Sonia Gandhi: ನಾಳೆ ವಿಚಾರಣೆಗೆ ಹಾಜರಾಗ್ತಾರಾ ಸೋನಿಯಾಗಾಂಧಿ? ಇಡಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷೆ
ಸೋನಿಯಾ ಗಾಂಧಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಕೋವಿಡ್ ಬಳಿಕದ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣದ (National Herald Scam) ತನಿಖೆ (Enquiry) ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED Officers) ನಾಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ (Rahul Gandhi) ಅವರ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಸೋನಿಯಾ ಗಾಂಧಿ ಅವರನ್ನೂ ವಿಚಾರಣೆ ನಡೆಸಲಿದ್ದಾರೆ. ನಾಳೆ ಅಂದರೆ ಜೂನ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ ನೋಟಿಸ್ (Notice) ಕೊಟ್ಟಿದ್ದಾರೆ. ಆದರೆ ಇನ್ನೆರಡು ದಿನ ಕಾಲಾವಕಾಶ ನೀಡುವಂತೆ ಸೋನಿಯಾ ಗಾಂಧಿ ಅವರು ಇಡಿಗೆ ಪತ್ರ (Letter) ಬರೆದಿದ್ದಾರೆ ಎನ್ನಲಾಗಿದೆ.
ನಾಳೆಯ ವಿಚಾರಣೆಯಿಂದ ವಿನಾಯಿತಿ ನೀಡಲು ಮನವಿ
ನಾಳೆ ನಡೆಯಲಿರುವ ವಿಚಾರಣೆಯಿಂದ ತಮಗೆ ವಿನಾಯಿತಿ ನೀಡುವಂತೆ ಸೋನಿಯಾ ಗಾಂಧಿ ಅವರು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆಯಿಂದ ವಿನಾಯಿತಿ ನೀಡಲಾಗಿತ್ತು. ಜೂನ್ 23ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು.
ವಿಶ್ರಾಂತಿ ಪಡೆಯುವಂತೆ ವೈದ್ಯರ ಸೂಚನೆ
ಸೋನಿಯಾ ಗಾಂಧಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಕೋವಿಡ್ ಬಳಿಕದ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಜೂನ್ 2 ರಂದು ಸೋನಿಯಾ ಗಾಂಧಿಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಜೂನ್ 8 ರಂದು ಇಡಿ ಮುಂದೆ ಹಾಜರಾಗಬೇಕಿದ್ದ ಅವರು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ್ದರು. ಬಳಿಕ ಜೂನ್ 12 ರಂದು ಉಸಿರಾಟದ ತೊಂದರೆಯಿಂದ ಅವರನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಲೀಂದ್ರ ಸೋಂಕಿಗೆ ಚಿಕಿತ್ಸೆ ಪಡೆದ ನಂತರ 2 ದಿನದ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನೆರಡು ದಿನ ಕಾಲಾವಕಾಶ ಕೇಳಿರುವ ಸೋನಿಯಾ ಗಾಂಧಿ
ವೈದ್ಯರು ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸೋನಿಯಾ ಇನ್ನಷ್ಟುಸಮಯ ಕೋರಿದ್ದಾರೆ. ಅನಾರೋಗ್ಯ ಸಮಸ್ಯೆ ಇರುವುದರಿಂದ ಇನ್ನೆರಡು ದಿನ ಸಮಯಾವಕಾಶ ಕೋರಿ ಇಡಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಒಟ್ಟು 54 ಗಂಟೆಗಳ ಕಾಲ ರಾಹುಲ್ ಗಾಂಧಿ ವಿಚಾರಣೆ
ಜಾರಿ ನಿರ್ದೇಶನಾಲಯವು ನಿನ್ನೆ 11 ಗಂಟೆಗಳ ಕಾಲ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸಿತು. ಅಲ್ಲಿಗೆ 5 ದಿನಗಳ ಒಟ್ಟು 54 ಗಂಟೆಗಳ ಕಾಲ ಇಡಿ ಕಚೇರಿಯಲ್ಲಿ ಐದು ಸಿಟ್ಟಿಂಗ್‌ಗಳ ರಾಹುಲ್ ಗಾಂಧಿ ವಿಚಾರಣೆ ನಡೆಯಿತು.
ಇಡಿ ವಿಚಾರಣೆ ವಿರೋಧಿಸಿ ಇಂದು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ ವಿಚಾರಣೆ ಖಂಡಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಜಂತರ್ ಮಂತರ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದ ನಾಯಕರನ್ನು ಪೊಲೀಸರು ತಡೆದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ