ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದು 3,000 ಟನ್ ಅಲ್ಲ ಕೇವಲ 160 ಕೆ.ಜಿ. ಚಿನ್ನ!
ಉತ್ತರ ಪ್ರದೇಶದ ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ (ಜಿಎಸ್ಐ) ಹೇಳಿರುವುದಾಗಿ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಆದೆರೆ, ಇದು ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಲಕ್ನೋ (ಫೆ.23): ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು ಎನ್ನುವ ವಿಚಾರ ಭಾರೀ ಸುದ್ದಿಯಾಗಿತ್ತು. ಆದರೆ, ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಈ ವಿಚಾರ ಸುಳ್ಳು ಎಂದು ಹೇಳಿದೆ. ಅಸಲಿಗೆ ಅಲ್ಲಿ ಇರುವುದು 3,000 ಟನ್ ಚಿನ್ನ ಅಲ್ಲ, 160 ಕೆಜಿ ಚಿನ್ನ ಎಂದು ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶದ ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ (ಜಿಎಸ್ಐ) ಹೇಳಿರುವುದಾಗಿ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಅಷ್ಟೇ ಅಲ್ಲ. ಈ ಜಾಗದಲ್ಲಿ ಸರ್ಕಾರ ಶೀಘ್ರವೇ ಗಣಿಗಾರಿಕೆ ಆರಂಭಿಸಲಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಎಸ್ಐ ನಿರ್ದೇಶಕ ಎಂ.ಶ್ರೀಧರ, “ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ನಾವು ಆ ರೀತಿಯ ಮಾಹಿತಿಯನ್ನು ನೀಡೇ ಇಲ್ಲ. ಉತ್ತರ ಪ್ರದೇಶದ ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ 52,806 ಟನ್ ಅದಿರು ಇದೆ. ಇದನ್ನು ಸಂಸ್ಕರಣೆ ಮಾಡಿದರೆ ಪ್ರತಿ ಟನ್ಗೆ 3.03 ಗ್ರಾಂ ಚಿನ್ನ ಸಿಗಲಿದೆ. ಅಂದರೆ ಒಟ್ಟು 160 ಕೆಜಿ ಚಿನ್ನ ನಮಗೆ ಲಭ್ಯವಾಗಲಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ.