Bhopal Lok Sabha Exit Poll 2019: ಕಟ್ಟರ್​ v/s ಮೃದು ಹಿಂದುತ್ವ: ಭೋಪಾಲ್​ನ ಧರ್ಮಯುದ್ಧದಲ್ಲಿ ಯಾರಿಗೆ ಸಿಗಲಿದೆ ಜಯ?

Bhopal Lok Sabha Elections 2019 Exit Poll: ಈ ಬಾರಿಯೂ ಕ್ಷೇತ್ರದ ಮತದಾರರು ಬಿಜೆಪಿಗೆ ಮಣೆ ಹಾಕುವ ಸಾಧ್ಯತೆಯನ್ನು ಚುನಾವಣೋತ್ತರ ಸಮೀಕ್ಷೆಗಳು ನೀಡಿವೆ. ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಸಂಸತ್ತಿಗೆ ಭೋಪಾಲ್​ ಮೂಲಕ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.

Seema.R | news18
Updated:May 19, 2019, 8:40 PM IST
Bhopal Lok Sabha Exit Poll 2019: ಕಟ್ಟರ್​ v/s ಮೃದು ಹಿಂದುತ್ವ: ಭೋಪಾಲ್​ನ ಧರ್ಮಯುದ್ಧದಲ್ಲಿ ಯಾರಿಗೆ ಸಿಗಲಿದೆ ಜಯ?
ದಿಗ್ವಿಜಯ ಸಿಂಗ್​-ಪ್ರಗ್ಯಾ ಠಾಕೂರ್​
Seema.R | news18
Updated: May 19, 2019, 8:40 PM IST
2019ರ ಲೋಕಸಭಾ ಚುನಾವಣೆ ವೇಳೆ ಗಮನಸೆಳೆದ ಪ್ರಮುಖ ಕ್ಷೇತ್ರಗಳಲ್ಲಿ ಭೋಪಾಲ್​ ಕೂಡ ಒಂದು. ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಎದುರು ಮೊದಲಬಾರಿ ಹಿಂದುತ್ವವಾದಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಸ್ಪರ್ಧಿಸುವ ಮೂಲಕ ಕ್ಷೇತ್ರ ದೇಶದ ಗಮನ ಸೆಳೆದಿದ್ದು ಸುಳ್ಳಲ್ಲ. ಸದಾ ವಾದ ವಿವಾದಗಳಿಂದಲೇ ಸುದ್ದಿಯಾಗುವ ನಾಯಕರಿಬ್ಬರು ಪ್ರತಿಸ್ಪರ್ಧಿಗಳಾಗುವ ಮೂಲಕ ಕ್ಷೇತ್ರ ಒಂದು ರೀತಿ ಕುಲುಮೆಯಾಗಿತ್ತು.

ಮಧ್ಯಪ್ರದೇಶದಲ್ಲಿ ಆದಾಗಲೇ ಎರಡು ಬಾರಿ ಸಿಎಂ ಆಗಿ ಅಧಿಕಾರನಿರ್ವಹಿಸಿದ್ದ ದಿಗ್ವಿಜಯ್​ ಸಿಂಗ್​ ಎದುರು ಕಟ್ಟರ್​ ಹಿಂದುತ್ವವಾದಿ ನಾಯಕಿ ಪ್ರಗ್ಯಾ ಠಾಕೂರ್​ಗೆ ಬಿಜೆಪಿ ಟಿಕೆಟ್​ ನೀಡಿತ್ತು. ಈ ಬಾರಿಯ ಚುನಾವಣೆ ಒಂದು ರೀತಿಯಲ್ಲಿ ಪ್ರಗತಿ ಮತ್ತು ಹಿಂದುತ್ವವಾದ ನಡುವಿನ ಚುನಾವಣೆ ಎಂದು ಬಿಂಬಿಸಲಾಗಿದೆ.

ಇದೇ ಮೊದಲಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಆರೋಪವನ್ನು ಎದುರಿಸುತ್ತಿರುವ ಮಲೆಗಾಂವ್​ ಸ್ಪೋಟದ ಆರೋಪಿ ಪ್ರಗ್ಯಾ ಚುನಾವಣೆಗೆ ನಿಂತಿದ್ದಾರೆ. ಬಿಜೆಪಿಯ ಹಾಲಿ ಸಂಸದ ಅಲೋಕ್​ ಸಂಜೆರ್​ ಅವರನ್ನು ಕೈ ಬಿಟ್ಟು ಬಿಜೆಪಿ ಪ್ರಗ್ಯಾರಿಗೆ ಟಿಕೆಟ್​ ನೀಡಿರುವುದು ಹಲವು ಪ್ರಶ್ನೆ ಹುಟ್ಟುಹಾಕಿತು. ಈಗಾಗಲೇ ಹಿಂದೂತ್ವವಾದವನ್ನು ಉಸಿರಾಗಿಸಿಕೊಂಡಿರುವ ಪ್ರಗ್ಯಾರಿಂದ ಯಾವುದೇ ವೆಚ್ಚವಿಲ್ಲದೆ ಚುನಾವಣೆ ಗೆಲ್ಲಬಹುದು ಎಂಬುದು ಕೂಡ ಲೆಕ್ಕಾಚಾರಗಳಲ್ಲಿ ಒಂದು ಎಂದೂ ಬಣ್ಣಿಸಲಾಗಿದೆ. ಈ ಮೂಲಕ ಹಿಂದೂ ಮತ ಕ್ರೋಢೀಕರಣ ಸಾಧ್ಯ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಇನ್ನು ಚುನಾವಣಾ ಪ್ರಚಾರದಲ್ಲಿ ಭೋಪಾಲ್​ ಕ್ಷೇತ್ರದ ಅಭಿವೃದ್ಧಿ, ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡದ ಪ್ರಗ್ಯಾ ವಿವಾದಗಳ ಮೂಲಕವೇ ಹೆಸರು ಪಡೆದರು. ತಮ್ಮನ್ನು ಬಂಧಿಸಿದ್ದ ಹೇಮತ್​​ ಕರ್ಕರೆ ತಮ್ಮ ಶಾಪದಿಂದಲೇ ಮುಂಬೈ ದಾಳಿವೇಳೆ ಸಾವನ್ನಪ್ಪಿದರು ಎಂದು ನಾಲಿಗೆ ಹರಿಬಿಟ್ಟು ದೇಶದ ಜನರ ಆಕ್ರೋಶಕ್ಕೆ ಕಾರಣವಾದರು. ಇದೇ ಹಿನ್ನೆಲೆ ಅವರಿಗೆ ಚುನಾವಣಾ ಆಯೋಗ 72 ಗಂಟೆಗಳ ಕಾಲ ಅವರ ಪ್ರಚಾರಕ್ಕೆ ನಿಷೇಧ ವಿಧಿಸಿತ್ತು. ಬಳಿಕ ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಕ್ಕೆ ನಮಗೆ ಯಾವುದೇ ಪಶ್ಚತಾಪವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಾದರು. ಪ್ರಗ್ಯಾ ಹೇಳಿಕೆಗಳು ಪಕ್ಷಕ್ಕೆ ಮುಳುವಾಗುವುದನ್ನು ಅರಿತ ಸಂಘ ಕೂಡ ಆಕೆ ಪರ ತಾನೇ ಪ್ರಚಾರಕ್ಕೆ ಮುಂದಾಯಿತು.

ನನ್ನ ಸ್ತನ ಕ್ಯಾನ್ಸರ್​ ಗುಣವಾಗಲು ಕಾರಣ ಗೋಮೂತ್ರ. ರಕ್ತದೊತ್ತಡ ತಗ್ಗಿಸಲು ಜನರು ಕೂಡ ಗೋಮೂತ್ರ ಬಳಕೆ ಮಾಡಬೇಕು ಎಂದು ಸಲಹೆ ನೀಡುವ ಮೂಲಕ ಪ್ರಚಾರದಲ್ಲಿ ದೇವಾಲಯ, ಗೋಶಾಲೆಗೆ ಪದೇ ಪದೇ ಭೇಟಿ ನೀಡುವ ಮೂಲಕ ಹಿಂದೂ ಮತ ಸೆಳೆಯಲು ಮುಂದಾದರು.

ಧರ್ಮಯುದ್ಧ:

ಎರಡು ಬಾರಿ ಸಿಎಂ ಆಗಿ ಅಭಿವೃದ್ದಿ ಕಾರ್ಯ ಬೆನ್ನಿಗೆ ಇಟ್ಟುಕೊಂಡಿದ್ದ ದಿಗ್ವಿಜಯ್​ ಸಿಂಗ್​ ಕೂಡ ಮೃದು ಹಿಂದುತ್ವದ ಮೂಲಕ ಮತದಾರರ ಓಲೈಕೆ ಮಾಡಿದ್ದಾರೆ. ಪ್ರಗ್ಯಾರ ಉಗ್ರ ಹಿಂದುತ್ವದ ವಿರುದ್ಧ ಮೃದು ಹಿಂದುತ್ವ ಬಳಸಿದ ಅವರು ಬಿಜೆಪಿ ನಾಯಕರಿಗೆ ಕಡಿಮೆ ಇಲ್ಲದಂತೆ ಟೆಂಪಲ್​ ರನ್​ ನಡೆಸಿದ್ದು, ನೂರಾರು ಸಾಧುಗಳನ್ನು ಭೇಟಿಯಾಗಿದ್ದರು. ಈ ಹಿನ್ನೆಲೆ ಚುನಾವಣೆಯನ್ನು ಅಭ್ಯರ್ಥಿಗಳ ನಡುವಿನ ಧರ್ಮಯುದ್ಧ ಎಂದೇ ಪ್ರಗ್ಯಾ ಕರೆದರು.

Bhopal: Police personnel in civil uniform seen wearing saffron scarves at the roadshow of Computer Baba and Digvijay Singh (Congress candidate from the Lok Sabha seat); a policewoman says "we've been made to wear this". #MadhyaPradesh pic.twitter.com/RN8UUN2oMCಕಂಪ್ಯೂಟರ್​ ಬಾಬಾ ಜೊತೆ ಯಜ್ಞ ನಡೆಸಿ ಗಮನ ಸೆಳೆದರು. ಈ ಯಾಗದ ಲಾಭ ತೆಗೆದುಕೊಳ್ಳಲು ಮುಂದಾದ ಬಿಜೆಪಿ ಇದಕ್ಕೆ ಬಂದೋಬಸ್ತ್​ ನಡೆಸಿದ್ದ ಪೊಲೀಸರಿಗೆ ಕೇಸರಿ ಶಾಲು ಹೊದ್ದುಕೊಳ್ಳುವಂತೆ ತಾಕೀತು ಕೂಡ ಮಾಡಿತ್ತು.

ಕ್ಷೇತ್ರದಲ್ಲಿ 5 ಲಕ್ಷ ಬ್ರಾಹ್ಮಣರು, 4.5 ಲಕ್ಷ ಹಿಂದುಳಿದ ವರ್ಗ, 10 ಲಕ್ಷ ಕ್ಷತ್ರಿಯರಿದ್ದಾರೆ. ಭೋಪಾಲ್​ನ ​8 ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್​ ಶಾಸಕರಿದ್ದರೆ, ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು ಭೋಪಾಲ್​ ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರಿಗಿಂತ ಬಿಜೆಪಿ ನಾಯಕರೇ ಆಯ್ಕೆಯಾಗಿದ್ದು ಹೆಚ್ಚು.

ಈ ಬಾರಿಯೂ ಕ್ಷೇತ್ರದ ಮತದಾರರು ಬಿಜೆಪಿಗೆ ಮಣೆ ಹಾಕುವ ಸಾಧ್ಯತೆಯನ್ನು ಚುನಾವಣೋತ್ತರ ಸಮೀಕ್ಷೆಗಳು ನೀಡಿವೆ. ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಸಂಸತ್ತಿಗೆ ಭೋಪಾಲ್​ ಮೂಲಕ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...