ನವದೆಹಲಿ(ಫೆ.26): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಪರ-ವಿರೋಧಿ ಗುಂಪುಗಳಿಂದ ಹಿಂಸಾಚಾರ ಸಂಭವಿಸಿದ್ದ ದೆಹಯಲ್ಲೀಗ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಇಂದು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಅಜಿತ್ ದೋವಲ್ ಸುದ್ದಿಗಾರರೊಂದಿಗೆ ಮಾತಾಡಿದರು. ಈ ವೇಳೆ ದೆಹಲಿ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ದೆಹಲಿ ಪರಿಸ್ಥಿತಿ ಸದ್ಯ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಇನ್ನು, ಗಲಭೆ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿ ಹತೋಟಿಯಲ್ಲಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸದ್ಯ ದೆಹಲಿ ಜನತೆ ನಿರಾಳರಾಗಿದ್ದಾರೆ. ನಮಗೆ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹಾಗಾಗಿ ದೆಹಲಿಗರು ಆತಂಕಕ್ಕೀಡಾಗಬೇಕಾದ ಅವಶ್ಯಕತೆ ಇಲ್ಲ ಎಂದರು.
ಈ ಮನ್ನ ಅಜಿತ್ ದೋವಲ್ ಸೀಲಾಂಪುರದ ಡಿಸಿಪಿ ಜತೆ ಸಭೆ ನಡೆಸಿದರು. ನಂತರ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು. ಇಲ್ಲಿನ ಜನರ ಸಮಸ್ಯೆ ಆಲಿಸಿ ಎಂದು ಪೊಲೀಸರಿಗೆ ಸೂಚಿಸಿದರು.
ಇದನ್ನೂ ಓದಿ: ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ; ಸುಪ್ರೀಂಕೋರ್ಟ್ ಆದೇಶ
ಇನ್ನು ದೆಹಲಿ ಹಿಂಸಾಚಾರ ನಿಯಂತ್ರಣದ ಹೊಣೆ ಕೇಂದ್ರ ಸರ್ಕಾರ ಅಜಿತ್ ದೋವಲ್ಗೆ ನೀಡಿದೆ. ಅದರಂತೆ ಕಾರ್ಯಾಚರಣೆಗೆ ಇಳಿದಿರುವ ದೋವಲ್ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಈಶಾನ್ಯ ದೆಹಲಿಯ ಜಫ್ರಾಬಾದ್, ಸೀಲಂಪುರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆಯಿಂದ ದೆಹಲಿಯಲ್ಲಿ ಹಿಂಸಾಚಾರ ಹೆಚ್ಚುತ್ತಲ್ಲೇ ಇದೆ. ಈ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ಈಶಾನ್ಯ ದೆಹಲಿಯ ಹಲವೆಡೆ ಜಾರಿಯಲ್ಲಿದ್ದು, ಹಿಂಸಾಚಾರ ತಡೆಗಟ್ಟಲು ಕಠಿಣ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ ಸಿಎಎ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ