ಚಿಕ್ಕವರಿದ್ದಾಗ ನಮಗೆ ಸಿಡುಬು ಅಥವಾ ಸ್ಮಾಲ್ ಫಾಕ್ಸ್ (Smallpox) ಬರಬಾರದು ಎಂದು ವ್ಯಾಕ್ಸಿನ್ ಹಾಕಿಸಿದಾಗ ಅತ್ತು ಕರೆದು ಎಲ್ಲರನ್ನು ಬೈದುಕೊಂಡಿದ್ವಿ. ಈಗ ಈ ಮಂಕಿ ಪಾಕ್ಸ್ (Monkeypox) ವಿದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ (Monkeypox Outbreak) ಹಿನ್ನೆಲೆಯಲ್ಲಿ ನಮ್ಮಲ್ಲೂ ಹೆದರಿಕೆ ಹುಟ್ಟಿಕೊಂಡಿದೆ. ಆದರೆ ಚಿಕ್ಕಂದಿನಲ್ಲಿ ಅತ್ತೂ ಕರೆದು ಸಿಡುಬು ವ್ಯಾಕ್ಸಿನ್ ಹಾಕಿಸಿಕೊಂಡವರು ಹೆದರಬೇಕಿಲ್ಲ. ಚಿಕ್ಕಂದಿನಲ್ಲಿ ಹಾಕಿಸಿಕೊಂಡ ಸಿಡುಬಿನ ವ್ಯಾಕ್ಸಿನ್ ಮಂಕಿಪಾಕ್ಸ್ ಅನ್ನು ಶೇಕಡಾ 85ರಷ್ಟು ತಡೆಗಟ್ಟಲಿದೆ. ರೋಗನಿರೋಧಕ ಶಕ್ತಿ ಹೊಂದಿದೆ. ಇವೆರಡು ವೇರಿಯೋಲಾ ಗುಂಪಿಗೆ ಸೇರಿದ DNA ವೈರಸ್ಗಳು. DNA ವೈರಸ್ಗಳು ಕೊರೊನಾ (RNA) ವೈರಸ್ನಂತೆ ರೂಪಾಂತರವಾಗದ ಕಾರಣ ನಾವು ಹಿಂದೆ ಹಾಕಿಸಿಕೊಂಡ ಸಿಡುಬಿನ ವ್ಯಾಕ್ಸಿನ್ (Smallpox Vaccine) ಈ ರೋಗ ತಡೆಗಟ್ಟುವಲ್ಲಿ ಇನ್ನೂ ಪರಿಣಾಮಕಾರಿ ಶಕ್ತಿ ಹೊಂದಿದೆ ಎಂಬುದು ಖಚಿತಪಟ್ಟಿದೆ.
ನ್ಯೂಸ್ 18 ಕನ್ನಡದ ಜೊತೆ ಮಾಹಿತಿ ಹಂಚಿಕೊಂಡ ನಿಯೋನಾಟಾಲಜಿಸ್ಟ್ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಕ್ಲೌಡ್‌ನೈನ್ ಹಾಸ್ಪಿಟಲ್ಸ್‌ನಲ್ಲಿ ಶಿಶುವೈದ್ಯರಾಗಿರುವ ಡಾ. ಶಶಿಭೂಷಣ್ ಅವರು, ಸಿಡುಬಿನ ವೈರಸ್ ಮತ್ತು ಮಂಕಿಪಾಕ್ಸ್ ವೈರಸ್ ಎರಡೂ ಹತ್ತಿರದ ನೆಂಟರು. ಸಿಡುಬಿನ ಲಸಿಕೆ ಪಡೆದವರಲ್ಲಿ ಶೇಕಡಾ 85ರಷ್ಟು ಮಂಕಿಪಾಕ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈಗ ಸಿಡುಬಿನ ಲಸಿಕೆ ವಿತರಣೆ ಇಲ್ಲವೇಕೆ?
ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳಿಗೆ ಸಿಡುಬು ಲಸಿಕೆ ವಿತರಣೆ ನಡೆಸಲಾಗುತ್ತಿತ್ತು. ಯಾವುದೇ ರೋಗ ಸಂಪೂರ್ಣವಾಗಿ ಇಲ್ಲವಾದಾಗ ಅಥವಾ ಕಾಣಿಸಿಕೊಳ್ಳುವ ಸಾಧ್ಯತೆಯೇ ನಶಿಸಿದಾಗ ಇಂತಹ ಲಸಿಕೆ ವಿತರಣೆಯನ್ನು ನಿಲ್ಲಿಸಲಾಗುತ್ತದೆ. ಅದೇ ರೀತಿ 1978ರಲ್ಲಿ ಭಾರತದಲ್ಲಿ ಸಿಡುಬು ರೋಗ ಪತ್ತೆ ನಿಂತ ನಂತರ ಸಿಡುಬು ಲಸಿಕೆ ವಿತರಣೆಯನ್ನೂ ನಿಲ್ಲಿಸಲಾಗಿದೆ. ಹೀಗಾಗಿ 1978ಕ್ಕಿಂತಲೂ ಮುನ್ನ ಸಿಡುಬು ಲಸಿಕೆ ಪಡೆದವರು ಮಂಕಿಪಾಕ್ಸ್ಗೆ ತುತ್ತಾಗುವ ಸಾಧ್ಯತೆ ಇತರರಿಗಿಂತ ಕಡಿಮೆ ಎಂದು ಅವರು ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟಪಡಿಸಿದರು.
ಅಂದಹಾಗೆ ಡಾ. ಶಶಿಭೂಷಣ್ ಅವರು ಕೋವಿಡ್ 3ನೇ ಅಲೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ರಚಿಸಲಾಗಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಭಾರತದಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡರೆ?
ಒಂದುವೇಳೆ ಭಾರತದಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡರೆ ಏನು ಮಾಡಬೇಕು? ಯಾವ ಚಿಕಿತ್ಸೆ ನೀಡಬೇಕು? ಎಂಬ ಪ್ರಶ್ನೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಡುಬಿಗೆ ನೀಡುತ್ತಿದ್ದ ಚಿಕಿತ್ಸೆಯನ್ನೇ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಇದೇ ಚಿಕಿತ್ಸೆ ಖಚಿತವಲ್ಲ. ಮಂಕಿಪಾಕ್ಸ್ ಚಿಕಿತ್ಸೆಯ ನಿರ್ಣಯ ಸಂಪೂರ್ಣ ಕೇಂದ್ರ ಸರ್ಕಾರ ಕೈಗೊಳ್ಳಬೇಕಿದೆ.
ಇದನ್ನೂ ಓದಿ: Monkeypox: ತಮಿಳುನಾಡನ್ನೂ ಕಾಡುತ್ತಿದ್ಯಾ ಮಂಕಿಪಾಕ್ಸ್ ಆತಂಕ? ಹೈ ಅಲರ್ಟ್ ಘೋಷಿಸಿದ್ದೇಕೆ ಸರ್ಕಾರ?
ಜೊತೆಗೆ ಯುನೈಟೆಡ್ ಸ್ಟೇಟ್ಸ್ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಿಡುಬು ಲಸಿಕೆ ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿದೆ.
ಶೇಕಡಾ 85ರಷ್ಟು ಸಫಲವಾಗಿದೆ ಈ ಲಸಿಕೆ
ಮಂಕಿಪಾಕ್ಸ್ ವಿರುದ್ಧ ನಿರ್ದಿಷ್ಟವಾಗಿ ಇಂತಹುದೇ ಲಸಿಕೆ ಬಳಸಬೇಕು ಎಂದು ಈವರೆಗೂ ನಿರ್ಧರಿಸಿದವರಿಲ್ಲ. ಆದರೆ ಅಮೆರಿಕಾದಲ್ಲಿ ಜಿನ್ನಿಯೋಸ್ ಎಂದು ಕರೆಯಲ್ಪಡುವ ಬವೇರಿಯನ್ ನಾರ್ಡಿಕ್‌ನ ಶಾಟ್‌ನಂತಹ ಸಿಡುಬು ಲಸಿಕೆಗಳು ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಕನಿಷ್ಠ ಶೇಕಡಾ 85ರಷ್ಟು ಸಫಲವಾಗಿವೆ ಎಂದು ಅಧ್ಯಯನಗಳಲ್ಲಿ ದೃಢಪಟ್ಟಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಕೊಂಚ ನಿರಾಳ ಮೂಡಿಸಿದೆ ಈ ವಿಷಯ
ಒಂದು ಸಮಾಧಾನಕರ ಸಂಗತಿಯೆಂದರೆ ಮಂಕಿಪಾಕ್ಸ್ ಓರ್ವ್ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವುದಿಲ್ಲ. ಇದೀಗ ದೃಢಪಟ್ಟಿರುವ ಪ್ರಕಾರ ಚಿಕ್ಕವರಿರುವಾಗ ನಾವು ಪಡೆದಿದ್ದ ಸಿಡುಬು ಲಸಿಕೆ ಮಂಕಿ ಫಾಕ್ಸ್ ಬರುವುದನ್ನು ಶೇಕಡಾ 85ರಷ್ಟಾದರೂ ತಡೆಗಟ್ಟುತ್ತೆ ಎಂಬುದು ಕೊಂಚ ನಿರಾಳವನ್ನಂತೂ ಮೂಡಿಸಿದೆ. ಆದರೆ ಮೂಡಿರುವ ಇನ್ನೊಂದು ಆತಂಕ ಏನೆಂದರೆ 1978ರ ನಂತರದ ಪೀಳಿಗೆಗೆ ಸಿಡುಬಿನ ಲಸಿಕೆ ನೀಡಲಾಗಿಲ್ಲ!
ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?
ಮಂಕಿಫಾಕ್ಸ್ಗೆ ತುತ್ತಾಗಿರುವ ವ್ಯಕ್ತಿಯ ನಿಕಟ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ ಹರಡಬಹುದು. ಹೀಗಾಗಿ ನೆನಪಿಡಿ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಿರುವಂದತೂ ಅತ್ಯಗತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ