ನವದೆಹಲಿ (ನ. 9): ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಮಾಲಿನ್ಯ ದಿನದಿಂದ ವಿಪರೀತ ಆಗುತ್ತಿದ್ದು, ಇದೇ ವಾಯು ಮಾಲಿನ್ಯದ ಕಾರಣಕ್ಕೆ ವೈದ್ಯರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 'ನೀವು ಮೊದಲು ದೆಹಲಿ ಬಿಟ್ಟು ಹೊರಗಡೆ ಹೋಗಿ, ಇಲ್ಲೇ ಇದ್ದರೆ ಅಪಾಯ ತಪ್ಪಿದ್ದಲ್ಲ' ಎಂಬ ಎಚ್ಚರಿಕೆ ರೂಪದ ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ ದೆಹಲಿಯಿಂದ ಗೋವಾಕ್ಕೆ ಶಿಫ್ಟ್ ಆಗಿದ್ದಾರೆ.
ಸೋನಿಯಾ ಗಾಂಧಿ ಅವರು ಶ್ವಾಸಕೋಶದ ಸಮಸ್ಯೆಯೂ ಸೇರಿದಂತೆ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಾಯು ಮಾಲಿನ್ಯವು ಶ್ವಾಸಕೋಶದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವುದರಿಂದ ವೈದ್ಯರು ಸೋನಿಯಾ ಗಾಂಧಿ ಅವರಿಗೆ ದೆಹಲಿಯಿಂದ ಹೊರಗಡೆ ಹೋಗುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರುತ್ತದೆ. ಅದೇ ರೀತಿ ಈ ವರ್ಷವೂ ವಿಪರೀತವಾಗಿದೆ. ಈ ಸಂದರ್ಭದಲ್ಲಿ ವಾಯು ಮಾಲಿನ್ಯದಿಂದ ದೆಹಲಿಯಲ್ಲಿ ಕೆಮ್ಮು, ಆಸ್ತಮಾಗಳು ಹೆಚ್ಚಾಗುವುದು ಸಾಮಾನ್ಯವಾಗಿದೆ. ಇದರಿಂದ ವ್ಯಕ್ತಿಗಳು ಸಾವನ್ನಪ್ಪಿದ ಘಟನೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ.
ಇದೇ ರೀತಿ ಈ ಬಾರಿ ದೆಹಲಿಯ ವಾಯು ಮಾಲಿನ್ಯದಿಂದ ಸೋನಿಯಾ ಗಾಂಧಿ ಅವರ ಆರೋಗ್ಯದ ಮೇಲೆ ತೀವ್ರ ರೀತಿಯ ದುಷ್ಪರಿಣಾಮವಾಗಿದೆ. ಆಸ್ತಮಾ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ವೈದ್ಯರು ವಾಯು ಮಾಲಿನ್ಯ ನಿಯಂತ್ರಣ ಆಗುವವರೆಗೆ ದೆಹಲಿಯಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವೈದ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ ಅವರು ದೆಹಲಿಯಿಂದ ಹೊರಗಡೆ ಹೋಗಲು ನಿರ್ಧರಿಸಿದ್ದಾರೆ. ಮೊದಲು ಗೋವಾ ಅಥವಾ ಚೆನ್ನೈಗೆ ತೆರಳಬೇಕು ಎಂದುಕೊಂಡಿದ್ದರು. ಅಂತಿಮವಾಗಿ ಗೋವಾಕ್ಕೆ ಶಿಫ್ಟ್ ಆಗಿದ್ದಾರೆ. ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಪುತ್ರ ರಾಹುಲ್ ಗಾಂಧಿ ಕೂಡ ಜೊತೆಗೆ ತೆರಳಿದ್ದಾರೆ.
ಇದನ್ನು ಓದಿ: ಉಲ್ಭಣಿಸಿರುವ ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿ; ಮಾಲಿನ್ಯದಿಂದಾಗಿ ದೆಹಲಿಯಿಂದ ದೂರ ಉಳಿಯುವಂತೆ ವೈದರ ಸೂಚನೆ
ಸೋನಿಯಾ ಗಾಂಧಿ ಅವರನ್ನು ಇದೇ ಜುಲೈ 30ರಂದು ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಸರ್ ಗಂಗಾರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಅವರು ವಿದೇಶದಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 12ರಂದು ಅವರು ನಿಯಮಿತ ವೈದ್ಯಕೀಯ ಪರೀಕ್ಷೆಗಾಗಿ ವಿದೇಶಕ್ಕೆ ತೆರಳಿದ್ದರು. ಆಗ ಅವರೊಂದಿಗೆ ಪುತ್ರ ರಾಹುಲ್ ಗಾಂಧಿ ಕೂಡ ಇದ್ದರು. ಇದರಿಂದಾಗಿ ಸಂಸದರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೋವಿಡ್ ಮಾರ್ಗಸೂಚಿ ಅನ್ವಯ ನಡೆದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ