡಮಾನ ಇಟ್ಟು 10 ಕೋಟಿ ರೂ ಪಡೆದಿದ್ದರು. ಆ ಹಣವನ್ನು ಸಾಮಾಜಿಕ ಸೇವೆಗೆ ವಿನಿಯೋಗಿಸಿದ್ದರೆನ್ನಲಾಗಿದೆ. ಸಹಾಯಕ್ಕಾಗಿ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದರಿಂದ ಸೋನು ಸೂದ್ ಅವರು ಹಣ ಹೊಂದಿಸಲು ತಮ್ಮ ಆಸ್ತಿ ಅಡಮಾನ ಇಡುವುದು ಅನಿವಾರ್ಯವಾಗಿತ್ತೆನ್ನಲಾಗಿದೆ. ಈ ಕಾರ್ಯದಲ್ಲಿ ಸೋನು ಸೂದ್ ಅಕ್ರಮ ಎಸಗಿದ್ದರೆಂಬ ಆರೋಪವೂ ಇತ್ತು.


  ಕಳೆದ ವರ್ಷ ಲಾಕ್ ಡೌನ್ ವೇಳೆಯಲ್ಲಿ ಕೂಲಿ ಕಾರ್ಮಿಕರನ್ನು ಅವರವರ ಊರಿಗೆ ವಾಪಸ್ ಕಳುಹಿಸುವ ಕಾರ್ಯದಲ್ಲಿ ನೆರವಾಗುವ ಮೂಲಕ ಗಮನ ಸೆಳೆದಿದ್ದ ಸೋನು ಸೂದ್ ಆ ಬಳಿಕ ಆಕ್ಸಿಜನ್ ಸರಬರಾಜು, ಫೂಡ್ ಕಿಟ್ ಹಂಚಿಕೆ ಇತ್ಯಾದಿ ಕೆಲಸಗಳನ್ನ ನಿರಂತರವಾಗಿ ಮಾಡುತ್ತಾ ಬಂದಿದ್ಧಾರೆ. 48 ವರ್ಷದ ಸೋನು ಸೂದ್ ಅವರ ಈ ಕಾರ್ಯಕ್ಕೆ ಅವರನ್ನ ರಿಯಲ್ ಲೈಫ್ ಹೀರೋ ಎಂದು ಹಲವು ಮೆಚ್ಚುಗೆ ವ್ಯಕ್ತಪಡಿಸಿರುವುದುಂಟು. ಇದೇ ವೇಳೆ, ಅವರು ರಾಜಕೀಯಕ್ಕೆ ಸೇರಲಿದ್ದಾರೆ ಎಂಬ ಮಾತುಗಳೂ ಹಲವು ಬಾರಿ ಕೇಳಿಬಂದಿವೆ. ಅವನ್ನು ಸೋನು ಸೂದ್ ಸಾರಾಸಗಟಾಗಿ ತಳ್ಳಿಹಾಕಿದ್ದಾರಾದರೂ ಇತ್ತೀಚೆಗೆ ಅವರು ದೆಹಲಿ ಸರ್ಕಾರದ ಮೆಂಟರ್​ಶಿಪ್ ಯೋಜನೆಗೆ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಇದು ಅವರು ರಾಜಕೀಯವಾಗಿ ವಾಲುತ್ತಿದ್ದಾರೇನೋ ಎಂಬ ಭಾವನೆ ಜನರಲ್ಲಿ ಮೂಡಿದೆ.


  ಇದಕ್ಕೆ ಪುಷ್ಟಿ ನೀಡುವಂತೆ, ಸೋನು ಸೂದ್ ಅವರ ಮೇಲೆ ಐಟಿ ಇಲಾಖೆ ತೆಗೆದುಕೊಂಡಿರುವ ನಡೆಯ ವಿರುದ್ಧ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಛಡ್ಡ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರ ನಡುನೀರಲ್ಲಿ ಕೈಬಿಟ್ಟಿದ್ದರಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ ಒಂದೇ ಅಪರಾಧಕ್ಕೆ ಸೋನು ಸೂದ್ ಮೇಲೆ ಸರ್ಕಾರ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಕೋಟ್ಯಂತರ ಜನರಿಗೆ ಆರಾಧಕನಾಗಿರುವ ಒಬ್ಬ ಅದ್ವಿತೀಯ ಸಮಾಜ ಕಾರ್ಯಕರ್ತನ ಮೇಲೆ ಅತಂತ್ರ ಸರ್ಕಾರದ ದ್ವೇಷದ ಕ್ರಮ ಇದು ಎಂದು ರಾಘವ್ ಛಡ್ಡ ಅವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.


  ಇದನ್ನೂ ಓದಿ: Drones in India- ಡ್ರೋನ್​ಗಳ ಅಭಿವೃದ್ಧಿಗೆ ಕೇಂದ್ರ ಒತ್ತು; 10 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ


  ಮತ್ತೊಬ್ಬ ಎಎಪಿ ನಾಯಕಿ ಆತಿಶಿ ಅವರೂ ಖಾರವಾಗಿ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಒಳ್ಳೆಯ ಕೆಲಸ ಮಾಡುವ ಯಾರ ಮೇಲೆ ಬೇಕಾದರೂ ಸರ್ಕಾರ ಕಿರುಕುಳ ನೀಡುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಟೀಕಿಸಿದ್ದಾರೆ.


  ಸೋನು ಸೂದ್ ಮೇಲೆ ಐಟಿ ಕ್ರಮ ಇದೇ ಮೊದಲಲ್ಲ. ಸುಮಾರು ಹತ್ತು ವರ್ಷಗಳ ಹಿಂದೆಯೇ ಐಟಿ ಇಲಾಖೆ ಬಾಲಿವುಡ್​ನ ಹಲವು ವ್ಯಕ್ತಿಗಳ ಸ್ಥಳಗಳ ಮೇಲೆ ರೇಡ್ ಮಾಡಿತ್ತು. ಆಗ ಸೋನು ಸೂದ್ ಅವರ ಆಸ್ತಿಗಳ ಮೇಲೂ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಮುಂಬೈನಲ್ಲಿ ಸೋನು ಸೂದ್ 30 ಕೋಟಿ ರೂ ಕೊಟ್ಟು ಖರೀದಿಸಿದ್ದ ಆಸ್ತಿಯ ವ್ಯವಹಾರದಲ್ಲಿ ತೆರಿಗೆ ಸರಿಯಾಗಿ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ ದಾಳಿ ಆಗಿತ್ತೆನ್ನಲಾಗಿದೆ.

  Published by:Vijayasarthy SN
  First published: