Opposition meet: ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ನಾಯಕರ ಸಭೆ

ಸೋನಿಯಾ ಗಾಂಧಿ.

ಸೋನಿಯಾ ಗಾಂಧಿ.

ಸೋನಿಯಾ ನೇತೃತ್ವದಲ್ಲಿ 14 ವಿರೋಧ ಪಕ್ಷಗಳ ಉನ್ನತ ನಾಯಕರ ಸಭೆ ವರ್ಚ್ಯುಯಲ್ ಆಗಿ ನಡೆಯಲಿದ್ದು ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ನಾಯಕರು ಸಮಾಲೋಚನೆ ನಡೆಸಲಿದ್ದಾರೆ.

  • Share this:

ನವದೆಹಲಿ, ಆ. 20: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಮೈತ್ರಿಯನ್ನು ಬಲಗೊಳಿಸುವ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಸಂಜೆ 14 ವಿರೋಧ ಪಕ್ಷಗಳ ಉನ್ನತ ನಾಯಕರ ಸಭೆ ಕರೆದಿದ್ದಾರೆ. ಈ ಮಹತ್ವದ ಸಭೆಯು ವರ್ಚ್ಯುಯಲ್ ಆಗಿ ನಡೆಯಲಿದ್ದು ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ನಾಯಕರು ಸಮಾಲೋಚನೆ ನಡೆಸಲಿದ್ದಾರೆ.


ಸಭೆಯಲ್ಲಿ ಭಾಗವಹಿಸುವ ಪ್ರಮುಖ ವಿರೋಧ ಪಕ್ಷದ ನಾಯಕರೆಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ) ಅಧ್ಯಕ್ಷ ಶರದ್ ಪವಾರ್. ಈ ನಡುವೆ ಆಮ್ ಆದ್ಮಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಾಯಕರಿಗೆ ಇಂದಿನ ಈ ಮಹತ್ವದ ಪ್ರತಿಪಕ್ಷಗಳ ಮುಖಂಡರ ಸಭೆಗೆ ಆಹ್ವಾನ ನೀಡಿಲ್ಲ ಎಂಬ ವಿಚಾರ ತಿಳಿದುಬಂದಿದೆ.


ಜಂಟಿ ನಿರ್ಣಯ ಕೈಗೊಳ್ಳುವ ಸಾಧ್ಯತೆ:


ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಇಂದಿನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಜಂಟಿ ನಿರ್ಣಯ ಕೈಗೊಳ್ಳುವ ಅಥವಾ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡದ ವಿಷಯ, ಕೇಂದ್ರ ಸರ್ಕಾರದ ಕೋವಿಡ್ -19 ಲಸಿಕೆ ‌ನಿರ್ವಹಣೆ, ದೇಶದ ಆರ್ಥಿಕ ಸ್ಥಿತಿ ಮತ್ತು ರೈತರ ಬಿಕ್ಕಟ್ಟಿನ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: Gold-Silver Price- ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭ ವಾರ್ತೆ; ಚಿನ್ನ ಬೆಳ್ಳಿ ದರ ಇಳಿಕೆ


ಸಂಸತ್ ಅಧಿವೇಶನದ ನಂತರ ಮತ್ತೆ ಒಗ್ಗಟ್ಟು:


ಇತ್ತೀಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದ ನಂತರ ಪ್ರತಿಪಕ್ಷಗಳ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಸಭೆ ಹೊಂದಿದೆ. ನಾಲ್ಕು ವಾರಗಳ ಅವಧಿಯ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಹೊಸ ಏಕೀಕೃತ ಪ್ರತಿಪಕ್ಷ ಕಂಡಿತು. ರಾಹುಲ್ ಗಾಂಧಿ ಅವರ ಉಪಸ್ಥಿತಿಯು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಿತು.


ಸೋನಿಯಾ ಗಾಂಧಿ ಅವರು ಶುಕ್ರವಾರ ಕರೆದಿದ್ದ ಸಭೆಯನ್ನು ಗಾಂಧಿ ಕುಟುಂಬವು ಪ್ರತಿಪಕ್ಷಗಳ ಪೈಕಿ ಕೇಂದ್ರ ಸ್ಥಾನವನ್ನು ಪುನಃ ಪ್ರತಿಪಾದಿಸಲು ತೆಗೆದುಕೊಂಡ ಕ್ರಮವೆಂದು ಕೂಡ ಹೇಳಲಾಗುತ್ತಿದೆ. "ಜಿ23" ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಆಗಸ್ಟ್ 9ರಂದು ಪ್ರತಿಪಕ್ಷಗಳ ನಾಯಕರಿಗೆ ಔತಣಕೂಟ ಒಂದನ್ನು ಏರ್ಪಡಿಸಿದ್ದರು‌. ಇದರಲ್ಲಿ ಹಲವಾರು ಪ್ರತಿಪಕ್ಷ ನಾಯಕರು ಭಾಗವಹಿಸಿದ್ದರು. ಆಗ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವವರಿಗೆ ಆಹ್ವಾನ ನೀಡಿರಲಿಲ್ಲ ಎಂಬುದನ್ನು ಸ್ಮರಿಸಬಹುದು.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)


ವರದಿ: ಧರಣೀಶ್ ಬೂಕನಕೆರೆ

Published by:Vijayasarthy SN
First published: