ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವರನ್ನು ನವದೆಹಲಿಯ (New Delhi) ಸರ್ ಗಂಗಾರಾಮ್ (Sir Ganga Ram)ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಜ್ವರದಿಂದ ಬಳಲುತ್ತಿದ್ದು, ಕಾಂಗ್ರೆಸ್ ನಾಯಕಿಯನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಈಗಾಗಲೇ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಗುರುವಾರ ಸೋನಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೆಸ್ಟ್ ಮೆಡಿಸನ್ನ (Chest Medicine) ಹಿರಿಯ ಸಲಹೆಗಾರ ಡಾ. ಅರುಪ್ ಬಸು ಮತ್ತು ಅವರ ತಂಡದ ಆರೈಕೆಯಲ್ಲಿದ್ದಾರೆ.
ಕಳೆದ ವರ್ಷ ಕೋವಿಡ್ - 19 ಸೋಂಕಿಗೊಳಗಾದ ಬಳಿಕ ಕಾಂಗ್ರೆಸ್ ಮಾಜಿ ಅಧಿನಾಯಕಿ ಅನಾರೋಗ್ಯಕ್ಕೊಳಗಾಗುತ್ತಲೇ ಇದ್ದಾರೆ. ಕೆಲ ತಿಂಗಳ ಹಿಂದಷ್ಟೇ ತಪಾಸಣೆಗೆಂದು ಅವರು ವಿದೇಶಕ್ಕೆ ತೆರಳಿದ್ದರು. ಆದರೂ, ಭಾರತ್ ಜೋಡೋ ಯಾತ್ರೆ ವೇಳೆ ಕರ್ನಾಟಕಕ್ಕೆ ಆಗಮಿಸಿ ಪುತ್ರ ರಾಹುಲ್ಗೆ ಸಾಥ್ ನೀಡಿದ್ದರು. ಇದಕ್ಕೂ ಮುನ್ನ ಜನವರಿಯಲ್ಲೂ ಸೋನಿಯಾ ಗಾಂಧಿ ಅವರ ಆರೋಗ್ಯ ಹದಗೆಟ್ಟು, ಇದೇ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ವೈರಾಣು ಸೋಂಕಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಈ ವೇಳೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ತಾಯಿ ಜೊತೆಗಿದ್ದರು.
ವಿದೇಶದಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವಾಗಲೇ ಸೋನಿಯಾ ಗಾಂಧಿ ಆರೋಗ್ಯ ಹದಗೆಟ್ಟಿದೆ. ರಾಹುಲ್ ಉಪನ್ಯಾಸ ನೀಡಲು ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದಾರೆ. ಅಲ್ಲಿ ಮಾತನಾಡುವ ವೇಳೆ ಭಾರತೀಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾವು ನಿರಂತರ ಒತ್ತಡವನ್ನು ಅನುಭವಿಸುತ್ತಿದ್ದೇವೆ. ಪ್ರತಿಪಕ್ಷ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ನನ್ನ ವಿರುದ್ಧವೂ ಹಲವು ಪ್ರಕರಣಗಳು ದಾಖಲಾಗಿವೆ. ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದರೊಂದಿಗೆ ಪ್ರತಿಪಕ್ಷಗಳ ನಾಯಕರ ಫೋನ್ಗಳಲ್ಲಿ ಪೆಗಾಸಸ್ ಅಳವಡಿಸಲಾಗಿದೆ ಎಂದು ಆರೋಪಿಸಿದ್ದರು.
ಮಾಧ್ಯಮ ಮತ್ತು ನ್ಯಾಯಾಂಗವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ
ಇದಲ್ಲದೇ ಮಾಧ್ಯಮಗಳು, ನ್ಯಾಯಾಂಗವನ್ನು ಕೇಂದ್ರ ಸರ್ಕಾರ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಯಾರೇ ಟೀಕಿಸಿದರೂ ಬೆದರಿಕೆ ಹಾಕಲಾಗುತ್ತದೆ. ನಾನು ಕಾಶ್ಮೀರಕ್ಕೆ ಹೋಗುವಾಗ ಭದ್ರತಾ ಸಿಬ್ಬಂದಿ ನನ್ನ ಬಳಿಗೆ ಬಂದು, ನೀವು ಕಾಶ್ಮೀರದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ, ಇಲ್ಲಿ ನಿಮ್ಮ ಮೇಲೆ ಗ್ರೆನೇಡ್‌ಗಳನ್ನು ಎಸೆಯಬಹುದು ಎಂದು ಬೆದರಿಸುವ ಪ್ರಯತ್ನ ಮಾಡಿದ್ದರು. ಆದರೆ ನನ್ನ ಪಕ್ಷದ ಜನರೊಂದಿಗೆ ಮಾತನಾಡಬೇಕು, ನಾನು ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದೆ ಎಂದು ಸ್ಮರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ