ಜಮ್ಮು-ಕಾಶ್ಮೀರ: ನಾವು ನಗರ ಪ್ರದೇಶಗಳಲ್ಲಿ ಇದ್ದುಕೊಂಡು ಇಲ್ಲಿನ ಚಳಿಯನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಬೆಡ್ ಶೀಟ್, ಜರ್ಕಿನ್, ಸ್ವೆಟರ್ ಹೀಗೆ ಮೈತುಂಬಾ ಬೆಚ್ಚಗಿನ ಧಿರಿಸುಗಳನ್ನು ಧರಿಸಿಕೊಳ್ಳುತ್ತೇವೆ. ಆದರೆ ನಮ್ಮ ದೇಶದ ಗಡಿ (Border) ಕಾಯುವ ಸೈನಿಕರ (Soldier) ಪರಿಸ್ಥಿತಿ ಹೇಗಿದೆ. ಅವರು ಬಿಸಿಲು, ಮಳೆ ಹಾಗೂ ಚಳಿ ಏನೇ ಆದರೂ ಅಲ್ಲಿ ಇರಲೇಬೇಕು. ದೇಶಕ್ಕೋಸ್ಕರ ತಮ್ಮ ಜೀವವನ್ನೇ ಪಣವಾಗಿಟ್ಟುಕೊಂಡು ದುಡಿಯುತ್ತಿರುತ್ತಾರೆ. ಆದರೆ ಆಗಾಗ್ಗೆ ಸ್ಥಳೀಯ ಜನರಿಗೆ ತೊಂದರೆಯಾದರೆ ತಾವೇ ಮುಂದು ನಿಂತು ಸ್ಪಂದಿಸುತ್ತಾರೆ. ಇಂತಹ ಘಟನೆ ಕಾಶ್ಮೀರ (Kashmir) ಕಣಿವೆಯ ಕುಪ್ವಾರ (Kupwara ) ಜಿಲ್ಲೆಯಲ್ಲಿ ನಡೆದಿದ್ದು, ಹಿಮಪಾತದ(Snowfall) ನಡುವೆ ಗರ್ಭಿಣಿಯೊಬ್ಬರನ್ನು(Pregnant) ನಮ್ಮ ಸೈನಿಕರು ಭುಜದ ಮೇಲೆ ಹೊತ್ತು ಐದು ಕಿಲೋ ಮೀಟರ್ ನಡೆದು ಆಸ್ಪತ್ರೆಗೆ ಸೇರಿಸಿ ತಾಯಿ ಮತ್ತು ಮಗುವನ್ನು ಜೀವ ಉಳಿಸಿದ್ದಾರೆ.
ಸೇನಾ ಅಧಿಕಾರಿಗಳ ಪ್ರಕಾರ, ಕಲರೂಸ್ ಬ್ಲಾಕ್‌ನ ಬಡಖೇತ್ ಗ್ರಾಮದಿಂದ ಬೆಳಿಗ್ಗೆ 11 ಗಂಟೆ ಸುಮಾರಿಗೆ ತುರ್ತುಕರೆಯೊಂದು ಬಂದಿದ್ದು, ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಶುರುವಾಗಿದೆ, ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ ಎಂದು ಕುಟುಂಬ ಸದಸ್ಯರು ಸೇನೆಗೆ ಮನವಿ ಮಾಡಿಕೊಂಡಿದ್ದಾರೆ.
ಭುಜದ ಮೇಲೆ ಹೊತ್ತು ಸಾಗಿದ ಯೋಧರು
ಮಹಿಳೆಯ ಗಂಭೀರ ಪರಿಸ್ಥಿತಿಯನ್ನು ನೋಡಿದ ಸೇನೆಯ ರಕ್ಷಣಾ ಮತ್ತು ವೈದ್ಯಕೀಯ ತಂಡ ಮಹಿಳೆಯನ್ನುಆಂಬ್ಯುಲೆನ್ಸ್ ಇರುವ ಸ್ಥಳಕ್ಕೆ ತಮ್ಮ ಭುಜದ ಮೇಲೆ ಹೊತ್ತು ಹೋಗಲು ನಿರ್ಧರಿಸಿದೆ. ಹೀಗೆ ಸುಮಾರು 5 ಕಿಲೋಮೀಟರ್ ವರೆಗೆ ಹಿಮಪಾತದ ನಡುವೆ ಹೊತ್ತುಕೊಂಡೆ ಸಾಗಿಸಿದ್ದಾರೆ. ಸೈನಿಕರು ಬರುವ ವೇಳೆ ಸುಮೋ ಸೇತುವೆಯ ಆಂಬ್ಯುಲೆನ್ಸ್ ಬಂದು ನಿಂತಿದ್ದು, ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಂಬ್ಯುಲೆನ್ಸ್ ನಲ್ಲಿ ಮಹಿಳೆ ಸುರಕ್ಷಿತವಾಗಿ ಕಲರೂಸ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿಲಾಗಿದೆ. ಸ್ವಲ್ಪ ಸಮಯದಲ್ಲೇ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಕುಟುಂಬ ಮತ್ತು ವೈದ್ಯರು ಸೂಕ್ತ ಸಂದರ್ಭದಲ್ಲಿ ನೆರವಿಗೆ ಬಂದ ಸೇನಾ ಯೋಧರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
;
ಯೋಧರ ಕಾರ್ಯಕ್ಕೆ ಕಣ್ಣೀರಟ್ಟ ಕುಟುಂಬ
ಹಿಮಪಾತದ ನಡುವೆ 5 ಕಿ.ಮೀ.ವರೆಗೆ ಗರ್ಭಿಣಿಯನ್ನು ಹೊತ್ತು ಸಾಗಿಸಿದ ಸೈನಿಕರ ಬದ್ಧತೆ ಮತ್ತು ಉತ್ಸಾಹ ಕಂಡು ಕುಟುಂಬ ಕಣ್ಣೀರಿಟ್ಟಿದೆ. ಒಂದು ವೇಳೆ ಗರ್ಭಿಣಿಯನ್ನು ಸ್ಥಳಾಂತರಿಸುವಲ್ಲಿ ವಿಳಂಬವಾಗಿದ್ದರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುತ್ತಿತ್ತು. ಆದರೆ ಯೋಧರ ನಿಸ್ವಾರ್ಥ ಕಾರ್ಯದಿಂದ ಎರಡು ಜೀವ ಉಳಿದುಕೊಂಡಿವೆ.
ಸ್ಥಳೀಯರಿಂದ ಮೆಚ್ಚುಗೆ
ಸೂಕ್ತ ಸಮಯದಲ್ಲಿ ಕಷ್ಟಕ್ಕೆ ಸ್ಪಂಧಿಸಿದ ಸೇನೆಯ ಯೋಧರು ಸ್ಥಳೀಯರು, ಕುಟುಂಬಸ್ಥರು ಹಾಗೂ ವೈದ್ಯರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಧಾರಾಕಾರ ಹಿಮಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಬಂದ್ ಆಗಿತ್ತು. ರಸ್ತೆಗಳು ಕಿರಿದಾಗಿವೆ, ಕೆಲವು ಕಡೆ ಕುಸಿಯುವ ಅಪಾಯಕಾರಿಯಾಗಿರುವುದರಿಂದ ಯಾವುದೇ ಖಾಸಗಿ ವಾಹನಗಳು ಮನೆಗೆ ಬರುವುದಿಲ್ಲ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದ ನಮಗೆ ಸೇನೆ ನೆರವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸೂಕ್ತ ರಸ್ತೆಗಳಿರುವುದಿಲ್ಲ
ಹಿಮಪಾತದಿಂದ ಈ ಭಾಗದಲ್ಲಿ ರಸ್ತೆಗಳೇ ಮುಚ್ಚಿ ಹೋಗಿರುತ್ತವೆ. ಯಾವುದು ರಸ್ತೆ, ಯಾವುದು ಗುಡ್ಡ ಬೆಟ್ಟ, ಯಾವುದು ಹೊಲಗದ್ದೆ ಎನ್ನುವುದೇ ಗೊತ್ತಾಗುವುದಿಲ್ಲ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವುದೆಲ್ಲಾ ಬರೀ ಹಿಮ. ಇನ್ನು, ಆರೋಗ್ಯ ಕೈಕೊಟ್ಟರೆ ಆಸ್ಪತ್ರೆಗೆ ಹೋಗುವುದಕ್ಕೆ ಇಲ್ಲಿನ ಜನರಿಗೆ ಅಸಾಧ್ಯವಾಗಿದೆ. ಸಾಕಷ್ಟು ಬಾರಿ ಇಲ್ಲಿನ ಜನರು ಆಸ್ಪತ್ರೆಗೆ ಹೋಗಲಾರದೆ ಹಳ್ಳಿಯ ಜನ ಪರದಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಭಾರತೀಯ ಸೈನಿಕರು ನೆರವಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ