ಜಾರ್ಖಂಡ್: ನಿನ್ನೆ ಛತ್ತೀಸ್‌ಗಡ (Chhattisgarh) ರಾಜ್ಯದಲ್ಲಿ ಪೊಲೀಸರು ಮತ್ತು ನಕ್ಸಲರ (Naxals) ನಡುವಿನ ಕಾಳಗದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹುತಾತ್ಮರಾದ ಬೆನ್ನಲ್ಲೇ ಇಂದು ಜಾರ್ಖಂಡ್ ರಾಜ್ಯದಲ್ಲಿ ಆರು ಮಂದಿ ಮಾವೋವಾದಿಗಳನ್ನು (Maoists Arrested) ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್‌ನ (Jharkhand) ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸ್ವಘೋಷಿತ ಕಮಾಂಡರ್ ಸೇರಿದಂತೆ ಒಟ್ಟು 6 ಮಂದಿ ಮಾವೋವಾದಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಅನೇಕ ಸ್ಫೋಟಕಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಮಾವೋವಾದಿ ತಂಡದ ಸದಸ್ಯರು ತಮ್ಮ ಕಮಾಂಡರ್‌ಗೆ ಸ್ಫೋಟಕಗಳನ್ನು ತಲುಪಿಸಲು ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರ ತಂಡ ಬರಿಪೋಖಾರಿ ಗ್ರಾಮದ ರಸ್ತೆಯನ್ನು ಸುತ್ತುವರಿದು ತೀವ್ರ ತಪಾಸಣೆ ನಡೆಸಿತು. ಈ ವೇಳೆ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದ ಬೋಜ್ ಹೆಂಬ್ರಾಮ್ ಅಲಿಯಾಸ್ ಕಿಶುನ್ ಹೆಂಬ್ರಾಂನನ್ನು ತಪಾಸಣೆ ಮಾಡಿದಾಗ ಆತನ ಬಳಿ ಡಿಟೋನೇಟರ್ ಮತ್ತು ಜಿಲೆಟಿನ್ ಇತ್ತು. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ತಿಳಿಸಿದ್ದಾರೆ.
ಬಂಧಿತನಿಂದ ಮಾಹಿತಿ ಸಂಗ್ರಹ
ಬಂಧಿತ ಬೋಜ್ ಹೆಂಬ್ರಾಮ್ ಅಲಿಯಾಸ್ ಕಿಶುನ್ ಹೆಂಬ್ರಾಂನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದು, ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಟೊಂಟೊ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡಿಟೋನೇಟರ್‌ಗಳು ಮತ್ತು ಜಿಲೆಟಿನ್ ಸ್ಟಿಕ್ ಜೊತೆಗೆ ಇತರ ಮೂವರು ಮಾವೋವಾದಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Chhattisgarh Encounter: ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ; ಮೂವರು ಪೊಲೀಸರು ಹುತಾತ್ಮ!
ನಕ್ಸಲ್-ಪೊಲೀಸ್ ಕಾಳಗದಲ್ಲಿ 3 ಪೊಲೀಸರು ಹುತಾತ್ಮ
ರಾಯ್‌ಪುರ: ಇನ್ನು ನಿನ್ನೆ ಛತ್ತೀಸ್‌ಗಡ್ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.
ಶನಿವಾರ ಬೆಳಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಛತ್ತೀಸ್‌ಗಡ್ ರಾಜ್ಯದ ಸುಕ್ಮಾ ಜಿಲ್ಲೆಯ ಸಮೀಪದ ಜಗರ್ಗುಂಡ ಮತ್ತು ಕುಂದೇಡ್ ಗ್ರಾಮಗಳಲ್ಲಿ ನಕ್ಸಲರು ಇದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಸ್ಥಳಕ್ಕೆ ದಾಳಿ ಮಾಡಿದ್ದರು. ಈ ವೇಳೆ ನಕ್ಸಲರು ಮತ್ತು ಛತ್ತೀಸ್‌ಗಡ ಪೊಲೀಸರ ಜಿಲ್ಲಾ ಮೀಸಲು ಕಾವಲು (ಡಿಆರ್‌ಜಿ) ಪಡೆ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಡಿಆರ್‌ಜಿ ತಂಡವು ನಕ್ಸಲರ ಶೋಧ ಕಾರ್ಯಾಚರಣೆ ನಡೆಸಿದ್ದ ವೇಳೆ ಮುಖಾಮುಖಿ ಉಂಟಾಗಿತ್ತು. ಹೀಗಾಗಿ ಪರಸ್ಪರ ಗುಂಡಿನ ದಾಳಿ ನಡೆದಿದೆ ಎಂದು ಐಜಿಪಿ ಸುಂದರ್ ರಾಜ್ ಪಿ ತಿಳಿಸಿದ್ದಾರೆ.
ಇದನ್ನೂ ಓದಿ: Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?
ಖಚಿತ ಮಾಹಿತಿ ಮೇರೆಗೆ ದಾಳಿ
ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿರುವ ಪೊಲೀಸ್ ಐಜಿ, ರಾಜಧಾನಿ ರಾಯಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಗರ್ಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಆರ್‌ಜಿ ತಂಡವು ನಕ್ಸಲರು ಕಾರ್ಯಾಚರಿಸುತ್ತಿರುವ ಸುಳಿವು ಸಿಕ್ಕಿತ್ತು. ಇದರ ಖಚಿತ ಮಾಹಿತಿಯ ಮೇರೆಗೆ ನಮ್ಮ ತಂಡ ಪತ್ತೆ ಕಾರ್ಯಾಚರಣೆ ನಡೆಸಿತ್ತು ಎಂದು ತಿಳಿಸಿದ್ದಾರೆ.
ಹುತಾತ್ಮರಾಗಿರುವ ಭದ್ರತಾ ಪಡೆಯ ಸಿಬ್ಬಂದಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಾಮುರಾಮ್ ನಾಗ್ (36), ಕಾನ್‌ಸ್ಟೇಬಲ್‌ಗಳಾದ ಕುಂಜಾಮ್ ಜೋಗ (33) ಮತ್ತು ವಂಜಮ್ ಭೀಮ (31) ಎಂದು ತಿಳಿದು ಬಂದಿದ್ದು, ಗುಂಡಿನ ಕಾಳಗದಲ್ಲಿ ಜೀವ ಕಳೆದುಕೊಂಡ ನತದೃಷ್ಟ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ