ಪ್ರಾಣದ ಹಂಗು ತೊರೆದು ಮುಳುಗುತ್ತಿದ್ದ ಸೇತುವೆ ಮೇಲೆ ಓಡಿ ಮಗುವನ್ನು ರಕ್ಷಿಸಿದ ಸೈನಿಕ, ಈಗ ಕೇರಳದ ಹೀರೋ!


Updated:August 12, 2018, 2:26 PM IST
ಪ್ರಾಣದ ಹಂಗು ತೊರೆದು ಮುಳುಗುತ್ತಿದ್ದ ಸೇತುವೆ ಮೇಲೆ ಓಡಿ ಮಗುವನ್ನು ರಕ್ಷಿಸಿದ ಸೈನಿಕ, ಈಗ ಕೇರಳದ ಹೀರೋ!

Updated: August 12, 2018, 2:26 PM IST

ನ್ಯೂಸ್ 18 ಕನ್ನಡ


ಇಡುಕ್ಕಿ: (ಆ.12): ಕೇರಳದ ಇಡುಕ್ಕಿ ಜಿಲ್ಲೆಯ ಚಿರುತೋಣಿ ಜಲಾಶಯದಿಂದ ಐದು ಗೇಟ್ಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರನ್ನು ಶುಕ್ರವಾರ ಸಂಜೆ ಹೊರಬಿಡಲಾಗಿತ್ತು. ಡ್ಯಾಂನಿಂದ ಕೆಲವೇ ಮೀಟರ್ ದೂರದಲ್ಲಿದ್ದ ಚಿರುತೋಣಿ ಸೇತುವೆ ಇನ್ನೇನು ಮುಳುಗುವುದರಲ್ಲಿತ್ತು. ಆ ಕ್ಷಣದಲ್ಲಿ ಸೇತುವೆ ಮೇಲೆ ವ್ಯಕ್ತಿಯೊಬ್ಬ ಮಗುವನ್ನು ಎದೆಗವುಚಿಕೊಂಡು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನ್ಯೂಸ್ 18 ನೆಟ್ವರ್ಕ್ ನ ಕ್ಯಾಮರಾಮನ್ ಈ ದೃಶ್ಯವನ್ನು ಸೆರೆಹಿಡಿದಿದ್ದು, ಇದೀಗ ಆ ದೃಶ್ಯ ಕೇರಳ ಜನರ ಮನಗೆದ್ದಿದೆ.


ಸೇತುವೆಯ ಒಂದು ಬದಿಯಲ್ಲಿ ಸಿಲುಕಿದ್ದ ತಂದೆ, ಅನಾರೋಗ್ಯಕ್ಕೆ ಒಳಗಾಗಿದ್ದ ತನ್ನ ಮಗುವನ್ನು ಆಸ್ಪತ್ರೆಗೆ ಸೇರಿಸಲು ಸೇತುವೆ ದಾಟಿ ಬರಬೇಕಿತ್ತು. ಆದರೆ, ಜಲಾಶಯದಿಂದ ಐದು ಗೇಟ್ಗಳ ಮೂಲಕ ನೀರನ್ನು ಹೊರಬಿಟ್ಟ ಕಾರಣ, ರೌದ್ರಾವತಾರದಲ್ಲಿ ನುಗ್ಗುತ್ತಿದ್ದ ನೀರನ್ನು ಕಂಡು ಭಯಭೀತರಾಗಿ ನಿಂತುಬಿಟ್ಟಿದ್ದರು.  ಇನ್ನೇನು ಕೆಲವೇ ಕ್ಷಣಗಳಲ್ಲಿ ಸೇತುವೆ ನೀರಿನಿಂದ ಮುಳುಗುವುದರಲ್ಲಿತ್ತು. ಅಷ್ಟರಲ್ಲಿ ಸೇತುವೆಯ ಒಂದು ಬದಿಯಿಂದ ಮುನ್ನುಗ್ದಿದ ಯುವಕನೊಬ್ಬ, ಅವರು ನಿಂತಿದ್ದ ಸ್ಥಳಕ್ಕೆ ಓಡಿ ಹೋಗಿ ಮಗುವನ್ನು ಎತ್ತಿಕೊಂಡು, ಮತ್ತದೇ ವೇಗದಲ್ಲಿ ಓಡಲು ಆರಂಭಿಸಿದರು. ಅವರು ಸೇತುವೆ ಮಧ್ಯ ಭಾಗಕ್ಕೆ ಬರುವುದರೊಳಗೆ ಸೇತುವೆ ನೀರಿನಲ್ಲಿ ಮುಳುಗಲು ಆರಂಭಿಸಿತು. ಆ ಮಗುವಿನ ತಂದೆಯೂ ಸೇರಿ ಇಬ್ಬರು ಆ ಯುವಕನ ಹಿಂದೆ ಓಡಿಬರುತ್ತಿದ್ದರು. ಮತ್ತೊಂದು ಬದಿಯಲ್ಲಿ ನಿಂತಿದ್ದ ಜನರು ಅವರು ಬೇಗನೇ ಬರುವಂತೆ ಕೂಗಿ, ಕೂಗಿ ಕರೆಯುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಸಿಲುಕದೆ ಅವರು ಸೇತುವೆಯ ಮತ್ತೊಂದು ಬದಿಗೆ ಬಂದು ತಲುಪಿದರು. ಅವರು ಬಂದು ತಲುಪಿದ  ಕ್ಷಣಾರ್ಧದಲ್ಲಿಯೇ ಸೇತುವೆ ಸಂಪೂರ್ಣ ಜಲಾವೃತವಾಯಿತು. ಒಂದು ವೇಳೆ ಆ ಮಗುವನ್ನು ಸೇತುವೆಯ ಮತ್ತೊಂದು ಬಳಿಗೆ ಕರೆತಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದಿದ್ದಲ್ಲಿ, ಮಗು ಬದುಕುಳಿಯುವುದು ಅನುಮಾನವಾಗಿತ್ತು.
Loading...


ಹೌದು, ತನ್ನ ಪ್ರಾಣದ ಹಂಗನ್ನು ತೊರೆದು ಈ ಸಾಹಸ ಮೆರೆದ ಯುವಕ ಬೇರೆ ಯಾರೂ ಅಲ್ಲ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ ಡಿ ಆರ್ ಎಫ್) ಅಧಿಕಾರಿ ಕನ್ಹಯ್ಯಾ ಕುಮಾರ್. ಬಿಹಾರ ಮೂಲದವರಾದ ಕನ್ಹಯ್ಯಾ ಕೇರಳ ಪ್ರವಾಹ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ರಾಜ್ಯಕ್ಕೆ ಆಗಮಿಸಿ, ಈಗ ಕೇರಳ ರಾಜ್ಯದ ಮನೆ ಮಾತಾಗಿದ್ದಾರೆ.


“ನಾನು ಸೇತುವೆಯ ಒಂದು ಬದಿಯಲ್ಲಿ ನಿಂತಿದ್ದೆ. ಮತ್ತೊಂದು ಬದಿಯಲ್ಲಿ ಇಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಆದರೆ, ಸೇತುವೆ ಇನ್ನೇನು ಮುಳುಗುವುದರಲ್ಲಿತ್ತು. ಇಂತಹ ಹಲವು ರಕ್ಷಣಾ ಕಾರ್ಯಗಳಲ್ಲಿ ಭಾಗಿಯಾಗಿರುವ ನನಗೆ ನದಿಯ ಲಕ್ಷಣಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಒಂದು ದೃಢ ನಿರ್ಧಾರ ಮಾಡಿ, ಓಡಿಹೋಗಿ ಮಗುವನ್ನು ರಕ್ಷಿಸಿದೆ,” ಎಂದು ಕನ್ಹಯ್ಯಾ ಕುಮಾರ್ ತಿಳಿಸಿದ್ದಾರೆ.


ಕನ್ಹಯ್ಯಾ ಕುಮಾರ್ ಅವರ ಸಾಹಸಕ್ಕೆ ಕೇರಳ ರಾಜ್ಯದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸಚಿವ ಜಿ.ಸುಧಾಕರನ್ ಅವರು ಕೂಡ ಸೈನಿಕನ ಸಾಹಸ, ಸಮಯಪ್ರಜ್ಞೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...