news18-kannada Updated:October 27, 2020, 9:28 AM IST
ನಿತೀಶ್ ಕುಮಾರ್.
ಬಿಹಾರ: ಚುನಾವಣಾ ರ‍್ಯಾಲಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಪ್ರತಿಭಟನಾಕಾರರು ಚಪ್ಪಲಿ ಎಸೆದಿರುವ ಘಟನೆ ಇಲ್ಲಿನ ಮುಜಫರ್ಪುರ ಜಿಲ್ಲೆಯ ಸಕ್ರಾದಲ್ಲಿ ನಡೆದಿದೆ. ಬಿಹಾರದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಲೆಡೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ರೀತಿ ಸೋಮವಾರ ಸಹ ಮುಜಫರ್ಪುರ ಜಿಲ್ಲೆಯ ಸಕ್ರಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ನಂತರ ತನ್ನ ಹೆಲಿಕಾಪ್ಟರ್ ಕಡೆಗೆ ತೆರಳಿದ್ದರು. ಆದರೆ, ಈ ವೇಳೆ ಕೆಲವು ಪ್ರತಿಭಟನಾಕಾರರು ನಿತೀಶ್ ಕುಮಾರ್ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ವರದಿಯಾಗಿದೆ.
ನಿತೀಶ್ ಕುಮಾರ್ ಹೆಲಿಕಾಫ್ಟರ್ ಕಡೆಗೆ ತೆರಳುತ್ತಿದ್ದಂತೆ ಪ್ರತಿಭಟನಾಕಾರರು ಹೆಲಿಕಾಫ್ಟರ್ ಕಡೆಗೆ ಗುರಿಮಾಡಿ ಚಪ್ಪಲಿಯನ್ನು ಎಸೆದಿದ್ದಾರೆ ಎಂದು ಮುಜಾಫರ್ಪುರ ಪೂರ್ವ ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ನ್ಯೂಸ್ 18 ಗೆ ತಿಳಿಸಿದ್ದಾರೆ. ಆದರೆ, ಪ್ರತಿಭಟನಾಕಾರರು ಎಸೆದ ಚಪ್ಪಲಿ ನಿತೀಶ್ ಕುಮಾರ್ ಅವರ ಮೇಲೆ ಬಿದ್ದಿಲ್ಲ. ಆದರೆ, ಈ ಚುನಾವಣಾ ರ‍್ಯಾಲಿಯಲ್ಲಿ ಅವಾಂತರಗಳನ್ನು ಸೃಷ್ಟಿಸಿದ ಮೂರು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಔರಂಗಾಬಾದ್ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿ ಯುವ ನಾಯಕ ತೇಜಸ್ವಿ ಯಾದವ್ ಮೇಲೆ ಇದೇ ರೀತಿ ಚಪ್ಪಲಿ ಎಸೆದಿದ್ದ. ಕೂದಲೆಳೆಯ ಅಂತರದಲ್ಲಿ ಚಪ್ಪಲಿ ತಮ್ಮ ಮೇಲೆ ಬೀಳುವುದರಿಂದ ತೇಜಸ್ವಿ ಯಾದವ್ ತಪ್ಪಿಸಿಕೊಂಡಿದ್ದರು.
ಇದನ್ನೂ ಓದಿ : ದೇಶದಲ್ಲಿ ಬಡತನ ಮತ್ತು ಕೊರೋನಾ ಸೋಂಕು ಹೆಚ್ಚಾಗಲು ಪ್ರಧಾನಿ ಮೋದಿಯೇ ಕಾರಣ; ರಾಮಲಿಂಗಾ ರೆಡ್ಡಿ ಆರೋಪ
ಆರ್ಜೆಡಿ ನಾಯಕನ ಬೆಂಬಲಿಗರು ಚಪ್ಪಲಿ ಎಸೆದವನನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಚಪ್ಪಲಿಯನ್ನು ತೇಜಸ್ವಿ ಯಾದವ್ ಕಡೆಗೆ ಬೀಸಲಾಗಿತ್ತು. ಬೃಹತ್ ಸಭೆ ಇದ್ದುದರಿಂದ ವ್ಯಕ್ತಿಯನ್ನು ಗುರುತಿಸಲಾಗಿರಲಿಲ್ಲ. ಆದರೆ, ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Published by:
MAshok Kumar
First published:
October 27, 2020, 9:28 AM IST