ರಾಹುಲ್, ಪ್ರಿಯಾಂಕಾ, ಮೋದಿ, ಅಮೇಥಿ ಬಗ್ಗೆ ಸ್ಮೃತಿ ಇರಾನಿ ಏನು ಹೇಳ್ತಾರೆ? ಇಲ್ಲಿದೆ Exclusive ಸಂದರ್ಶನದ ಹೈಲೈಟ್ಸ್

ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ತಾನು ಗೆಲ್ಲಲು ಹೇಗೆ ಸಾಧ್ಯವಾಯಿತು ಎಂಬುದು ಸೇರಿದಂತೆ ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ಸ್ಮೃತಿ ಇರಾನಿ ಮಾತನಾಡಿದ್ದಾರೆ.

Vijayasarthy SN | news18
Updated:May 25, 2019, 9:58 PM IST
ರಾಹುಲ್, ಪ್ರಿಯಾಂಕಾ, ಮೋದಿ, ಅಮೇಥಿ ಬಗ್ಗೆ ಸ್ಮೃತಿ ಇರಾನಿ ಏನು ಹೇಳ್ತಾರೆ? ಇಲ್ಲಿದೆ Exclusive ಸಂದರ್ಶನದ ಹೈಲೈಟ್ಸ್
ಕೇಂದ್ರ ಸಚಿವೆ ಸ್ಮೃತಿ ಇರಾನಿ
  • News18
  • Last Updated: May 25, 2019, 9:58 PM IST
  • Share this:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರಗಳಲ್ಲಿ ಅಮೇಥಿ ಕೂಡ ಒಂದು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸುವ ಮೂಲಕ ಸ್ಮೃತಿ ಇರಾನಿ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. 2014ರ ಚುನಾವಣೆಯಲ್ಲೇ ಕಾಂಗ್ರೆಸ್ ಭದ್ರಕೋಟೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಸ್ಮೃತಿ ಇರಾನಿ ಈ ಬಾರಿ ಗೆದ್ದದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಐಎನ್​ಟಿವಿಯ ಉಪ ಕಾರ್ಯವಾಹಕ ಸಂಪಾದಕ ಆನಂದ್ ನರಸಿಂಹನ್ ಅವರು ಸ್ಮೃತಿ ಇರಾನಿ ಅವರೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಸ್ಮೃತಿ ಇರಾನಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಕೆಲ ಭಾಗವನ್ನು ಇಲ್ಲಿ ನೀಡಿದ್ದೇವೆ:

ಪ್ರಶ್ನೆ: ನೀವು ಒಬ್ಬ ವ್ಯಕ್ತಿಯಾಗಿ, ಒಬ್ಬ ಮಹಿಳೆಯಾಗಿ ಹಾಗೂ ಒಬ್ಬ ತಾಯಿಯಾಗಿ ತ್ಯಾಗ ಮಾಡಿದಿರಿ. ನಿಮ್ಮ ಮಕ್ಕಳು ಪರೀಕ್ಷೆ ಬರೆದು ತೇರ್ಗಡೆಯಾಗುವಾಗ ನೀವು ಚುನಾವಣಾ ಪ್ರಚಾರದಲ್ಲಿದ್ದಿರಿ. ನಿಮ್ಮ ಮಕ್ಕಳ ಸಂತೋಷ ಹಂಚಿಕೊಳ್ಳಬೇಕಿದ್ದ ನೀವು ಯಾವುದೋ ಅಂಶ ಸಾಬೀತು ಮಾಡಲು ಕೆಲಸ ಮಾಡುತ್ತಿದ್ದಿರಿ.
ಸ್ಮೃತಿ ಇರಾನಿ: ನಾನು ಯಾವುದೋ ಅಂಶ ಸಾಬೀತು ಮಾಡುತ್ತಿರಲಿಲ್ಲ. ಬದಲಾಗಿ ಹೊಣೆಗಾರಿಕೆ ನಿಭಾಯಿಸುತ್ತಿದ್ದೆ. ನೀವು ಏನನ್ನೋ ಸಾಬೀತು ಮಾಡಲು ಹೊರಟರೆ ನಿಮ್ಮ ಗಮನ ಸಡಿಲಗೊಳ್ಳುವ ಸಾಧ್ಯತೆ ಇರುತ್ತದೆ. ನೀವು ಏನು ಮಾಡಬೇಕೆಂದಿದ್ದೀರೋ ಅದನ್ನು ಮುತುವರ್ಜಿಯಿಂದ ಮಾಡಲು ನೀವು ಗಮನ ಕೊಡಬೇಕು. ನನ್ನ ಮಟ್ಟಿಗೆ ಹೇಳುವುದಾದರೆ ಅದು 2014ರಲ್ಲಿ ನಾನು ಕೊಟ್ಟ ಭರವಸೆಯಾಗಿತ್ತು. ಬಿಜೆಪಿಯಲ್ಲಿ ಯಾವ ಸೀಟಿಗೆ ಯಾವ ಅಭ್ಯರ್ಥಿ ಹಾಕುತ್ತಾರೆ ಎಂಬುದು ಕೊನೆಯ ಕ್ಷಣದವರೆಗೂ ಗೊತ್ತಿರುವುದಿಲ್ಲ. ಅಂಥ ಸ್ಥಿತಿಯಲ್ಲಿ ನಾನು ಅಮೇಥಿ ಜನರಿಗೆ ನೀಡಿದ ಆಶ್ವಾಸನೆಗಳಿಗೆ ಬದ್ಧಳಾಗಿ ಉಳಿಯುವ ಸವಾಲಿನ ಕೆಲಸವಿತ್ತು. ನನ್ನ ಅದೃಷ್ಟಕ್ಕೆ 2019ರಲ್ಲಿ ನಾನೇ ಅಭ್ಯರ್ಥಿಯಾಗಿ ಆಯ್ಕೆಯಾದೆ.

ಪ್ರಶ್ನೆ: ಬಿಜೆಪಿಯ ಗೆಲುವಿನಲ್ಲಿ ಪಕ್ಷದ ಸಂಘಟನೆಗೆ ಎಷ್ಟು ಅಂಕ ಕೊಡುತ್ತೀರಿ? ಪ್ರಧಾನಮಂತ್ರಿಗೆ ಎಷ್ಟು ಅಂಕ ಕೊಡುತ್ತೀರಿ?
ಸ್ಮೃತಿ ಇರಾನಿ: ಪ್ರಧಾನಿಯಾಗಲೀ, ಸಂಘಟನೆಯಾಗಲೀ ಬಿಜೆಪಿಯ ಒಂದು ಭಾಗ. ಅದನ್ನು ನೀವು ಬೇರ್ಪಡಿಸಲು ಆಗುವುದಿಲ್ಲ. ಪ್ರಧಾನಿ ಬೇರೆಯಲ್ಲ ಸಂಘಟನೆ ಬೇರೆಯಲ್ಲ. ಪ್ರಧಾನಿಯವರೇ ತಮ್ಮ ಬೆಳವಣಿಗೆಗೆ ಸಂಘಟನೆ ಕಾರಣ ಎಂದಿದ್ದಾರೆ. ಈ ಗೆಲುವು ಪ್ರಧಾನಿಯವರ ಸಂಘಟನೆಯದ್ದೂ ಆಗಿದೆ.

ಪ್ರಶ್ನೆ: ರಾಹುಲ್ ಅವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾ? ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾ? ನೀವೇನಂತೀರಿ?
ಸ್ಮೃತಿ ಇರಾನಿ: ಕಾಂಗ್ರೆಸ್ಸನ್ನು ಉಳಿಸುವುದಾಗಲೀ, ಕಾಂಗ್ರೆಸ್ ಅಧ್ಯಕ್ಷರಿಗೆ, ನಾಯಕರಿಗೆ ತಿಳಿಹೇಳುವುದಾಗಲೀ ಬಿಜೆಪಿಯ ಕೆಲಸವಲ್ಲ. ಒಬ್ಬ ಬಿಜೆಪಿ ಸಂಸದೆಯಾಗಿ ನಾನು ಅವರ ವೃತ್ತಿ ಮಾರ್ಗದ ಬಗ್ಗೆ ಸಲಹೆ ಕೊಡಲು ಹೋಗುವುದಿಲ್ಲ.ಪ್ರಶ್ನೆ: ಅಮೇಥಿಯಲ್ಲಿ ಬಿಜೆಪಿಗೆ ಗೆಲ್ಲಲು ಹೇಗೆ ಸಾಧ್ಯವಾಯಿತು? ಆರಂಭದಿಂದ ಕೊನೆಯವರೆಗೆ ನಡೆದ ಪ್ರಕ್ರಿಯೆಯ ವಿವರ ನೀಡಿ.
ಸ್ಮೃತಿ ಇರಾನಿ: ಅದು ಶುರುವಾಗಿದ್ದು 2014ರಲ್ಲಿ. ನೀವು ಪ್ರಧಾನಿ ಅವರು ವಿರಮಿಸಿದ್ದನ್ನ ನೋಡಿದ್ದೀರಾ? ರಾಜಕೀಯ ವಾಸ್ತವಗಳಿಂದ ಮತ್ತು ಜವಾಬ್ದಾರಿಗಳಿಂದ ನೀವು ಪಲಾಯನ ಆಗಲು ಸಾಧ್ಯವಿಲ್ಲ. ಚುನಾವಣೆಗೆ ಕೆಲ ತಿಂಗಳ ಮೊದಲು ನಾನು ಸಂಘಟನೆಯ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿರಲಿಲ್ಲ. 2019 ಪ್ರಾರಂಭವಾಗಿದ್ದೇ 2014ರಲ್ಲಿ.

ಪ್ರಶ್ನೆ: ಪ್ರಧಾನಿ ಅವರ ರಾಜಕೀಯ ಪ್ರಜ್ಞೆ, ಅನುಭವ ಹಾಗೂ ಅದನ್ನು ಅವರು ನಿರ್ವಹಿಸುವ ರೀತಿ ಬಗ್ಗೆ ಏನಾದರೂ ಮಾಹಿತಿ ನೀಡಿ.
ಸ್ಮೃತಿ ಇರಾನಿ: ಚುನಾವಣೆಯ ಫಲಿತಾಂಶವು ನನಗೆ ಹಲವು ಸ್ತರಗಳಲ್ಲಿ ಆಸಕ್ತಿ ಮೂಡಿಸಿದೆ. ಅದರಲ್ಲೂ ಮುಖ್ಯವಾಗಿ 2-3 ವಿಷಯಗಳಿವೆ. ಕಾಂಗ್ರೆಸ್​ನವರು 72 ಸಾವಿರ ರೂಪಾಯಿ ಹಣ ನೀಡುವ ಆಶ್ವಾಸನೆ ನೀಡುವ ಮೂಲಕ ಮತಕೋಟೆಗೆ ಲಗ್ಗೆ ಹಾಕಲು ಯತ್ನಿಸಿದರು. ಆದರೆ, ಸಾಮಾನ್ಯ ಭಾರತೀಯ ಮತದಾರನ ರಾಜಕೀಯ ತಿಳುವಳಿಕೆಯನ್ನು ನಾವು ಶ್ಲಾಘಿಸಲೇಬೇಕು. ಈಗಾಗಲೇ ಆಗಿರುವ ಅಭಿವೃದ್ಧಿ ಹಾಗೂ ವಿಪಕ್ಷಗಳ ಬಣ್ಣಬಣ್ಣದ ಮಾತುಗಳನ್ನ ಅವರು ತುಲನೆ ಮಾಡಿ ನೋಡಿದರು. ಮಹಾಘಟಬಂಧನ್ ಹೆಸರಲ್ಲಿ ಒಂದಾದ ಜನರಿಗೆ ದೇಶದ ಬಗ್ಗೆ ಚಿಂತನೆ ಇರಲಿಲ್ಲ. ಅವರಿಗೆ ಅಧಿಕಾರ ಉಳಿಸಿಕೊಳ್ಳುವುದು ಬೇಕಾಗಿತ್ತು. ಇದು ಭಾರತೀಯ ಮತದಾರನ ಅರಿವಿಗೆ ಬಂದಿದೆ. 2014ರಿಂದಲೇ ಕೆಲಸ ಮಾಡಲು ಆರಂಭಿಸಿದ ಮೋದಿ, ತಾವು ಮಾಡುವ ಪ್ರತಿಯೊಂದು ಕೆಲಸವೂ ಜನಪ್ರಿಯ ಎನಿಸುವುದಿಲ್ಲ. ಕೆಲ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರು. ಜನರು ಪ್ರಧಾನಿ ಅವರ ಪ್ರಾಮಾಣಿಕತೆಯನ್ನು ಒಪ್ಪಿಕೊಂಡು ಅವರಿಗೆ ಮತ ಹಾಕಿದ್ದಾರೆ.

ಪ್ರಶ್ನೆ: ನಿಮ್ಮ ಮೇಲೆ ವ್ಯಕ್ತವಾದ ಅಪಾರ ಟೀಕಾ ಪ್ರಹಾರಗಳಿಗೆ ನೀವು ಹೇಗೆ ಸ್ಪಂದಿಸಿದಿರಿ?
ಸ್ಮೃತಿ ಇರಾನಿ: ಪ್ರಧಾನಿ ಅವರಿಗೆ ಇದು ಸಿದ್ಧಿಸಿದೆ. ಅವರು ಬಹಳ ಗೌರವಯುತವಾಗಿ ಇದನ್ನ ನಿಭಾಯಿಸಬಲ್ಲರು. ಕೆಲವರು ಅವರನ್ನು ಚೋರ್ ಎಂದು ಕರೆದರು. ಅವರನ್ನ ವೈಯಕ್ತಿಕವಾಗಿ ಜರೆದದ್ದಷ್ಟೇ ಅಲ್ಲದೆ, ಅವರ ಕುಟುಂಬ ಹಾಗೂ ಇತರ ಸದಸ್ಯರನ್ನೂ ಟೀಕೆಯ ವ್ಯಾಪ್ತಿಗೆ ತಂದರು. ಅವರು ಕಕ್ಕುತ್ತಿದ್ದ ವಿಷ ಅಪಾಯಕಾರಿಯಾಗಿತ್ತು. ಆದರೆ, ಪ್ರಧಾನಿ ಅವರು ಅದನ್ನೆಲ್ಲಾ ಸ್ವೀಕರಿಸಿದರು. ನಮ್ಮ ನಾಯಕರೇ ಆ ಮಟ್ಟಿಗೆ ಇರಬೇಕಾದರೆ ನಾವು ಇರದೇ ಇರಲು ಹೇಗೆ ಸಾಧ್ಯ?

ಪ್ರಶ್ನೆ: ನೀವು ಅಮೇಥಿಯ ಪ್ರತಿನಿಧಿಯಾಗಿ ಯಾವೆಲ್ಲಾ 2-3 ಸಮಸ್ಯೆಗಳನ್ನ ಕೈಗೆತ್ತಿಕೊಳ್ಳುತ್ತೀರಿ?
ಸ್ಮೃತಿ ಇರಾನಿ: ಅಮೇಥಿಯಲ್ಲಿ ಸಮಸ್ಯೆಯ ಸರಮಾಲೆಯೇ ಇದೆ. ಪ್ರತಿಯೊಂದು ಹಳ್ಳಿಗೂ ಭೇಟಿ ನೀಡುವ ಪ್ರತಿನಿಧಿಯನ್ನು ಅಮೇಥಿಯವರು ಕಾಣುತ್ತಾರೆ. ಆರೋಗ್ಯ, ಶಿಕ್ಷಣ, ರಸ್ತೆ ನಿರ್ಮಾಣ, ಶುದ್ಧ ನೀರು, ನೀರಾವರಿ ಇತ್ಯಾದಿ ವಿಚಾರಗಳಲ್ಲಿ ನಾವು ಮೊದಲಿನಿಂದಲೇ ಪ್ರಾರಂಭ ಮಾಡಬೇಕಾಗುತ್ತದೆ. ಜನರಿಗೆ ಸವಾಲಾಗಿರುವ ಹಲವು ವಿಷಯಗಳಿವೆ. ನಮಗೆ ಸ್ಪಂದಿಸುವ ಪ್ರಧಾನಿ ಮತ್ತು ಆಡಳಿತ ಇರುವುದು ನನ್ನ ಅದೃಷ್ಟ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಗಳಿಗೆ ಈಗ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

ಪ್ರಶ್ನೆ: ಈ ದೇಶದಲ್ಲಿ ವಿಪಕ್ಷಗಳ ಸ್ಥಿತಿ ಹೇಗಿರುತ್ತದೆ?
ಸ್ಮೃತಿ ಇರಾನಿ: ವಿಪಕ್ಷವನ್ನು ಬಲಗೊಳಿಸುವ ಕೆಲಸವನ್ನು ಬಿಜೆಪಿಯಿಂದ ಅಪೇಕ್ಷಿಸುವುದು ಸರಿಯಲ್ಲ. ಮತದಾರರ ಬೆಂಬಲ ಗಳಿಸುವ ಹೊಣೆ ವಿಪಕ್ಷಕ್ಕೆ ಸೇರಿದ್ದು. ವಿಪಕ್ಷದ ಬಗ್ಗೆ ಬಿಜೆಪಿ ಯಾಕೆ ತಲೆ ಕೆಡಿಸಿಕೊಳ್ಳಬೇಕು? ನಾವು ಜನರಿಗೆ ಉತ್ತರದಾಯಿಗಳಾಗಿದ್ದೇವೆ. ತನ್ನ ಜವಾಬ್ದಾರಿಯನ್ನ ಬಿಜೆಪಿ ನಿಭಾಯಿಸಿದೆ. ಅದಕ್ಕೆ ಹಿಂದಿನದಕ್ಕಿಂತಲೂ ಈ ಬಾರಿ ಹೆಚ್ಚಿನ ಬಹುಮತ ಬಂದಿದೆ. ವಿಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರಶ್ನೆ: ಪ್ರಿಯಾಂಕಾ ಗಾಂಧಿ ಕೆಲಸ ಮಾಡಿದ್ದಾರಾ? ನಿಮ್ಮ ವಿರುದ್ಧ ಬಂದ ಟೀಕೆಯನ್ನ ಹೇಗೆ ನಿಭಾಯಿಸಿದಿರಿ?
ಸ್ಮೃತಿ ಇರಾನಿ: ಪ್ರಿಯಾಂಕಾ ಅವರು ನನ್ನ ಕೆಲಸ ಮಾಡಿದ್ದಾರೆ. ನಾನು ಯಾವುದೇ ಟೀಕೆಯನ್ನ ಸಹಿಸಿಕೊಂಡಿಲ್ಲ.

ಪ್ರಶ್ನೆ: ನೀವು ಸಚಿವ ಸ್ಥಾನ ನಿರೀಕ್ಷಿಸುತ್ತಿದ್ದೀರಾ?
ಸ್ಮೃತಿ ಇರಾನಿ: ಅಮೇಥಿಯ ಸಂಸದೆ ಎಂದು ಹೆಮ್ಮೆ ಪಡಲು ಇಚ್ಛಿಸುತ್ತೇನೆ.

ಪ್ರಶ್ನೆ: ಇವಿಎಂ ಮೆಷೀನ್ ವಿರುದ್ಧ ಕೇಳಿದ ಆರೋಪಗಳ ಬಗ್ಗೆ ಏನಂತೀರಿ?
ಸ್ಮೃತಿ ಇರಾನಿ: ಇದು ಈ ರಾಜಕೀಯ ಸಂಘಟನೆಗಳ ದೌರ್ಬಲ್ಯವನ್ನು ಸೂಚಿಸುತ್ತದೆ.

ಪ್ರಶ್ನೆ: ಅಮೇಥಿಯಲ್ಲಿ 27 ಪಕ್ಷೇತರ ಅಭ್ಯರ್ಥಿಗಳನ್ನ ಉದ್ದೇಶಪೂರ್ವಕವಾಗಿ ನಿಲ್ಲಿಸಲಾಗಿತ್ತೇ?
ಸ್ಮೃತಿ ಇರಾನಿ: ಎಸ್​ಪಿ-ಬಿಎಸ್​ಪಿ ಅಷ್ಟೇ ಅಲ್ಲ ಈ 27 ಅಭ್ಯರ್ಥಿಗಳ ಬೆಂಬಲವೂ ಇವರಿಗೆ ಬೇಕಿತ್ತಾ? ಕಾಂಗ್ರೆಸ್ ಅಭ್ಯರ್ಥಿ ಅಷ್ಟು ದುರ್ಬಲವಾಗಿದ್ದರಾ? ಒಬ್ಬ ಸ್ಮೃತಿ ಇರಾನಿ ವಿರುದ್ಧ ಹೋರಾಡಲು ಅವರಿಗೆ ಎರಡು ರಾಜಕೀಯ ಪಕ್ಷಗಳು ಹಾಗೂ 27 ಅಭ್ಯರ್ಥಿಗಳು ಬೇಕಾಯಿತಾ? ನನಗೆ ಅಮೇಥಿಯಲ್ಲಿ ಯಾವುದೇ ಬೇರಿಲ್ಲ. ಅಮೇಥಿಯು ತಮ್ಮ ಭದ್ರಕೋಟೆ ಎಂದು ಹೇಳಿಕೊಳ್ಳುತ್ತಿದ್ದ ಕುಟುಂಬದವರಿಗೆ ಮಾತ್ರ ಇಲ್ಲಿ ಬೇರಿತ್ತು. ಈ ಕುಟುಂಬದ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲದಿರುವಾಗ ನಾನು ಹೇಗೆ 27 ಮಂದಿಯನ್ನು ಆಯ್ಕೆ ಮಾಡಲು ಸಾಧ್ಯ?

ಪ್ರಶ್ನೆ: ನೂತನ ಲೋಕಸಭೆಯ 76 ಸಂಸದೆಯರಲ್ಲಿ ಬಿಜೆಪಿಯವರೇ 34 ಮಂದಿ ಇದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಇದೆಯಾ?
ಸ್ಮೃತಿ ಇರಾನಿ: ಪ್ರಧಾನಮಂತ್ರಿ ಅವರು ವಿವಿಧ ನೀತಿಗಳನ್ನ ಘೋಷಿಸುತ್ತಾರೆ, ಹಾಗೂ ಅದಕ್ಕೆ ಬದ್ಧರಾಗಿರುತ್ತಾರೆ. ಮೀಸಲಾತಿ ನೀತಿ ವಿಚಾರದಲ್ಲಿ ಬಿಜೆಪಿಯ ನಿಲುವು ಸ್ಥಿರವಾಗಿದೆ. ಪಕ್ಷದೊಳಗೆ ಮೀಸಲಾತಿ ನೀಡಿದ್ದು ಬಿಜೆಪಿಯೇ ಮೊದಲು… ಮಹಿಳಾ ಅಭ್ಯುದಯದ ಬಗ್ಗೆ ಮಾತನಾಡುವ ಕಾಲ ಮುಗಿಯಿತು. ಇನ್ನೇನಿದ್ದರೂ ಮಹಿಳಾ ನೇತೃತ್ವದ ಅಭಿವೃದ್ಧಿಯು ದೇಶಕ್ಕೆ ಬೇಕಿದೆ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಇದು ಆಡಳಿತವನ್ನು ನೋಡುವ ದೃಷ್ಟಿಯಲ್ಲಿ ಆಗಿರುವ ಗಮನಾರ್ಹ ಬದಲಾವಣೆ ಎಂದನಿಸುತ್ತದೆ.

(ಸಂದರ್ಶಕರು: ಆನಂದ್ ನರಸಿಂಹನ್)
First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading