ಪಾರ್ಕಿನ್ಸನ್ (Parkinson) ಮತ್ತು ಆಲ್ಝೈಮರ್ನಂತಹ ನ್ಯೂರೋ ಡಿಜನರೇಟಿವ್ ಕಾಯಿಲೆ (Disease) ವೈದ್ಯಲೋಕಕ್ಕೆ ಸವಾಲಾಗಿರುವ ಕಾಯಿಲೆಗಳು. ನರಮಂಡಲದ ಮೇಲೆ ಪರಿಣಾಮ ಬೀರಿ ದೀರ್ಘಕಾಲಿಕವಾಗಿ ಕ್ಷೀಣಗೊಳ್ಳುವ ಕಾಯಿಲೆಗಳು ಮಾರಣಾಂತಿಕವಾಗಿದ್ದು, ಜೀವವನ್ನೇ ಹಿಂಡುತ್ತಿವೆ. ಈವರೆಗೂ ಪರಿಣಾಮಕಾರಿ ಚಿಕಿತ್ಸೆ ಇಲ್ಲದ ಕಾರಣ, ಹೊಸ ರೀತಿಯ ಚಿಕಿತ್ಸೆ (Treatment) ನೀಡಲು ವೈದ್ಯಲೋಕ ಕೂಡ ಶ್ರಮಿಸುತ್ತಲೇ ಇದೆ.
ಪಾರ್ಕಿನ್ಸನ್ ಮತ್ತು ಆಲ್ಝೈಮರ್‌ಗಳಿಗೆ ಹೊಸ ಚಿಕಿತ್ಸೆ
ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಇವರೆಡೂ ಕಾಯಿಲೆಗಳಿಗೆ ಹೊಸ ಚಿಕಿತ್ಸೆ ಒಂದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಹಾವಿನ ವಿಷ ಬಳಸಿ ಔಷಧ ವಿನ್ಯಾಸ
ಹೌದು, ಕೆಲ ಹಾವಿನ ವಿಷ ನೇರವಾಗಿ ಮನುಷ್ಯನ ದೇಹ ಪ್ರವೇಶಿಸಿದರೆ ಅವರಿಗೆ ಸಾವು ಎಂಬುದು ಕಟ್ಟಿಟ್ಟ ಬುತ್ತಿ. ಆದರೆ ಇದೇ ಹಾವಿನ ವಿಷ ಥ್ರಂಬೋಸಿಸ್, ಸಂಧಿವಾತ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಬಹುದಾಗಿದೆ.
ಇದನ್ನೂ ಓದಿ: ಎಟಿಎಂಗಳಲ್ಲಿ 2000 ರೂಪಾಯಿ ನೋಟ್‌ಗಳು ಯಾಕೆ ಬರುತ್ತಿಲ್ಲ? ಈ ಬಗ್ಗೆ ಫೈನಾನ್ಸ್ ಮಿನಿಸ್ಟರ್ ಹೇಳೋದೇನು?
ಪ್ರಸ್ತುತ ಇದೇ ಅಂಶವನ್ನು ಆಧರಿಸಿ ವಿಜ್ಞಾನಿಗಳ ತಂಡವೊಂದು ವಿಷದಲ್ಲಿನ ಕೆಲ ಅಂಶಗಳನ್ನು ತೆಗೆದು ಪಾರ್ಕಿನ್ಸನ್ ಕಾಯಿಲೆ ಮತ್ತು ಆಲ್ಝೈಮರ್ ಕಾಯಿಲೆಗಳಿಗೆ ಎರಡು ಪೆಪ್ಟೈಡ್‌ಗಳನ್ನು ವಿನ್ಯಾಸಗೊಳಿಸಿದೆ.
ವಿಷದಲ್ಲಿನ ಪ್ರೋಟೀನ್‌ಗಳಿಂದ ಪೆಪ್ಟೈಡ್ ಅಭಿವೃದ್ಧಿ
ಗುವಾಹಟಿಯ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ (IASST) ಯ ಸಂಶೋಧಕರು ಹಾವಿನ ವಿಷದಲ್ಲಿರುವ ವಿಷಕಾರಿಯಲ್ಲದ ಪ್ರೋಟೀನ್‌ಗಳಿಂದ ಪ್ರೇರಿತವಾದ ಎರಡು ಪೆಪ್ಟೈಡ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.
TNP ಮತ್ತು HNP ಎಂಬ ಎರಡು ಪೆಪ್ಟೈಡ್ ಅಭಿವೃದ್ಧಿ
ಪೆಪ್ಟೈಡ್‌ಗಳು ಅಮೈನೋ ಆಮ್ಲಗಳ ಸಣ್ಣ ಸರಪಳಿಗಳಾಗಿದ್ದು, ಬಯೋಮೆಡಿಕಲ್ ಪ್ರಯೋಗಾಲಯಗಳಲ್ಲಿ ಬಳಸಲು ವಾಣಿಜ್ಯಿಕವಾಗಿ ಉತ್ಪಾದಿಸಲಾಗುತ್ತದೆ. ಪಾರ್ಕಿನ್ಸನ್ ಕಾಯಿಲೆ ಮತ್ತು ಆಲ್ಝೈಮರ್ ಕಾಯಿಲೆಗಳ ನಿವಾರಣೆಗೆ ಮುಖರ್ಜಿ ಮತ್ತು ಅವರ ಸಹಯೋಗಿಗಳು ವಿಷದಲ್ಲಿರುವ ವಿಷಕಾರಿಯಲ್ಲದ ಪ್ರೋಟೀನ್‌ಗಳಿಂದ TNP ಮತ್ತು HNP ಎಂಬ ಎರಡು ಪೆಪ್ಟೈಡ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ .
ಕ್ಯಾನ್ಸರ್, ಕೋವಿಡ್-19 ರೋಗ ನಿವಾರಣೆಗೂ ಬಳಕೆ
IASS ನ ನಿರ್ದೇಶಕ ಪ್ರೊ ಆಶಿಸ್ ಕುಮಾರ್ ಮುಖರ್ಜಿ ಮತ್ತು ಅವರ ತಂಡವು ಹಾವಿನ ವಿಷದ ಮೇಲೆ ಕೆಲಸ ಮಾಡಿದ್ದು, ಇದು ವಿವಿಧ ಬಯೋಮೆಡಿಕಲ್ ಅಪ್ಲಿಕೇಶನ್‌ಗಳಿಗಾಗಿ ಡ್ರಗ್ ಮೂಲಮಾದರಿಯ ಒಂದು ದೊಡ್ಡ ಸಂಶೋಧನೆ ಎಂದು ತಿಳಿಸಿದೆ. ಕ್ಯಾನ್ಸರ್, ಕೋವಿಡ್-19 ಅಥವಾ ಹೃದಯರಕ್ತನಾಳದ ಕಾಯಿಲೆಗಳಂತಹ ರೋಗಗಳ ರೋಗ ನಿವಾರಣೆಯಲ್ಲೂ ಈ ಚಿಕಿತ್ಸೆಯನ್ನು ಬಳಸಬಹುದು ಎಂದು ತಂಡವು ಹೇಳಿದೆ.
ಹಾವಿನ ವಿಷದಲ್ಲಿದೆ ನ್ಯೂರೋಜೆನೆಸಿಸ್ ಗುಣಲಕ್ಷಣ
ಹಾವಿನ ವಿಷವು ನ್ಯೂರೋಜೆನೆಸಿಸ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನರ ಕೋಶದಿಂದ ನ್ಯೂರೈಟ್‌ಗಳ ಮೊಳಕೆಯೊಡೆಯುವುದನ್ನು ಪ್ರಚೋದಿಸುತ್ತದೆ. ಪಾರ್ಕಿನ್ಸನ್ ಕಾಯಿಲೆ ಮತ್ತು ಆಲ್ಝೈಮರ್ ಎರಡೂ ಸಹ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳಾಗಿದ್ದರಿಂದ ಹಾವಿನ ವಿಷದ ಪ್ರೋಟೀನ್‌ನಲ್ಲಿರುವ ನ್ಯೂರೋಜೆನೆಸಿಸ್ ಗುಣಲಕ್ಷಣಗಳು ಈ ಸಮಸ್ಯೆಯನ್ನು ಬಗೆಹರಿಸಲು ಪೂರಕವಾಗಿವೆ ಎಂದು ಸಂಶೋಧನ ತಂಡವು ಹೇಳಿದೆ.
ಕಡಿಮೆ ಆಣ್ವಿಕ ತೂಕ, ರಚನಾತ್ಮಕ ಸ್ಥಿರತೆ, ಸಣ್ಣ ಗಾತ್ರ ಮತ್ತು ಪೆಪ್ಟೈಡ್‌ಗಳು ಅಂತರ್ವರ್ಧಕ ನ್ಯೂರೋಟ್ರೋಫಿನ್‌ಗಳನ್ನು ಚಿಕಿತ್ಸಕ ಏಜೆಂಟ್‌ಗಳಾಗಿ ಬಳಸುವ ಮಿತಿಗಳ ಬದಲಾಗಿ ಅವುಗಳನ್ನು ಪ್ರಬಲ ಸಾಧನವನ್ನಾಗಿ ಮಾಡುತ್ತದೆ ಎಂದು ಮುಖರ್ಜಿ ಸಂಶೋಧನೆ ಬಗ್ಗೆ ತಿಳಿಸಿದ್ದಾರೆ. ಈ ಔಷಧದಂತಹ ಪೆಪ್ಟೈಡ್‌ಗಳು ಸಂಪೂರ್ಣವಾಗಿ ಹೊಸ ತಂತ್ರದ ಮೂಲಕ ಮುನ್ನಡೆಯುವ ಮೊದಲು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಪ್ರಗತಿಯನ್ನು ಸಮರ್ಥವಾಗಿ ಕಡಿಮೆ ಮಾಡುತ್ತವೆ.
ಅದರಲ್ಲೂ ರೋಗದ ಪ್ರಾರಂಭದಲ್ಲಿಯೇ ಗೊತ್ತಾದ ಈ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಗುವಾಹಟಿಯ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ತಂಡವು ಹೇಳಿದೆ. ವೈದ್ಯಲೋಕದ ಹೊಸ ಆವಿಷ್ಕಾರಕ್ಕೆ ಎಲ್ಲರೂ ಬೆರಗಾಗಿದ್ದು, ಫಲಿತಾಂಶದ ಬಗ್ಗೆ ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ