National Language row: ರಾಷ್ಟ್ರೀಯ ಭಾಷೆ ವಿವಾದ: ದಕ್ಷಿಣದ ಪರ ನಿಂತ ಹಿಂದಿ ಗಾಯಕ ಸೋನು ನಿಗಮ್

ನನಗೆ ಗೊತ್ತಿರುವಂತೆ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರ ಭಾಷೆ ಎಂಬುದಾಗಿ ಬರೆದಿಲ್ಲ ಎಂದು ಸೋನು ನಿಗಂ ಹೇಳಿದ್ದಾರೆ.

ಸೋನು ನಿಗಮ್

ಸೋನು ನಿಗಮ್

 • Share this:
  National Language row: ಭಾಷಾ ವಿಚಾರ ಎಂಬುದು ಭಾರತದಲ್ಲಿ ಹೊಸದಾದ ವಿಷಯವೇನಲ್ಲ. ಈ ಹಿಂದೆಯೂ ಭಾಷೆಗೆ ಸಂಬಂಧಿಸಿದಂತೆ ಅನೇಕ ವಿವಾದಗಳು ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ, ದುರದೃಷ್ಟವಶಾತ್ ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕನ್ನಡ ಚಿತ್ರರಂಗದ ತಾರೆ ಕಿಚ್ಚ ಸುದೀಪ್ (Kiccha Sudeep) ಅವರು ಹಿಂದಿ ಭಾಷೆಯನ್ನು (Hindi Language) ಕುರಿತು ಅದೀಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ ಎಂಬ ಹೇಳಿಕೆಯನ್ನು ಒಂದು ಸಂದರ್ಭಾನುಸಾರ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದಿಂದ ಅಜಯ್ ದೇವಗನ್ ಅವರು ಟ್ವಿಟ್ಟರ್ ನಲ್ಲಿ ಹಿಂದಿ ಕುರಿತು ಮಾತನಾಡುತ್ತ ಅದನ್ನು ರಾಷ್ಟ್ರೀಯ ಭಾಷೆ ಅಂತೆಲ್ಲ ಹೇಳಿ ಮುಂದೆ ಅದು ಅನೇಕರಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತ ವಿವಾದಕ್ಕೆ ದಾರಿ ಮಾಡಿಕೊಟ್ಟಿತು.

  ಹಿಂದಿ ರಾಷ್ಟ್ರ ಭಾಷೆ ಎಂದು ಎಲ್ಲೂ ಇಲ್ಲ 

  ಈಗ ಮತ್ತೆ ಆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕ ಸೋನು ನಿಗಮ್ ಅವರು ಸಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು ಅದೀಗ ಮತ್ತೆ ಚರ್ಚೆಯಾಗುತ್ತಿದೆ. ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿರುವ ಸೋನು ನಿಗಮ್ ಅವರು, ಈ ರೀತಿ ಪ್ರತಿಕ್ರಿಯೆ ನೀಡಿದರು, "ನನಗೆ ಗೊತ್ತಿರುವಂತೆ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರ ಭಾಷೆ ಎಂಬುದಾಗಿ ಬರೆದಿಲ್ಲ, ಆದರೆ ನನಗೆ ಗೊತ್ತಿದೆ ಹಿಂದಿ ಅತಿ ಹೆಚ್ಚು ಜನರಿಂದ ಬಳಸಲ್ಪಡುವ ಬಾಷೆ ಆಗಿದೆ ಎಂದು. ಈ ಮಾತು ಹಾಗಿರಲಿ, ಆದರೆ ತಮಿಳು ಭಾಷೆಯನ್ನು ಜಗತ್ತಿನ ಅತಿ ಪುರಾತನ ಭಾಷೆ ಎನ್ನಲಾಗುತ್ತದೆ ಎಂಬುದರ ಬಗ್ಗೆ ನಮಗೆ ಅರಿವಿದೆಯೆ? ಸಂಸ್ಕೃತ ಮತ್ತು ತಮಿಳಿನ ಮಧ್ಯೆ ಈಗಲೂ ವಾದ-ಪ್ರತಿವಾದ ನಡೆಯುತ್ತಲೇ ಇದೆ. ಆದರೆ, ಜನರು ತಮಿಳು ಹಳೆಯ ಭಾಷೆ ಎನ್ನುತ್ತಾರೆ್" ಎಂದು ವಿವರಿಸಿದ್ದಾರೆ.

  ಇದನ್ನೂ ಓದಿ: Possessive Wife: ಭಾರತೀಯ ಮಹಿಳೆಯರು ಗಂಡನ ಬಗ್ಗೆ ಹೆಚ್ಚು ಪೊಸೆಸಿವ್ : ಹೈಕೋರ್ಟೇ ಹೀಗೆ ಹೇಳಿದ್ದೇಕೆ?

  ತಮಿಳಿಗ ಏಕೆ ಹಿಂದಿ ಮಾತನಾಡಬೇಕು? 

  ಹೀಗೆ ಸಮಾರಂಭದಲ್ಲಿ ತಮ್ಮದೆ ಆದ ನಿಲುವನ್ನು ವ್ಯಕ್ತಪಡಿಸಿರುವ ಪದ್ಮಶ್ರೀ ಪುರಸ್ಕೃತ ಗಾಯಕ ಸೋನು ಅವರು ಭಾರತ ಹಾಗೂ ಭಾರತೀಯರನ್ನು ಅವರು ಮಾತನಾಡುವ ಭಾಷೆಗಳ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವುದರ ಬಗ್ಗೆ ತಮ್ಮ ತೀವ್ರ ಆಕ್ಷೇಪ ಹೊರಹಾಕಿದರು. ಈ ಕುರಿತು ಮಾತನಾಡಿದ ಅವರು "ನಮಗೆ ಈಗಾಗಲೇ ಬಗೆಹರಿಸಬೇಕಾಗಿರುವ ದೇಶದ ಸಾಕಷ್ಟು ಸಮಸ್ಯೆಗಳಿರುವುದು ಗೊತ್ತಿಲ್ಲವೆ, ಅಂಥದ್ದರಲ್ಲಿ ಇನ್ನಷ್ಟು ಸಮಸ್ಯೆಗಳು ಬೇಕೇ...? ನಮ್ಮ ನೆರೆಹೊರೆಯವರನ್ನು ನೋಡಿ....ಮತ್ತು ನಾವು ಖುದ್ದಾಗಿ ಭಾರತೀಯರಲ್ಲಿ ನೀನು ತಮಿಳಿಗ...ಹಿಂದಿ ಮಾತನಾಡು....ಅನ್ನುತ್ತೇವೆ, ಅರೆ..ಹಾಗೇಕೆ? ಅವರೇಕೆ ಹಿಂದಿ ಮಾತನಾಡಬೇಕು?" ಎಂದು ಪ್ರಶ್ನಿಸಿದ್ದಾರೆ.

  ಇದನ್ನು ಇಲ್ಲಿಗೆ ಬಿಟ್ಟು ಬಿಡಿ

  ಮುಂದುವರೆಯುತ್ತ ಅವರು, "ಈ ದೇಶದಲ್ಲಿ ಜನರು ಯಾವ ಭಾಷೆಗಳಲ್ಲಿ ಮಾತನಾಡ ಬಯಸುವರೋ ಅವರಿಗೆ ಆ ಭಾಷೆಯಲ್ಲಿ ಮಾತನಾಡಲು ಬಿಡಿ, ಯಾಕಾಗಿ ನೀವು ಅವರನ್ನು ಉದ್ದೇಶಿಸಿ ಈ ಭಾಷೆ, ಆ ಭಾಷೆಯಲ್ಲೇ ಮಾತನಾಡಬೇಕು ಎಂದು ಬಲವಂತಪಡಿಸುತ್ತಿರುವಿರಿ, ಇದನ್ನು ಇಲ್ಲಿಗೆ ಬಿಟ್ಟು ಬಿಡಿ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸೋನು ನಿಗಮ್. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತಮ್ಮ ಧ್ವನಿ ನೀಡಿರುವ ಸೋನು ನಿಗಮ್ ಈ ಬಗ್ಗೆ ಮತ್ತೊಂದು ವಿಚಾರದ ಕುರಿತು ಗಮನ ಸೆಳೆದು, ನಮ್ಮ ದೇಶದಲ್ಲಿ ಕೆಲಸ ಮಾಡುವ ಎಲ್ಲ ನ್ಯಾಯಾಲಯಗಳು ತೀರ್ಪನ್ನು ಇಂಗ್ಲೀಷ್ ಭಾಷೆಯಲ್ಲಿ ನೀಡಿವೆ. ಜನರಿಗೆ ಸರಿ ಎನಿಸುವ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದಿದ್ದಾರೆ.

  ಅಷ್ಟಕ್ಕೂ ಸೋನು ಅವರು, ಬೀಸ್ಟ್ ಸ್ಟೂಡಿಯೋಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಸುಶಾಂತ್ ಮೆಹ್ತಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಅವರ ಈ ವಿಡಿಯೋ ಸಂವಾದವನ್ನು ಮೆಹ್ತಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಅಜಯ್ ದೇವಗನ್ ಅವರಿಗೆ ಸೋನು ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ : ಬನ್ನಿ ಈ ದೇಶದ ಜನರು ಮತ್ತಷ್ಟು ವಿಭಜನೆಯಾಗದಂತೆ ತಡೆಯೋಣ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಎಲ್ಲಿ ಬರೆಯಲಾಗಿದೆ?" ಎಂಬ ವಕ್ಕಣಿಕೆ ಬರೆದುಕೊಂಡಿದ್ದಾರೆ.

  ಈ ಹಿಂದೆ ಕೆಜಿಎಫ್ ಚಾಪ್ಟರ್ 2 ಯಶಸ್ಸಿಗೆ ಸಂಬಂಧಿಸಿದಂತೆ ಸುದೀಪ್ ಅವರು ಮಾತನಾಡುತ್ತ, ಪ್ರಾದೇಶಿಕ ಭಾಷೆಗಳಾದ ಕನ್ನಡದಂತಹ ಚಿತ್ರಗಳು ಹಿಂದಿ ಮಾರುಕಟ್ಟೆಯಲ್ಲೂ ತಮ್ಮ ಸಾಮರ್ಥ್ಯ ಸ್ಥಾಪಿಸಿದ್ದು ಹಿಂದಿ ಮಾರುಕಟ್ಟೆ ಎಂಬುದು ಈಗ ಮೊದಲಿನಂತೆ ಹಿಂದಿಯಾಗೇ ಉಳಿದಿಲ್ಲ ಎಂಬರ್ಥದಲ್ಲಿ ಹಿಂದಿ ರಾಷ್ಟ್ರಭಾಷೆಯಾಗಿ ಈಗ ಉಳಿದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನೇ ಆಧಾರವಾಗಿರಿಸಿಕೊಂಡು ಅಜಯ್ ದೇವಗನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಪ್ರಾದೇಶಿಕ ಭಾಷೆಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡಿ ಇಲ್ಲಿ ಬಿಡುಗಡೆ ಮಾಡುತ್ತೀರಿ, ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿದೆ ಎಂದೆಲ್ಲ ಬರೆದುಕೊಂಡಿದ್ದರು. ಅಜಯ್ ಅವರ ಈ ಹೇಳಿಕೆ ಮುಂದೆ ವಿವಾದಕ್ಕೆ ಕಾರಣವಾಗಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವೂ ಆಗಿತ್ತು. ತದನಂತರ ಇಬ್ಬರೂ ದಿಗ್ಗಜ ನಟರು ತಮ್ಮ ತಮ್ಮಲ್ಲೆ ಸುಧಾರಿಸಿಕೊಂಡು ವಿವಾದಕ್ಕೆ ಮಂಗಳ ಹಾಡಲು ಪ್ರಯತ್ನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
  Published by:Kavya V
  First published: