ಸೋನಿಯಾ ಗಾಂಧಿ ಎಲ್ಲಿದ್ದಾರೆ?; ಟ್ವಿಟ್ಟರ್​ನಲ್ಲಿ ಟೀಕಿಸಿದ ಕಾಂಗ್ರೆಸ್​ಗೆ ಸ್ಮೃತಿ ಇರಾನಿ ತಿರುಗೇಟು

ಕಾಂಗ್ರೆಸ್​ ಪಕ್ಷದವರಿಗೆ ಅಮೇಥಿ ಬಗ್ಗೆ ಇಷ್ಟೊಂದು ಕಾಳಜಿಯಿದೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ. ಸೋನಿಯಾ ಗಾಂಧಿಯವರು ಎಷ್ಟು ಬಾರಿ ಅವರ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ? ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

Sushma Chakre | news18-kannada
Updated:June 2, 2020, 3:15 PM IST
ಸೋನಿಯಾ ಗಾಂಧಿ ಎಲ್ಲಿದ್ದಾರೆ?; ಟ್ವಿಟ್ಟರ್​ನಲ್ಲಿ ಟೀಕಿಸಿದ ಕಾಂಗ್ರೆಸ್​ಗೆ ಸ್ಮೃತಿ ಇರಾನಿ ತಿರುಗೇಟು
ಕೇಂದ್ರ ಸಚಿವೆ ಸ್ಮೃತಿ ಇರಾನಿ
  • Share this:
ನವದೆಹಲಿ (ಜೂ. 2): ಭಾರತದಲ್ಲಿ ಕಳೆದೊಂದು ತಿಂಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಉತ್ತರ ಪ್ರದೇಶದಲ್ಲೂ ಕೊರೋನಾ ಅಬ್ಬರ ಅಧಿಕವಾಗಿದ್ದು, ಇದರ ಜೊತೆಗೆ ಕಾಂಗ್ರೆಸ್​-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟವೂ ಮುಂದುವರೆದಿದೆ. ಕೊರೋನಾ ಬಿಕ್ಕಟ್ಟು ಹೆಚ್ಚಾಗಿದ್ದರೂ ಉತ್ತರ ಪ್ರದೇಶದ ಅಮೇಥಿಯ ಸಂಸದೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಕ್ಷೇತ್ರದತ್ತ ತಲೆಹಾಕುತ್ತಿಲ್ಲ ಎಂಬ ಪೋಸ್ಟರ್​ಗಳು ಟ್ವಿಟ್ಟರ್​ನಲ್ಲಿ ರಾರಾಜಿಸುತ್ತಿವೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಉತ್ತರ ಪ್ರದೇಶದ ಅಮೇಥಿಯಲ್ಲಿ 148 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 29 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 119 ರೋಗಿಗಳು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ಮಿಸ್ಸಿಂಗ್ ಎಂಬ ಪೋಸ್ಟರ್​ಗಳು ಕಂಡುಬರುತ್ತಿವೆ. 'ಕಳೆದ 1 ವರ್ಷದಿಂದ ನೀವು ಕೇವಲ 2 ದಿನ ಅಮೇಥಿಯಲ್ಲಿದ್ದಿರಿ. ಅದೂ ಕೂಡ ಕೆಲವೇ ಗಂಟೆಗಳ ಕಾಲ ಜನರ ಕೈಗೆ ಸಿಕ್ಕಿದ್ದಿರಿ. ಈಗ ಅಮೇಥಿಯ ಜನರು ಕೊರೋನಾದಿಂದ ಪರದಾಡುತ್ತಿದ್ದಾರೆ. ನಮ್ಮ ಸಂಸದೆಯಾಗಿರುವ ನೀವು ನಾಪತ್ತೆಯಾಗಿದ್ದೀರಿ ಎಂದು ಹೇಳಲು ನಮ್ಮ ಮನಸು ಒಪ್ಪುತ್ತಿಲ್ಲ. ಯಾಕೆಂದರೆ ನೀವು ಅಂತ್ಯಾಕ್ಷರಿ ಆಡುತ್ತಿರುವ ವಿಡಿಯೋವನ್ನು ನಾವು ಟ್ವಿಟ್ಟರ್​ನಲ್ಲಿ ನೋಡಿದ್ದೇವೆ. ಆದರೆ, ಅಮೇಥಿಯ ಸಂಸದೆಯಾಗಿ ನೀವು ನಮ್ಮೊಡನೆ ಇದ್ದು, ಸಾಂತ್ವನ ಹೇಳಬೇಕೆಂದು ನಾವೆಲ್ಲರೂ ಬಯಸುತ್ತಿದ್ದೇವೆ. ಇಂತಹ ಸಂಕಷ್ಟಕರ ಸ್ಥಿತಿಯಲ್ಲೂ ಸ್ಪಂದಿಸದೆ, ದೂರ ಕುಳಿತಿರುವ ನಿಮ್ಮ ಮನಸಿನಲ್ಲಿ ಅಮೇಥಿಯ ಬಗ್ಗೆ ಯಾವ ಭಾವನೆಯಿದೆ ಎಂದು ನಮಗೆ ಈಗ ಅರ್ಥವಾಗುತ್ತಿದೆ. ಅಮೇಥಿಯ ಜನ ಸತ್ತ ನಂತರ ಅವರ ಚಟ್ಟಕ್ಕೆ ಹೆಗಲು ಕೊಡಲು ಮಾತ್ರ ನೀವು ಬರುತ್ತೀರಾ? ಅಥವಾ ನಾವೆಲ್ಲರೂ ಬದುಕಿದ್ದಾಗಲೇ ಬಂದು ಕಾಣುತ್ತೀರಾ?' ಎಂದು ಕೆಲವರು ಟ್ವಿಟ್ಟರ್​ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊನೆಗೂ ಸಿಕ್ಕಿದ ಬೆಳಗಾವಿ ಉಸ್ತುವಾರಿ; ಸಚಿವ ಕೆ.ಗೋಪಾಲಯ್ಯಗೆ ಹಾಸನ ಜವಾಬ್ದಾರಿ

ಈ ಟ್ವೀಟ್​ ಕಾಂಗ್ರೆಸ್ ಪಕ್ಷದವರ ಕಣ್ಣಿಗೆ ಬಿದ್ದಿದ್ದು, ಸಚಿವೆ ಸ್ಮೃತಿ ಇರಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅಮೇಥಿಯ ಕಡೆ ತಲೆಹಾಕದ ಸ್ಮೃತಿ ಇರಾನಿ ಬಗ್ಗೆ ಆಲ್​ ಇಂಡಿಯಾ ಮಹಿಳಾ ಕಾಂಗ್ರೆಸ್​ ಟ್ವೀಟ್ ಮಾಡಿ, ಸ್ಮೃತಿ ಇರಾನಿ ಮಿಸ್ಸಿಂಗ್ ಎಂಬ ಪೋಸ್ಟರ್​ಗಳನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದೆ.


ಕಾಂಗ್ರೆಸ್​ನ ಟೀಕೆಗೆ ಅಷ್ಟೇ ಖಡಕ್ ಆಗಿ ಟ್ವಿಟ್ಟರ್​ನಲ್ಲಿ ಉತ್ತರಿಸಿರುವ ಸ್ಮೃತಿ ಇರಾನಿ, 'ಕಾಂಗ್ರೆಸ್​ ಪಕ್ಷದವರಿಗೆ ಅಮೇಥಿ ಬಗ್ಗೆ ಇಷ್ಟೊಂದು ಕಾಳಜಿಯಿದೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ. ಈಗ ಅಮೇಥಿಯನ್ನು ಬದಿಗಿಟ್ಟು ಉತ್ತರ ಪ್ರದೇಶ ರಾಜ್ಯದ ಬಗ್ಗೆ ಮಾತನಾಡೋಣ. ನನ್ನ ಬಳಿ ನನ್ನ 8 ತಿಂಗಳ, 14 ದಿನಗಳ ಸಂಪೂರ್ಣ ದಾಖಲೆಯಿದೆ. ನಿಮ್ಮ ಪಕ್ಷದ ಸೋನಿಯಾ ಗಾಂಧಿಯವರು ಎಷ್ಟು ಬಾರಿ ಅವರ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ.'ನಾನು ಅಮೇಥಿಯ ಜಿಲ್ಲಾಧಿಕಾರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾಯ್​ಬರೇಲಿಯ ಎಲ್ಲ ಅರ್ಹ ಜನರೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ರಾಯ್​ಬರೇಲಿಯ ಸಂಸದೆಯಾಗಿ ಸೋನಿಯಾ ಗಾಂಧಿ ತಮ್ಮ ಕ್ಷೇತ್ರದ ಜನರಿಗೆ ಏನು ಮಾಡಿದ್ದಾರೆ? ಇಲ್ಲಿಯವರೆಗೂ 22,150 ಜನರು ಬಸ್​ನಲ್ಲಿ, 8,322 ಜನರು ರೈಲಿನಲ್ಲಿ ಅಮೇಥಿಯನ್ನು ಸೇರಿಕೊಂಡಿದ್ದಾರೆ. ಆ ಎಲ್ಲ ಕುಟುಂಬದವರ ಹೆಸರನ್ನು ಕೂಡ ನಾನು ಹೇಳಬಲ್ಲೆ. ಅದೇರೀತಿ ಸೋನಿಯಾ ಗಾಂಧಿ ತಮ್ಮ ರಾಯ್​ಬರೇಲಿ ಕ್ಷೇತ್ರದಲ್ಲಿ ಮಾಡಿದ್ದಾರಾ? ಅಥವಾ ಮಾಡಬಲ್ಲರಾ?' ಎಂದು ಟ್ವಿಟ್ಟರ್​ನಲ್ಲಿ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
First published: June 2, 2020, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading