ನವ ದೆಹಲಿ (ನವೆಂಬರ್ 20); ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀರ್ಘ ಕಾಲದಿಂದ ಎದೆಯ ಭಾಗದಲ್ಲಿ ಸೋಂಕಿನ ಪ್ರಭಾವವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷ ಈ ಮಾಲಿನ್ಯದಿಂದ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ ಕೆಲವು ದಿನಗಳ ಕಾಲ ದೆಹಲಿಯಿಂದ ಬೇರೆ ಸ್ಥಳಾಂತರಗೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಶುಕ್ರವಾರ ತಿಳಿಸಿವೆ. ಅಂದಾಜಿ ಪ್ರಕಾರ ಸೋನಿಯಾ ಗಾಂಧಿ ಕೆಲ ದಿನಗಳ ಕಾಲ ವಿಶ್ರಾಂತಿಗಾಗಿ ಚೆನ್ನೈ ಅಥವಾ ಗೋವಾಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಸೋನಿಯಾ ಗಾಂಧಿ ದೆಹಲಿಯಿಂದ ಹೊರಗೆ ತೆರಳಲಿದ್ದು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಅವರ ಜೊತೆಗೆ ಇರಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.
ಈ ಹಿಂದೆ ಕಳೆದ ಆಗಸ್ಟ್ ತಿಂಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ, ಅವರ ಎದೆಯ ಭಾಗದಲ್ಲಿನ ಸೋಂಕಿನ ಕುರಿತು ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, ಪ್ರಸ್ತುತ ದೆಹಲಿಯಲ್ಲಿ ಮಾಲಿನ್ಯ ಅಧಿಕವಾಗಿದ್ದು, ಇದೇ ಕಾರಣಕ್ಕೆ ಸೋನಿಯಾ ಗಾಂಧಿ ದೆಹಲಿಯನ್ನು ತೊರೆಯುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ದೆಹಲಿಯ ವಾಯುಮಾಲಿನ್ಯವು ಸೋನಿಯಾ ಗಾಂಧಿ ಅವರ ಆಸ್ತಮಾ ಮತ್ತು ಅವರ ಎದೆಯ ಸ್ಥಿತಿಯನ್ನು ಉಲ್ಬಣಗೊಳಿಸಿದೆ. ಇದೇ ಕಾರಣಕ್ಕೆ ಅವರು ದೆಹಲಿಯಿಂದ ಹೊರ ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಬಿಹಾರದ ಹೀನಾಯ ಸೋಲಿನ ನಂತರ ಕಾಂಗ್ರೆಸ್ ನಾಯಕರು ಆತ್ಮಾವಲೋಕನದ ಮಾತುಗಳನ್ನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯ ನಾಯಕರು ಪಕ್ಷದೊಳಗಿರುವವರಿಂದಲೇ ಪಕ್ಷ ದುರ್ಬಲವಾಗುತ್ತಿದೆ ಎಂದು ದೂಷಿಸುತ್ತಿರುವ ಇದೇ ಸಂದರ್ಭದಲ್ಲಿ ಸೋನಿಯಾ ಗಾಂಧಿ ದೆಹಲಿಯಿಂದ ದೂರವಾಗುತ್ತಿರುವುದು ಉಲ್ಲೇಖಾರ್ಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ