Opposition Party Meet: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಅಜೆಂಡಾ ಸೆಟ್ ಮಾಡಿದ ಸೋನಿಯಾ ಗಾಂಧಿ

ವಿರೋಧ ಪಕ್ಷಗಳ ಇಂದಿನ ಮಹತ್ವದ ಸಭೆಯ ಮೂಲಕ ಕೆಲವು ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪ್ರತಿಪಕ್ಷಗಳ ಮೈತ್ರಿಯನ್ನು ಕಾಂಗ್ರೆಸ್ ಪಕ್ಷವೇ ಮುನ್ನಡೆಸಲಿದೆ ಎಂಬುದು ಖಾತರಿಯಾದಂತಾಗಿದೆ.

ಸೋನಿಯಾ ಗಾಂಧಿ.

ಸೋನಿಯಾ ಗಾಂಧಿ.

  • Share this:
ನವದೆಹಲಿ (ಆಗಸ್ಟ್​ 20):  2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಮೈತ್ರಿಯನ್ನು ಮತ್ತಷ್ಟು ಬಲಗೊಳಿಸುವ ಮತ್ತು ಆ ಮೂಲಕ ಬಿಜೆಪಿ ಪಕ್ಷಕ್ಕೆ ಕಠಿಣ ಸವಾಲು ನೀಡುವ ಹಿನ್ನಲೆಯಲ್ಲಿ ಕಾಂಗ್ರೆಸ್​ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಸಂಜೆ ಪ್ರಮುಖ 14 ವಿರೋಧ ಪಕ್ಷಗಳ ಉನ್ನತ ನಾಯಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಸ್ಪಷ್ಟವಾದ ರಾಜಕೀಯ ಮಾರ್ಗಸೂಚಿಯನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೆಲವು ಭಿನ್ನಾಭಿಪ್ರಾಯಗಳು ಹೊರತಾಗಿಯೂ ಪ್ರತಿಪಕ್ಷಗಳ ಮೈತ್ರಿಯನ್ನು ಕಾಂಗ್ರೆಸ್ ಪಕ್ಷವೇ ಮುನ್ನಡೆಸಲಿದೆ ಎಂಬುದು ಖಾತರಿಯಾದಂತಾಗಿದೆ.

ವರ್ಚ್ಯುಯಲ್ ಮೂಲಕ ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರು.‌

ದೆಹಲಿಯ ಆಡಳಿತರೂಢ ಆಮ್ ಆದ್ಮಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಾಯಕರಿಗೆ ಇಂದಿನ ಈ ಮಹತ್ವದ ಪ್ರತಿಪಕ್ಷಗಳ ಮುಖಂಡರ ಸಭೆಗೆ  ಆಹ್ವಾನ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ದೊಡ್ಡ ಮಟ್ಟದ ಒಗ್ಗಟ್ಟಿನ ಪ್ರದರ್ಶನದ ಹೊರತಾಗಿಯೂ ಪ್ರತಿಪಕ್ಷಗಳ ಪಾಳೆಯದಲ್ಲಿ ಸಂಭಾವ್ಯ ಬಿರುಕುಗಳು ತಪ್ಪಿಲ್ಲ. ಇದುವರೆಗೂ ಎಲ್ಲಾ ವಿರೋಧ ಸಭೆಗಳ ಭಾಗವಾಗಿದ್ದ ಸಮಾಜವಾದಿ ಪಕ್ಷವು ಶುಕ್ರವಾರದ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಆಶಿಸುತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈಗ ಯಾವುದೇ ಪಕ್ಷದೊಂದಿಗೆ ವಿಶೇಷವಾಗಿ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸಲಿ ಸಿದ್ದರಿಲ್ಲ ಎನ್ನಲಾಗಿದೆ. ಈ‌ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಸಮಾಜವಾದಿ ಪಕ್ಷದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

"ಪ್ರತಿಪಕ್ಷಗಳು ತಮ್ಮ ತಮ್ಮಲ್ಲಿರುವ  ಭಿನ್ನಾಭಿಪ್ರಾಯಗಳನ್ನು ಮೀರಿ ವರ್ತಿಸಬೇಕು.‌ ನಮ್ಮೆಲ್ಲರ ಅಂತಿಮ ಗುರಿ 2024ರ ಲೋಕಸಭಾ ಚುನಾವಣೆಯೇ ಆಗಿರಬೇಕು. ಇದಕ್ಕಾಗಿ ನಾವೆಲ್ಲರೂ ಜನ ನಂಬುವ ರೀತಿಯಲ್ಲಿ ಆಡಳಿತ ನಡೆಸುವ ಸರ್ಕಾರವನ್ನು ನೀಡುತ್ತೇವೆ ಎಂಬ ಭರವಸೆ ಬಿತ್ತುವ ಯೋಜನೆಯನ್ನು ಆರಂಭಿಸಬೇಕು. ಸ್ವಾತಂತ್ರ್ಯ ಚಳುವಳಿಯ ಮೌಲ್ಯಗಳು ಮತ್ತು ನಮ್ಮ ಸಂವಿಧಾನದ ತತ್ವಗಳಡಿಯಲ್ಲಿ ಕೆಲಸ ಮಾಡುವ ಭರವಸೆ ಮೂಡಿಸಬೇಕು" ಎಂದು ಸೋನಿಯಾ ಗಾಂಧಿ ಅವರು ಸಭೆಯಲ್ಲಿ ಕರೆ ನೀಡಿದರು ಎನ್ನಲಾಗಿದೆ.

ಇದನ್ನೂ ಓದಿ: Corona Vaccine| 12-17 ವರ್ಷದ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ; ಡ್ರಗ್ ಕಂಟ್ರೋಲ್​ಗೆ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ

ಪ್ರತಿಪಕ್ಷಗಳು ಒಟ್ಟಾಗಿ ಹೋರಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಒತ್ತಿ ಹೇಳಿರುವ ಸೋನಿಯಾ ಗಾಂಧಿ ಅವರು ನಮ್ಮೆಲ್ಲರ ರಾಷ್ಟ್ರದ ಹಿತಾಸಕ್ತಿಗಳು 'ಅವರಿಗಿಂತ' ಮಿಗಿಲಾದುದು ಎಂಬುದನ್ನು ಸಾಬೀತು ಪಡಿಸಬೇಕಾದ ಸಮಯ ಬಂದಿದೆ ಎಂದು ಕೂಡ ಹೇಳಿದ್ದಾರೆ.

ಸೋನಿಯಾ ಗಾಂಧಿ ತಮ್ಮ ಭಾಷಣದ ಸಮಯದಲ್ಲಿ ಪೆಗಾಸಸ್ ಹಗರಣವನ್ನು ಪ್ರಸ್ತಾಪಿಸಿದರೆ, ಆರ್​ಜೆಡಿ ಪಕ್ಷದ ಕೆಲವು ನಾಯಕರು ಮತ್ತು ಜೆಎಂಎಂನ ಹೇಮಂತ್ ಸೊರೆನ್ ಅವರು ಜನರ ಸಮಸ್ಯೆಗಳನ್ನು ಕೇಂದ್ರೀಕರಿಸಬೇಕು ಎಂದು ಒತ್ತಾಯಿಸಿದರು. ರಾಹುಲ್ ಗಾಂಧಿ ಕರೆದಿದ್ದ ಉಪಹಾರ ಕೂಟದಲ್ಲಿ ಹೇಳಲಾದ ಅಂಶವೂ ಇದೇ ಆಗಿದೆ. ಮಮತಾ ಬ್ಯಾನರ್ಜಿ ಅವರು ಎಲ್ಲಾ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಿದರು. ಆದರೆ ಬಿಎಸ್‌ಪಿ, ಬಿಜೆಡಿಯಂತಹ ಪಕ್ಷಗಳು ಬಿಜೆಪಿ ವಿರುದ್ಧ ಮೃದುವಾಗಿ ಪರಿಗಣಿಸಲ್ಪಡುತ್ತವೆ. ಅಂತಹ ವಿರೋಧ ಸಭೆಗಳಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣ: ಯುಪಿ ಪೊಲೀಸರಿಗೆ ಕ್ಲೀನ್​ಚಿಟ್​ ನೀಡಿದ ನ್ಯಾಯಾಂಗ ಆಯೋಗ

ಸಮಾನ ಮನಸ್ಕ ವ್ಯಕ್ತಿಗಳನ್ನು ಒಟ್ಟುಗೂಡಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿರುವ ಸಭೆಯಲ್ಲಿ ಭಾಗವಹಿಸಿದ್ದ ಎನ್‌ಸಿಪಿ ವರಿಷ್ಠ ಶರದ್ ಪವಾರ್, "ನಮ್ಮ ದೇಶದ ಪ್ರಸ್ತುತ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಅಗತ್ಯವಾದ ಸಭೆಯನ್ನು ಆಯೋಜಿಸಲು ತೆಗೆದುಕೊಂಡ ಕ್ರಮಗಳನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಭಾರತದ ಪ್ರಸ್ತುತ ಸನ್ನಿವೇಶವು ತುಂಬಾ ಕತ್ತಲೆಯಾಗಿ ಕಾಣುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ಇಂತಹ ಸಭೆಗಳು ಇನ್ನಷ್ಟು ನಡೆಯುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಅವರು ಕರೆದಿದ್ದ ಈ ಸಭೆಯು ಎರಡು ಸ್ಪಷ್ಟ ಸಂದೇಶಗಳನ್ನು ರವಾನಿಸಿದೆ. ಒಂದು ಭೇಟಿಯು 'ಜಿ 23 ನಾಯಕ ಕಪಿಲ್ ಸಿಬಲ್ ಕರೆದ ಔತಣಕೂಟಕ್ಕೆ ಪ್ರತ್ಯುತ್ತರ ಆಗಿತ್ತು. ಆ ಸಭೆಯಲ್ಲಿ ಭಾಗವಹಿಸಿದ್ದ ಹಲವರು ಸೋನಿಯಾ ಗಾಂಧಿ ಅವರ ಕರೆಗೂ ಓಗೊಟ್ಟಿದ್ದರು. ಎರಡನೆಯದಾಗಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ಸನ್ನು ಪ್ರಶ್ನಿಸುವ ಇನ್ನಷ್ಟು ಜನ‌ ನಿಧಾನವಾಗಿ ಕಾಂಗ್ರೆಸ್ ಕಡೆ ವಾಲುತ್ತಿರುವುದು ಗೋಚರವಾದಂತಾಯಿತು.
Published by:MAshok Kumar
First published: